
ಆಯೋಧ್ಯೆ, ಆ.೨೧- ಉತ್ತರ ಪ್ರದೇಶದ ಆಯೋದ್ಯೆಯಲ್ಲಿ ರಾಮ ಮಂದಿರದ ಗರ್ಭಗುಡಿ ಸಿದ್ಧವಾಗಿದೆ, ಶೀಘ್ರದಲ್ಲಿ ವಿಗ್ರಹ ಪ್ರತಿಷ್ಠಾಪನೆ ನಡೆಸಲಾಗುವುದು ಎಂದು ರಾಮಮಂದಿರ ತೀರ್ಥ ಕ್ಷೇತ್ರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರೈ ತಿಳಿಸಿದ್ದಾರೆ.
ದೇಗುಲದ ಮೊದಲ ಅಂತಸ್ತಿನ ನಿರ್ಮಾಣದ ನಂತರ ರಾಮಲಲ್ಲಾನ ಮಹಾಮಸ್ತಕಾಭಿಷೇಕ ನೆರವೇರಿಸಲಾಗುವುದು. ಮುಂದಿನ ವರ್ಷ ಜನವರಿ ೧೬ ಮತ್ತು ೨೪ ರ ನಡುವೆ ರಾಮಲಲ್ಲಾಗೆ ಪವಿತ್ರೀಕರಣ ನಡೆಯಲಿದೆ ಎಂದಿದ್ದಾರೆ.
ಉತ್ತರಾಖಂಡದ ಹರಿದ್ವಾರದಲ್ಲಿ ಸಂತರು ಮತ್ತು ದಾರ್ಶನಿಕರನ್ನು ಭೇಟಿ ಮಾಡಿ ದೇವಾಲಯದ ನಿರ್ಮಾಣದ ಪ್ರಗತಿಯ ಬಗ್ಗೆ ಮಾಹಿತಿ ನೀಡಿದ ಬಳಿಕ ಅವರು ಸುದ್ದಿಗಾರರಿಗೆ ಈ ವಿಷಯ ತಿಳಿಸಿದ್ದಾರೆ
ಅಯೋಧ್ಯೆಯಲ್ಲಿ ರಾಮ್ ಲಲ್ಲಾನ ೧೦ ದಿನಗಳ ಪ್ರಾಣ ಪ್ರತಿಷ್ಠಾ ಸಮಾರಂಭದಲ್ಲಿ ಪಾಲ್ಗೊಳ್ಳುವಂತೆ ಆಹ್ವಾನ ನೀಡಿರುವ ಅವರು ಕೋಟ್ಯಂತರ ರಾಮಭಕ್ತರ ಕನಸು ಶೀಘ್ರದಲ್ಲೇ ನನಸಾಗಲಿದೆ ಎಂದು ರೈ ಹೇಳಿದ್ದಾರೆ
“ರಾಮ ಲಲ್ಲಾ ಈಗ ಅಯೋಧ್ಯೆ ಭವ್ಯ ಮಂದಿರದಲ್ಲಿ ಆಸೀನನಾಗಲಿದ್ದಾನೆ. ಮಕರ ಸಂಕ್ರಾಂತಿ ನಂತರ ೨೦೨೪ ರ ಜನವರಿ ೧೬ ಮತ್ತು ೨೪ ರ ನಡುವೆ ಯಾವುದೇ ದಿನಾಂಕದಂದು ದೇವಾಲಯದ ಗರ್ಭಗುಡಿಯಲ್ಲಿ ರಾಮ ಲಲ್ಲಾನ ವಿಗ್ರಹ ಪ್ರತಿಷ್ಠಾಪಿಸಲಾಗುತ್ತದೆ, ”ಎಂದು ತಿಳಿಸಿದ್ದಾರೆ.
ಎರಡು ಅಂತಸ್ತಿನ ದೇವಸ್ಥಾನದ ಮೊದಲ ಅಂತಸ್ತಿನ ಮೇಲ್ಛಾವಣಿಯ ಶೇ.೮೦ ರಷ್ಟು ಕಾಮಗಾರಿ ಪೂರ್ಣಗೊಂಡಿದೆ.ಮೊದಲ ಅಂತಸ್ತಿನ ನಿರ್ಮಾಣದ ನಂತರ ದೇವಾಲಯದ ಶಂಕುಸ್ಥಾಪನೆ ನೆರವೇರಿಸಲಾಗುವುದು ಎಂದು ತಿಳಿಸಿದ್ದಾರೆ.
ದೇಗುಲದಲ್ಲಿ ಭಕ್ತರ ದರ್ಶನದ ನಡುವೆಯೇ ನಿರ್ಮಾಣ ಕಾರ್ಯಗಳು ಮುಂದುವರಿಯಲಿವೆ ಇದರಿಂದ ನಡೆಯುತ್ತಿರುವ ಚಟುವಟಿಕೆಗಳಿಗೆ ಯಾವುದೇ ಅಡ್ಡಿಯಾಗುವುದಿಲ್ಲ ಎಂದಿದ್ದಾರೆ.
ಅಖಿಲ ಭಾರತೀಯ ಅಖಾರ ಪರಿಷತ್ತಿನ ಅಧ್ಯಕ್ಷ ಮಹಂತ್ ರವೀಂದ್ರ ಪುರಿ ಮಾತನಾಡಿ ಎಲ್ಲಾ ಸಂತರು, ದಾರ್ಶನಿಕರು ಮತ್ತು ಶ್ರೀರಾಮನ ಭಕ್ತರು ಮಹಾಮಸ್ತಕಾಭಿಷೇಕ ಸಮಾರಂಭದಲ್ಲಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.