(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಏ.09: ನಮಗೆ ಉಸಿರಾಡಲು ಆಕ್ಸಿಜನ್ ನೀಡುತ್ತವೆ, ಹಚ್ಚ ಹಸಿರಿನ ವಾತಾವರಣ ರೂಪಿಸುತ್ತವೆ. ನೆರಳು ನೀಡುತ್ತವೆ ಎಂದು ಗಿಡಗಳನ್ನು ಬೆಳೆಸುತ್ತಿರುವ ಇಂದಿನ ದಿನಗಳಲ್ಲಿ ನಗರದ ರಾಮಯ್ಯ ಕಾಲೋನಿಯಲ್ಲಿನ ಉದ್ಯಾನವನದಲ್ಲಿ ಬೆಳೆಸಿದ್ದ ಹತ್ತು ವರ್ಷಗಳ ಹಳೆಯದಾದ 10 ಗಿಡಗಳನ್ನು ಸಾರ್ವಜನಿಕರೇ ಕಡಿದು ಹಾಕಿಸಿರುವುದು ವಿಪರ್ಯಾಸದ ಸಂಗತಿಯಾಗಿದೆ.
ಈ ಕೃತ್ಯ ನಿನ್ನೆ ನಡೆದಿದೆ. ಗಿಡಗಳಿಂದ ಉದುರುವ ಎಲೆಗಳಿಂದ ಕಸ ಹೆಚ್ಚಿದೆ. ಇದರಿಂದ ಸೊಳ್ಳೆಗಳ ಕಾಟ ಶುರುವಾಗಿದೆ ಎಂದು ಈ ಕಾಲೋನಿಯ ಕೆಲ ಜನರು ಪಾರ್ಕಿನಲ್ಲಿನ ಗಿಡಗಳನ್ನು ಕಡಿಸಿದ್ದಾರೆ. ಸ್ಥಳೀಯ ಕೆಲ ಪರಿಸರ ಪ್ರೇಮಿಗಳು ಇದಕ್ಕೆ ಅಡ್ಡಿ ಪಡಿಸಲು ಹೋದರೆ. ವಿಡಿಯೋ ಚಿತ್ರಣ ತೆಗೆದರೆ. ಅವರಿಗೆ ಗಿಡಗಳನ್ನು ಕಡಿಸಲು ಮುಂದಾದದವರು ಥಳಿಸಿದ್ದಾರಂತೆ.
ಮರಗಳಿಂದ ಸಮಸ್ಯೆ ಇದ್ದರೆ ಈ ಬಗ್ಗೆ ಬರೆದು ಮರಗಳನ್ನು ಕಡಿಯಲು ಅರಣ್ಯ ಇಲಾಖೆಯಿಂದ ಅನುಮತಿಯನ್ನು ಸಹ ಪಡೆದಿಲ್ಲ. ಇದು ಪಾಲಿಕೆಗೆ ಸೇರಿದ ಪಾರ್ಕ್. ಪಾಲಿಕೆಗೂ ಮಾಹಿತಿ ಇಲ್ಲ. ಇದರ ಹಿಂದೆ ಟಿಂಬರ್ ಮರ್ಚೆಂಟ್ ಗಳ ಲಾಬಿ ಇದೆಂದು ಹೇಳಲಾಗುತ್ತಿದೆ.
ಒಟ್ಟಾರೆ ಅನುಮತಿ ಇಲ್ಲದೆ ಮರ ಕಡಿದವರನ್ನು, ಕಡಿಸಿದವರನ್ನು ಜೈಲಿಗೆ ಕಳುಸಿದರೆ ಇಂತಹ ಕೃತ್ಯ ಮತ್ತೊಮ್ಮೆ ಮರುಕಳಿಸದಿರಬಹುದು.
ಕ್ರಮಕ್ಕೆ ಸೂಚನೆ
ಮರಗಳನ್ನು ಕಡಿದಿರುವ ಬಗ್ಗೆ ಅರಣ್ಯ ಇಲಾಖೆಯಿಂದ ದೂರು ದಾಖಲಿಸಿದೆ. ಕಡಿದ ವ್ಯಕ್ತಿಗಳ ವಿಚಾರಣೆ ನಡೆಸಿ ಕಡಿಸದವರ ಮೇಲೆ ಕ್ರಮ ತೆಗೆದುಕೊಳ್ಳಲಿದೆ.
ಎಂ.ಎನ್.ರುದ್ರೇಶ್
ಆಯುಕ್ತರು ಮಹಾನಗರ ಪಾಲಿಕೆ ಬಳ್ಳಾರಿ.