ರಾಮಮಂದಿರ ಭಾರತದ ಸಂಸ್ಕೃತಿಯ ಪ್ರತೀಕ

ಕೋಲಾರ,ಜ,೨೫- ಅಯೋಧ್ಯೆಯಲ್ಲಿ ನಡೆದ ಶ್ರೀರಾಮ ಮಂದಿರ ಲೋಕಾರ್ಪಣೆ ಹಾಗೂ ಶ್ರೀರಾಮಲಲ್ಲಾ ಪ್ರಾಣ ಪ್ರತಿಷ್ಠಾಪನಾ ಸಮಾರಂಭದಲ್ಲಿ ಕೋಲಾರ ತಾಲೂಕಿನ ನಾಗಲಾಪುರ ಸಂಸ್ಥಾನ ಮಠದ ಪೀಠಾಧಿಪತಿ ಶ್ರೀ ತೇಜೇಶಲಿಂಗ ಶಿವಾಚಾರ್ಯ ಸ್ವಾಮೀಜಿ ಭಾಗವಹಿಸಿದ್ದರು.
ಈ ಕುರಿತು ಮಾತನಾಡಿರುವ ಅವರು, ೫೦೦ ವರ್ಷಗಳ ನಂತರ ನಮಗೆ ಪುಣ್ಯದ ದಿನ ದೊರೆತಿದ್ದು, ಶ್ರೀರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆಯ ಶುಭ ಕಾರ್ಯದಲ್ಲಿ ಪಾಲ್ಗೊಂಡಿದ್ದಕ್ಕೆ ಹೆಚ್ಚಿನ ಸಂತಸವಾಗಿರುವುದಾಗಿ ತಿಳಿಸಿದ್ದಾರೆ.
ಅಯೋಧ್ಯೆ ಹಿಂದೂಗಳಿಗೆ ಮಾತ್ರವಲ್ಲ ಸಮಸ್ತ ಭಾರತೀಯರಿಗೂ ಪುಣ್ಯಭೂಮಿಯಾಗಿದೆ, ರಾಮನ ಪ್ರತಿಷ್ಠಾಪನೆಯೊಂದಿಗೆ ಇಡೀ ದೇಶದ ಸಂಸ್ಕೃತಿ, ಸಂಪ್ರದಾಯಗಳಿಗೆ ಮನ್ನಣೆ ಸಿಕ್ಕಿದ್ದು, ಇದೊಂದು ಅತ್ಯಂತ ಮಹತ್ವದ ದಿನವಾಗಿತ್ತು ಎಂದರು.
ರಾಮಮಂದಿರ ಕೇವಲ ಒಂದು ದೇವಾಲಯವಲ್ಲ, ಅದೊಂದು ರಾಷ್ಟ್ರಮಂದಿರವಾಗಿದೆ, ಭಾರತೀಯರ ದೇಶಭಕ್ತಿ, ದೈವಭಕ್ತಿಯ ಸಂಕೇತವಾಗಿದೆ, ಅದೊಂದು ಪವಿತ್ರವಾದ ಯಾತ್ರಸ್ಥಳ ಮಾತ್ರವಲ್ಲ ಸಮಸ್ತ ಹಿಂದೂಗಳ ಅತ್ಯಂತ ಪವಿತ್ರವಾದ ಪುಣ್ಯಕ್ಷೇತ್ರವಾಗಿ ಪ್ರಚಲಿತಗೊಂಡಿದ್ದು, ಈ ಭೂಮಿಯಲ್ಲಿ ಹುಟ್ಟಿದ ಪ್ರತಿಯೊಬ್ಬರೂ ಒಂದು ಬಾರಿಯಾದರೂ ಬಾಲರಾಮನ ದರ್ಶನ ಮಾಡಲೇಬೇಕು ಎಂದು ಅಭಿಪ್ರಾಯಪಟ್ಟರು.
ರಾಮಲಲ್ಲಾ ಪ್ರಾಣಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ನಾನು ಪಾಲ್ಗೊಂಡಿದ್ದೆ, ಅಲ್ಲಿಗೆ ಆಗಮಿಸಿದ್ದ ಪ್ರತಿಯೊಬ್ಬರಲ್ಲೂ ಅದೇನೋ ಒಂದು ರೀತಿಯ ಉತ್ಸಾಹ, ಭಕ್ತಿಯ ಪರಾಕಷ್ಟೆ ಮುಗಿಲು ಮುಟ್ಟಿತ್ತು, ಪ್ರತಿಯೊಬ್ಬರ ಬಾಯಲ್ಲೂ ಜೈಶ್ರೀರಾಮ್ ಘೋಷಣೆ ಕೇಳುತ್ತಿತ್ತು ಎಂದರು.
ಪ್ರತಿಚಷ್ಠಾಪನೆ ವಿಧಿವಿಧಾನದ ಕುರಿತು ತಿಳಿಸಿದ ಅವರು, ಪ್ರಧಾನಿ ಮೋದಿಯವರು ಅತ್ಯಂತ ಶ್ರದ್ಧೆ,ಭಕ್ತಿಯಿಂದ ೧೧ ದಿನಗಳ ಉಪವಾಸವ್ರತ ಕೈಗೊಂಡು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ದೇಶದ ಗಮನ ಸೆಳೆದಿದ್ದಾರೆ, ಮೋದಿಯವರು ತಾವೊಬ್ಬ ಪ್ರಧಾನಿ ಎಂಬುದನ್ನು ಮರೆತು ಅಲ್ಲಿಗೆ ಬಂದಿದ್ದ ಸಾಧು ಸಂತರಿಗೆ, ಹಿರಿಯರೊಂದಿಗೆ ನಡೆದುಕೊಂಡ ರೀತಿ ನಿಜಕ್ಕೂ ಇಡೀ ಸಮಾಜಕ್ಕೆ ಆದರ್ಶವಾಗಿದೆ ಎಂದರು.
ರಾಮಮಂದಿರ ನಿರ್ಮಾಣದಲ್ಲಿ ಶ್ರಮಿಸಿದ ಕೆಲಸಗಾರರಿಗೂ ಗೌರವ ನೀಡಿದ ಮೋದಿ ಅವರೆಲ್ಲರ ಮೇಲೆ ಹೂಗಳನ್ನು ಚೆಲ್ಲಿ ಗೌರವ ಸೂಚಿಸಿದ್ದು ನಿಜಕ್ಕೂ ನಮ್ಮ ಪ್ರಧಾನಿಯ ಕುರಿತು ಅತ್ಯಂತ ಹೆಮ್ಮೆ ಎನಿಸುತ್ತದೆ ಎಂದರು.
ಒಟ್ಟಾರೆ ಸಮಸ್ತ ಭಾರತೀಯರು ಮಾತ್ರವಲ್ಲ, ಇಡೀ ಪ್ರಪಂಚದ ಜನತೆ ರಾಮಲಲ್ಲಾ ಪ್ರತಿಷ್ಟಾಪನೆಯನ್ನು ಕಣ್ತುಂಬಿಕೊಂಡಿದ್ದಾರೆ, ನನಗೆ ಆ ಸ್ಥಳಕ್ಕೆ ಹೋಗಿ ವೀಕ್ಷಿಸಲು ಅವಕಾಶ ಸಿಕ್ಕಿದ್ದು ಅತ್ಯಂತ ಖುಷಿಯಾಗಿದೆ ಎಂದು ತಿಳಿಸಿದ್ದಾರೆ.