ರಾಮಮಂದಿರ ಶಿಲಾನ್ಯಾಸಕ್ಕೆ ಸಕಲ ಸಿದ್ಧತೆ

ಅಯೋಧ್ಯೆ, ಆ. ೨- ಲಕ್ಷಾಂತರ ರಾಮ ಭಕ್ತರು ಹಾಗೂ ಹಿಂದೂಗಳ ಬಹುದಿನಗಳ ಕನಸಾದ ರಾಮಮಂದಿರ ನಿರ್ಮಾಣಕ್ಕೆ ಕಾಲಸನ್ನಿಹಿತವಾಗಿದ್ದು, ಇಡೀ ಅಯೋಧ್ಯೆ ನವ ವಧುವಿನಂತೆ ಶೃಂಗಾರ ಗೊಂಡಿದ್ದು, ರಾಮನಾಮ ಜಪಕ್ಕೆ ಅಂತಿಮ ಸಿದ್ಧತೆಗಳು ಭರದಿಂದ ಸಾಗಿದೆ.
ಉತ್ತರಪ್ರದೇಶದ ಅಯೋಧ್ಯೆಯಲ್ಲಿ ಮಂದಿರ ನಿರ್ಮಾಣಕ್ಕಾಗಿ ಇದೇ 5 ರಂದು ಪ್ರಧಾನಿ ನರೇಂದ್ರ ಮೋದಿಯವರು ಭೂಮಿ ಪೂಜೆ ನೆರವೇರಿಸುವ ಹಿನ್ನೆಲೆಯಲ್ಲಿ ವಿದ್ಯುತ್ ದೀಪ ಅಲಂಕಾರ ಸೇರಿದಂತೆ ಇ‌ಡೀ ಅಯೋಧ್ಯೆ ಕೇಸರಿಮಯವಾಗಿ ಕಂಗೊಳಿಸುತ್ತಿದೆ.
ರಾಮಮಂದಿರ ಭೂಮಿ ಪೂಜೆ ಹಿನ್ನೆಲೆಯಲ್ಲಿ ಇಂದಿನಿಂದ ಭೂಮಿ ಪೂಜೆ ಕಾರ್ಯಕ್ರಮ ಮುಗಿಯುವ ತನಕ ಅಯೋಧ್ಯೆಯನ್ನು ಸಂಪೂರ್ಣ ಲಾಕ್ ಡೌನ್ ಮಾಡಲಾಗಿದ್ದು, ಯಾವುದೇ ಚಟುವಟಿಕೆಗಳಿಗೆ ಅವಕಾಶ ನಿರ್ಬಂಧಿಸಲಾಗಿದೆ. ಎಲ್ಲೆಡೆ ಬಿಗಿ ಭದ್ರತೆ ಪೊಲೀಸರ ಸರ್ಪಗಾವಲು ಹಾಕಲಾಗಿದೆ.
ರಾಮಮಂದಿರ ನಿರ್ಮಾಣದ ಹಿನ್ನೆಲೆಯಲ್ಲಿ ದೇಶದ ಹಲವು ಭಾಗಗಳಿಂದ ಸಾಧು-ಸಂತರು ಗಣ್ಯರು, ರಾಜಕೀಯ ನಾಯಕರನ್ನು ಆಹ್ವಾನಿಸುವ ಜೊತೆಯಲ್ಲಿ ವಿವಿಧ ಕ್ಷೇತ್ರಗಳಿಂದ ತೀರ್ಥವನ್ನು ತರಲಾಗುತ್ತಿದೆ. ಇಡೀ ದೇಶಾದ್ಯಂತ ಆಗಸ್ಟ್ 5ರ ಕ್ಷಣಕ್ಕಾಗಿ ಎದುರು ನೋಡುವಂತಾಗಿದೆ. ಅಯೋಧ್ಯೆಯನ್ನು ಸಂಪೂರ್ಣವಾಗಿ ಅಲಂಕೃತಗೊಳಿಸಲಾಗಿದೆ.
ರಾಮಮಂದಿರ ಭೂಮಿ ಪೂಜೆ ಹಿನ್ನೆಲೆಯಲ್ಲಿ ಭಯೋತ್ಪಾದನೆ ದಾಳಿ ನಡೆಯಬಹುದು ಎನ್ನುವ ಗುಪ್ತಚರ ಮಾಹಿತಿ ಹಿನ್ನೆಲೆಯಲ್ಲಿ ಅಯೋಧ್ಯೆ, ಉತ್ತರಪ್ರದೇಶ, ಜಮ್ಮು-ಕಾಶ್ಮೀರ, ದೆಹಲಿ ಸೇರಿದಂತೆ ದೇಶದ ಪ್ರಮುಖ ಭಾಗದಲ್ಲಿ ಸ್ವಾತಂತ್ರ್ಯ ದಿನಾಚರಣೆ ತನಕ ಕಟ್ಟೆಚ್ಚರ ವಹಿಸುವಂತೆ ಸೂಚಿಸಲಾಗಿದೆ.
ಈ ನಡುವೆ ಅಯೋಧ್ಯೆಯನ್ನು ಸಂಪೂರ್ಣವಾಗಿ ಶೃಂಗಾರ ಮಾಡುತ್ತಿದ್ದು, ರಸ್ತೆ ಇಕ್ಕೆಲುಗಳಿಂದ ಹಿಡಿದು ಗಂಗಾ ನದಿಯ ತೀರದ ಪ್ರಮುಖ ಕಟ್ಟಡಗಳು ಸೇರಿದಂತೆ ಎಲ್ಲೆಲ್ಲೂ ರಾಮನ ಚಿತ್ರಗಳನ್ನು ಬಿಡಿಸಿ, ಇ‌ಡೀ ಅಯೋಧ್ಯೆಯನ್ನು ವರ್ಣಮಯವಾಗುವಂತೆ ಮಾಡಲಾಗಿದೆ.
ರಾತ್ರಿಯ ಬೆಳಕಿನಲ್ಲಿ ಅಯೋಧ್ಯೆ ಮಿರ ಮಿರ ಮಿಂಚುವಂತೆ ಕಂಗೊಳಿಸುತ್ತಿದೆ. ಇದರಿಂದಾಗಿ ಇಡೀ ಅಯೋಧ್ಯೆ ಸುಣ್ಣ ಬಣ್ಣಗಳಿಂದ ಶೃಂಗಾರ ಗೊಂಡಿವೆ.
ಆಗಸ್ಟ್ 5 ರಂದು ಬೆಳಿಗ್ಗೆ 11 ಗಂಟೆಗೆ ಭೂಮಿ ಪೂಜೆಯನ್ನು ದೇಶದ ಆಯ್ದ 200 ಗಣ್ಯರ ಸಮ್ಮುಖದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಭೂಮಿ ಪೂಜೆ ನೆರವೇರಿಸಲಿದ್ದಾರೆ.ಈ ಕ್ಷಣದ ಹಿನ್ನೆಲೆಯಲ್ಲಿ ಎಲ್ಲೆಲ್ಲೂ ಕಟ್ಟೆಚ್ಚರ ವಹಿಸಲಾಗಿದೆ.
ಸರಿಸುಮಾರು 1 ಗಂಟೆಗಳ ಕಾಲ ಭೂಮಿ ಪೂಜೆಯ ಧಾರ್ಮಿಕ ಕಾರ್ಯಕ್ರಮ ನಡೆಯಲಿದ್ದು, ಆ ಬಳಿಕ ಪ್ರಧಾನಿ ಭಾಷಣ ಮಾಡಲಿದ್ದಾರೆ. ಗಣ್ಯರಿಗೆ ತಲಾ 50 ಮಂದಿಗೆ ಒಂದು ಬ್ಲಾಕ್ ನಂತೆ ನಾಲ್ಕೈದು ಕ‌ಡೆ ವ್ಯವಸ್ಥೆ ಮಾಡಲಾಗಿದೆ. ಈ ಐತಿಹಾಸಿಕ ಕಾರ್ಯಕ್ರಮಕ್ಕೆ ರಾಜಕೀಯ ನಾಯಕರಲ್ಲದೆ ಧಾರ್ಮಿಕ ನಾಯಕರು, ಸಾಧುಸಂತರು, ಗಣ್ಯಾತಿಗಣ್ಯರು ಪಾಲ್ಗೊಳ್ಳಲಿದ್ದಾರೆ.
ಮಾಜಿ ಉಪಪ್ರಧಾನಿ ಹಾಗೂ ಬಿಜೆಪಿ ಹಿರಿಯ ನಾಯಕ ಮುರಳಿ ಮನೋಹರ್ ಜೋಷಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಹ್ವಾನಿಸಿಲ್ಲ. ಆದರೆ ಈ ಇಬ್ಬರು ನಾಯಕರು ವಿಡೀಯೋ ಸಂವಾದ ಮೂಲಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಸೀಮಿತ ಗಣ್ಯರಿಗೆ ಅಷ್ಟೇ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅವಕಾಶ ಮಾಡಿಕೊಡಲಾಗಿದ್ದು, ಕಾರ್ಯಕ್ರಮದ ನೇರ ಪ್ರಸಾರದ ದೇಶದ ಮೂಲೆ ಮೂಲೆಗಳಲ್ಲಿ ದೊಡ್ಡ ಪರದೆಗಳನ್ನು ಹಾಕಿ, ಬಿತ್ತರಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ.
ದಕ್ಷಿಣ ಕನ್ನಡ ವಿಶೇಷ ಪೂಜೆ
ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆ ನಡೆಯುವ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮನೆ ಮನೆಯಲ್ಲಿ ದೀಪ ಹಚ್ಚುವುದು ಸೇರಿದಂತೆ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಸುದರ್ಶನ್ ಮೂಡುಬಿದರೆ ತಿಳಿಸಿದ್ದಾರೆ.
ರಾಮನ ಜಪ, ಪಠಣ, ಮಠ ಮಂದಿರಗಳಲ್ಲಿ ವಿಶೇಷ ಪೂಜೆ, ಪ್ರಾರ್ಥನೆ ನಡೆಯಲಿದೆ.
ಮಹಾರಾಷ್ಟ್ರ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ಸಿದ್ಧತೆಗಳು ಭರದಿಂದ ಸಾಗಿದೆ.

ಪರಿಶೀಲನೆ
ರಾಮಮಂದಿರ ಭೂಮಿ ಪೂಜೆಯ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಸ್ಥಳಕ್ಕೆ ಭೇಟಿ ನೀಡಿ ಭದ್ರತೆ, ಸಿದ್ಧತೆ ಸೇರಿದಂತೆ ಹಲವು ವಿಷಯಗಳನ್ನು ಪರಿಶೀಲಿಸಿದರು.
ಭೂಮಿ ಪೂಜೆ ಹಿನ್ನೆಲೆಯಲ್ಲಿ ಇಡೀ ಅಯೋಧ್ಯೆಯನ್ನು ಬಣ್ಣ ಬಣ್ಣ ದೀಪಗಳಿಂದ ಸಂಪೂರ್ಣವಾಗಿ ಅಲಂಕೃತ ಮಾ‌ಡಲಾಗುವುದು. ಎಲ್ಲಾ ಸಿದ್ಧತೆಗಳನ್ನು ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಸೇರಿದಂತೆ ಹಲವು ಗಣ್ಯರು ನೇತೃತ್ವದಲ್ಲಿ ಪರಿಶೀಲಿಸಿದರು.

ಹಲವಡೆಯಿಂದ ಮಣ್ಣು ಮತ್ತು ತೀರ್ಥ
ರಾಮಮಂದಿರ ಭೂಮಿ ಪೂಜೆ ಹಿನ್ನೆಲೆಯಲ್ಲಿ ದೇಶದ ಪ್ರಮುಖ ಸ್ಥಳಗಳಿಂದ ಮಣ್ಣು ಮತ್ತು ತೀರ್ಥವನ್ನು ತರುವ ಕೆಲಸ ಈಗಾಗಲೇ ಆರಂಭವಾಗಿದ್ದು, ರಾಮಮಂದಿರ ತೀರ್ಥ ಕ್ಷೇತ್ರ ಟ್ರಸ್ಟ್ ಕಾರ್ಯಕ್ರಮಕ್ಕಾಗಿ ಅಂತಿಮ ಸಿದ್ಧತೆಗಳಲ್ಲಿ ನಿರತರಾಗಿದ್ದಾರೆ.