ರಾಮಭಕ್ತರಿಂದ ೨ ಕೆ.ಜಿ ಬೆಳ್ಳಿ ಇಟ್ಟಿಗೆ ಸಮರ್ಪಣೆ

ಕೆ.ಆರ್.ಪುರ, ಜ.೨೦- ಮಹದೇವಪುರ ಕ್ಷೇತ್ರದ ಹೂಡಿ ಗ್ರಾಮದ ಶ್ರೀರಾಮ ಭಕ್ತರು ಆಯೋಧ್ಯೆಗೆ ೨ ಕೆಜಿ ತೂಕದ ಬೆಳ್ಳಿ ಇಟ್ಟಿಗೆಯನ್ನು ತಯಾರಿಸಿದ್ದು ಪ್ರಭು ಶ್ರೀರಾಮನಿಗೆ ಅರ್ಪಿಸಲು ಅಯೋಧ್ಯಾಯಾತ್ರೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ರಾಮಭಕ್ತ ಪರಮಭಕ್ತ ಮಂಜುನಾಥ್ ಅವರು ರಾಮನ ಮಂದಿರಕ್ಕಾಗಿ ಬೆಳ್ಳಿ ಇಟ್ಟಿಗೆ ನೀಡುವ ಮೂಲಕ ಅಳಿಲು ಸೇವೆ ಮಾಡಲಾಗುತ್ತಿದೆ, ದೇವಾಲಯ ನಿರ್ಮಾಣಕ್ಕಾಗಿ ನಗರದ ಹೂಡಿಯಿಂದ ಅಯೋಧ್ಯೆಗೆ ಪಾದಯಾತ್ರೆ ಮಾಡಿದ್ದೆವು. ಈ ಹಿನ್ನೆಲೆಯಲ್ಲಿ ಪಾದಯಾತ್ರೆಯ ನೆನಪಿಗಾಗಿ ಬೆಳ್ಳಿ ಇಟ್ಟಿಗೆ ನೀಡುತ್ತಿದ್ದೇವೆ ಎಂದು ನುಡಿದರು.
ಭಗವಂತನೆಂದರೆ ಅನಂತಗುಣಗಳ ನಿಧಿ, ಆತನಲ್ಲಿ ದೋಷದ ಲೇಶಕ್ಕೂ ಅವಕಾಶವಿಲ್ಲ ಅಂತಹ ಶ್ರೀರಾಮನನ್ನು ಪೂಜಿಸುವುದು ಎಂದರೆ ಸದ್ಗುಣಗಳಿಗೆ ತಲೆಬಾಗುವುದು ಎಂದರ್ಥ ಎಂದು ತಿಳಿಸಿದರು. ದೇಶಾದ್ಯಂತ ಅನೇಕ ರಾಮಮಂದಿರಗಳಿದ್ದರೂ ಆಯ್ಯೋಧ್ಯೆಯೇ ಮುಖ್ಯ ಏಕೆಂದರೆ ಪ್ರಭು ಶ್ರೀರಾಮನು ಅವತಾರವೆತ್ತಿದ ಭೂಮಿ ಇದು. ಮೋಕ್ಷದಾಯಿಕ ಕ್ಷೇತ್ರಗಳಲ್ಲಿ ಅಯ್ಯೋಧ್ಯೆಗೆ ಮೊದಲ ಸ್ಥಾನವಿದೆ, ಸರ್ವಶ್ರೇಷ್ಟ ಗುಣಗಳು ಇರುವ ಜಗತ್ತಿನ ಏಕಮಾತ್ರ ಯಾರಾದ್ರೂ ಇದ್ರೆ ಅದು ಶ್ರೀರಾಮ ಮಾತ್ರ ಎಂದು ತಿಳಿಸಿದರು.
ಶ್ರೀರಾಮ ಮಂದಿರವನ್ನು ಜಗತ್ತೆ ಬೆರಗುಗಣ್ಣಿನಿಂದ ನೋಡುತ್ತಿದ್ದು, ಕೋಟ್ಯಾನುಕೋಟಿ ಹಿಂದುಗಳ ಆರಾಧ್ಯದೈವವನ್ನು ಕಣ್ಣುತುಂಬಿಕೊಳ್ಳಲು ಹಾತೋರಿಯುತ್ತಿದ್ದಾರೆ. ನಾವು ೧೨ ಜನರ ತಂಡ ಸೇರಿ ಪ್ರಭು ಶ್ರಿರಾಮನಿಗೆ ಬೆಳ್ಳಿ ಇಟ್ಟಿಗೆಯನ್ನು ಅಯ್ಯೋಧ್ಯೆಗೆ ತೆರಳಿ ಸಮರ್ಪಿಸಲಿದ್ದೇವೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ರಾಮಭಕ್ತರಾದ ಕೇಬಲ್ ಮಂಜುನಾಥ್, ಮಂಜಯ್ಯ ಚಾವಡಿ, ಕೆಡಿ ವೆಂಕಟೇಶ್,ಮುನಿಕೃಷ್ಣ,ಆರ್.ವೇಣು,ಆಂಜಿ,ರಕ್ಷಿತ್ ಇದ್ದರು.