ರಾಮಮಂದಿರ ಲೋಕಾರ್ಪಣೆ: ತಾಲೋಕಿನಾದ್ಯಂತ ಸಂಭ್ರಮಿಸಿದ ರಾಮಭಕ್ತರು

ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಜ.23: ಅಯೋಧ್ಯೆಯಲ್ಲಿನ ಶ್ರೀ ರಾಮ ಮಂದಿರದ ಲೋಕಾರ್ಪಣೆ ಮತ್ತು ಬಾಲರಾಮ ವಿಗ್ರಹದ ಪ್ರಾಣ ಪ್ರತಿಷ್ಠಾಪನೆಯ ಅಂಗವಾಗಿ ಇಂದು ತಾಲೂಕಿನಾದ್ಯಂತ ಗ್ರಾಮ ಗ್ರಾಮಗಳಲ್ಲಿ ವಿಶೇಷ ಪೂಜೆ, ಅನ್ನಸಂತರ್ಪಣೆ ಮತ್ತು ಪ್ರಸಾದ ವಿನಿಯೋಗ ಕಾರ್ಯಕ್ರಮಗಳು ನಡೆದವು.
ತಾಲೂಕಿನ ಕಿಕ್ಕೇರಿ, ಸಂತೇಬಾಚಹಳ್ಳಿ, ರಂಗನಾಥಪುರ ಕ್ರಾಸ್, ಹೊಸಹೊಳಲು, ಹರಿಹರಪುರ, ಶೀಳನೆರೆ, ಬೂಕನಕೆರೆ ಸೇರಿದಂತೆ ಎಲ್ಲಾ ಪ್ರಮುಖ ಗ್ರಾಮ ಕೇಂದ್ರಗಳಲ್ಲಿಯೂ ಶ್ರೀ ರಾಮನ ಭಾವಚಿತ್ರಕ್ಕೆ ಅಭಿಷೇಕ ಮಾಡಿ ವಿಶೇಷ ಪೂಜೆ ಸಲ್ಲಿಸಿದ ರಾಮ ಭಕ್ತರು ಜೈ ಶ್ರೀರಾಮ್ ಘೋಷಣೆಗಳನ್ನು ಕೂಗಿ ಸಂಭ್ರಮಿಸಿದರು. ಬಹುತೇಕ ಮನೆ ಮನಗಳಲ್ಲಿ ರಾಮಭಕ್ತಿ ಉಕ್ಕಿ ಹರಿದಿತ್ತು. ಮನೆಗಳ ಮುಂದೆ ರಂಗೋಲಿ ಬಿಡಿಸಿ ತೋರಣಗಳನ್ನು ಕಟ್ಟಿ ಭಕ್ತರು ಹಬ್ಬದ ವಾತಾವರಣದಲ್ಲಿ ಮುಳುಗಿದ್ದರು.
ಪಟ್ಟಣದ ಶ್ರವಣಬೆಳಗೊಳ ರಸ್ತೆಯಲ್ಲಿರುವ ಬೃಂದಾವನ ಹನುಮಂತರಾಯಸ್ವಾಮಿ ದೇವಾಲಯದಲ್ಲಿ ಸೀತಾರಾಮ, ಲಕ್ಷ್ಮಣ ಹಾಗೂ ಆಂಜನೇಯಸ್ವಾಮಿಯ ಉತ್ಸವ ಮೂರ್ತಿಯ ಪ್ರಾಣ ಪ್ರತಿಷ್ಟಾನೆಯನ್ನು ಪಾರಂಪರಿಕ ವಿಧಿ ವಿಧಾನಗಳ ಅನುಸಾರ ವಿವಿಧ ಹೋಮ ಹವನಗಳೊಂದಿಗೆ ಮಹಾಮಂಗಳಾರತಿ ಮತ್ತು ಪ್ರಸಾದ ವಿನಿಯೋಗ ಕಾರ್ಯಕ್ರಮಗಳು ನಡೆದವು.
ಪಟ್ಟಣದ ಹೇಮಾವತಿ ವೃತ್ತ, ಟಿ.ಬಿ.ವೃತ್ತ, ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ನಿಲ್ದಾಣ ಮತ್ತು ಹಳೇ ಬಸ್ ನಿಲ್ದಾಣದ ಮುಂದಿನ ಎಲ್ಲಾ ಪ್ರಮುಖ ರಸ್ತೆಗಳು ಮತ್ತು ವೃತ್ತಗಳಲ್ಲಿ ಶ್ರೀರಾಮ ಭಕ್ತರು ಶ್ರೀರಾಮನ ಭಾವಚಿತ್ರವನ್ನು ಅಲಂಕರಿಸಿ ಪೂಜೆ ಸಲ್ಲಿಸುವ ಮೂಲಕ ಅಯೋಧ್ಯೆಯ ದೇಗುಲದ ಲೋಕಾರ್ಪಣೆ ದಿನವನ್ನು ಸಂಭ್ರಮಿಸಿದರು. ಶ್ರೀರಾಮ ಭಾವಚಿತ್ರ ವಿತರಣೆ, ಕೊಸಂಬರಿ, ಪಾನಕ, ಮಜ್ಜಿಗೆ ವಿತರಣೆ ಸೇರಿದಂತೆ ಒಂದೊಂದು ಕಡೆಯಲ್ಲಿಯೂ ಪ್ರಸಾದ ವಿತರಣೆ ಮತ್ತು ಅನ್ನ ಸಂತರ್ಪಣೆ ನಡೆಸಲಾಯಿತು. ಕೆ.ಆರ್.ಪೇಟೆ ಪಟ್ಟಣದ ಸಂಪೂರ್ಣ ಶ್ರೀ ರಾಮ ಮಯವಾಗಿತ್ತು. ಪಕ್ಷ ಬೇದ ಮರೆತು ರಾಮಭಕ್ತರು ಒಗ್ಗೂಡಿ ಜೈ ಶ್ರೀರಾಮ್ ಘೋಷಣೆಗಳನ್ನು ಕೂಗಿ ಜಯಕಾರ ಹಾಕುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಪಟ್ಟಣದ ಹೊರವಲಯದಲ್ಲಿ ತಾಲ್ಲೂಕು ಹೆಚ್.ಡಿ.ದೇವೇಗೌಡ ಅಭಿಮಾನಿ ಬಳಗದ ವತಿಯಿಂದ ನಡೆದ ಶ್ರೀರಾಮ ವಿಶೇಷ ಪೂಜೆಯಲ್ಲಿ ಶಾಸಕ ಹೆಚ್.ಟಿ.ಮಂಜು, ಮನ್ ಮುಲ್ ನಿರ್ದೇಶಕ ಡಾಲು ರವಿ ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಜೆಡಿಎಸ್ ಬೆಂಬಲಿಗರು ಭಾಗವಹಿಸಿದ್ದರು. ಶ್ರೀ ರಾಮಮಂದಿರದ ಪುನರ್ ನಿಮಾಣ ಮತ್ತು ರಾಮಲಲ್ಲಾ ಮೂರ್ತಿಯ ಪ್ರತಿಷ್ಟಾಪನೆ ಸಮಸ್ತ ಭಾರತೀಯರ ಸ್ವಾಭಿಮಾನದ ಸಂಕೇತವಾಗಿದೆ. ಕಳೆದ 500 ವರ್ಷಗಳ ಹೋರಾಟಕ್ಕೆ ಇಂದು ಜಯ ಸಿಕ್ಕಿದೆ. ಭಾರತೀಯ ಸಂಸ್ಕೃತಿಯ ಪುನರುತ್ತಾನಕ್ಕೆ ಇಂದು ನಾಂದಿಯಾಗಿದ್ದು ಸಮಸ್ತ ಜಗತ್ತು ಮುಂದಿನ ದಿನಗಳಲ್ಲಿ ಭಾರತೀಯರ ಆಧ್ಯಾತ್ಮಕ ಚಿಂತನೆಯತ್ತ ಆಲೋಚಿಸುತ್ತದೆ ಎಂದು ಶಾಸಕ ಹೆಚ್.ಟಿ.ಮಂಜು ಅಭಿಪ್ರಾಯಪಟ್ಟರು.
ಪಟ್ಟಣದ ವಿವಿದೆಡೆ ನಡೆದ ಅಯೋದ್ಯೆಯ ಸಂಭ್ರಮಾಚರಣಾ ಕಾರ್ಯಕ್ರಮದಲ್ಲಿ ತಾಲೂಕು ಜೆಡಿಎಸ್ ಅಧ್ಯಕ್ಷ ಎ.ಎನ್.ಜಾನಕೀರಾಂ, ಆರ್.ಟಿ.ಓ ಮಲ್ಲಿಕಾರ್ಜುನ್, ಪುರಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ಹೆಚ್.ಆರ್.ಲೋಕೇಶ್, ಪುರಸಭಾ ಸದಸ್ಯ ಕೆ.ಎಸ್.ಸಂತೋಷ್ ಕುಮಾರ್, ಪುರಸಭಾ ಮಾಜಿ ಸದಸ್ಯ ನಂದೀಶ್, ಜಿಲ್ಲಾ ಜೆಡಿಎಸ್ ಉಪಾಧ್ಯಕ್ಷ ಅಗ್ರಹಾರಬಾಚಹಳ್ಳಿ ನಾಗೇಶ್, ಶ್ರೀರಾಮಭಕ್ತ ಸಮಿತಿಯ ಹೆಚ್.ವರುಣಗೌಡ, ಪ್ರಭಾಕರ, ಚಂದ್ರ, ಶ್ರೀನಿವಾಸ್ ಮತ್ತಣ್ಣ, ಪ್ರಮೋದ್, ಅಭಿ, ಚೇತನ್, ಶಶಾಂಕ್ ಸೇರಿದಂತೆ ನೂರಾರು ಶ್ರೀರಾಮ ಭಕ್ತರು ಪ್ರಸಾದ ವಿತರಣೆ ಮತ್ತಿತರ ಕಾರ್ಯದಲ್ಲಿ ನಿರತರಾಗಿ ಶ್ರೀರಾಮನಿಗೆ ಭಕ್ತಿ ಸಮರ್ಪಣೆ ಮಾಡಿದರು.