ರಾಮಪ್ಪ ಉಚ್ಚಾಟನೆ ಸರಿ ಇದೆ; ಪಕ್ಷದ ಕ್ರಮವೂ ಸರಿ ಇದೆ

ದಾವಣಗೆರೆ.ಸೆ.೧೩; ಜಿಲ್ಲಾ ಕಾಂಗ್ರೆಸ್ ವಿರೋಧಿ ಚಟುವಟಿಕೆ ಮಾಡಿರುವ ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಡಾ.ವೈ. ರಾಮಪ್ಪ ಅವರನ್ನು ಕಾಂಗ್ರೆಸ್ ಪಕ್ಷ ಉಚ್ಚಾಟನೆ ಮಾಡಿರುವ ಕ್ರಮ ಸರಿ ಇದೆ ಎಂದು ಜಿಲ್ಲಾ ಪಂಚಾಯತ ಮಾಜಿ ಸದಸ್ಯ ಕೆ.ಎಸ್. ಬಸವಂತಪ್ಪ ಹೇಳಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಮ್ಮನ್ನು ಉಚ್ಛಾಟನೆ ಮಾಡಿ ಪಕ್ಷ ತೆಗೆದುಕೊಂಡಿರುವ ನಿರ್ಧಾರ ಸರಿ ಇಲ್ಲ ಎಂದು ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷರು ಹಾಗೂ ಜಿಲ್ಲಾ ವರಿಷ್ಠರ ವಿರುದ್ಧ ವಿನಾಕಾರಣ ದೂರಿದ್ದಾರೆ. ಕಾಂಗ್ರೆಸ್ ಪಕ್ಷದ ಸಂಸ್ಕೃತಿ, ಸಿದ್ಧಾಂತ ಮತ್ತು ನೀತಿ ನಿಯಮ ಗೊತ್ತಿಲ್ಲದ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹೆಚ್.ಬಿ.ಮಂಜಪ್ಪ ಮಾಡಿರುವ ಉಚ್ಚಾಟನೆ ಸಂಪೂರ್ಣ ಸುಳ್ಳಾಗಿದೆ. ಅಲ್ಲದೇ, ಕನಿಷ್ಟ ಸಾಮಾನ್ಯ ಜ್ಞಾನವಿಲ್ಲದ ಅಧ್ಯಕ್ಷ ಹರಿಹಾಯ್ದಿದ್ದು, ಅವರ ಸಂಸ್ಕಾರ ಎಷ್ಟಿದೆ ಎಂದು ಗೊತ್ತಾಗುತ್ತದೆ ಎಂದು ಹೇಳಿದ್ದಾರೆ.ಪಕ್ಷ ಸಂಘಟಿಸುತ್ತಿದ್ದ ಸಭೆ, ಸಮಾರಂಭ, ಕಾರ್ಯಕ್ರಮಗಳಲ್ಲಿ ಇರುವ ಇವರು ನಡೆದುಕೊಳ್ಳುತ್ತಿದ್ದ ನಡವಾಳಿಕೆಗಳನ್ನು ಗಮನಿಸಿ ಹಾಗೂ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿರುವಂತಹ ಉದಾಹರಣೆ ಇರುತ್ತವೆ. ಪಕ್ಷದ ಕೆಲವು ಕಾರ್ಯಕರ್ತರು, ಮುಖಂಡರ ವಿರುದ್ಧ ನೀಡಿದ ದೂರಿನ್ವಯ ಹಾಗೂ ಶಿಸ್ತು ಸಮಿತಿಯು ಶಿಫಾರಸ್ಸಿನ ಅನ್ವಯ ಡಾ.ವೈ.ರಾಮಪ್ಪ ವಿರುದ್ಧ ಜಿಲ್ಲಾಧ್ಯಕ್ಷರು ಉಚ್ಛಾಟಿಸುವ ಕುರಿತು ಕೆಪಿಸಿಸಿ ಶಿಫಾರಸ್ಸು ಮಾಡಿದ್ದರು. ಅದರಂತೆ ಪಕ್ಷ ಅವರನ್ನು ಉಚ್ಚಾಟನೆ ಮಾಡಿದೆ ಎಂದು ತಿಳಿಸಿದರು.ಇಷ್ಟೇಲ್ಲಾ ಮಾಡಿ ಈಗ ನಾನೇನು ಮಾಡಿಲ್ಲ. ಜಿಲ್ಲಾಧ್ಯಕ್ಷರು ಕೆಪಿಸಿಸಿಗೆ ಮಾಡಿರುವ ಶಿಫಾರಸ್ಸು ಸುಳ್ಳು ಎಂದು ಬೀದಿ ನಾಟಕ ಪ್ರಾರಂಭ ಮಾಡುತ್ತಿರುವುದು ಸರಿಯಲ್ಲ.  ಈ ಹಿಂದೆ ನಡೆದ ಕೆಲವು ಚುನಾವಣೆಗಳ ಸಂದರ್ಭದಲ್ಲಿ ಇರುವ ವರ್ತನೆಗಳು ಜಗಜಾಹೀರವಾಗಿದೆ. ಈಗ ಜಿಲ್ಲಾಧ್ಯಕ್ಷರಿಗೆ ನೀತಿ ಪಾಠ ಹೇಳಲು ಹೋಗುತ್ತಿದ್ದಾರೆ. ಒಮ್ಮೆ ಅವರು ಆತ್ಮವಲೋಕನ ಮಾಡಿಕೊಂಡರೆ, ನಾನು ಸರಿ ಇದೆನೋ ಅಥವಾ ಜಿಲ್ಲಾಧ್ಯಕ್ಷರ ಸರಿ ಇದ್ದಾರೆಯೋ ಎಂದು ತಿಳಿಯುತ್ತದೆ ಎಂದು ಹೇಳಿದರು.2018ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಡಾ.ವೈ.ರಾಮಪ್ಪ ಮತ್ತು ಮಾಜಿ ಶಾಸಕ ಶಿವಮೂರ್ತಿ ನಾಯ್ಕ ಅವರು ಬಿಜೆಪಿಗೆ ಮತ ಹಾಕಿಸುವ ಮೂಲಕ ಪಕ್ಷ ವಿರೋಧಿ ಚಟುವಟಿಕೆ ನಡೆಸಿಸಿದ್ದರು. ಇದು ಪಕ್ಷಕ್ಕೆ ಮಾಡಿದ ದೊಡ್ಡ ದ್ರೋಹ. ಪಕ್ಷ ಅವರಿಗೆ ಸಾಕಷ್ಟು ಅವಕಾಶ ಕೊಟ್ಟಿದೆ. ಆದರೆ ಇವರು ಪಕ್ಷಕ್ಕಾಗಿ ಏನೂ ಕೊಡುಗೆ ಕೊಟ್ಟಿದ್ದಾರೆ ಎಂಬುದನ್ನು ಬಹಿರಂಗಪಡಿಸಬೇಕು ಎಂದು ಸವಾಲು ಹಾಕಿದರು.ಸುದ್ದಿಗೋಷ್ಠಿಯಲ್ಲಿ ಮೆಳ್ಳೇಕಟ್ಟೆ ಡಿ.ಟಿ.ಹನುಮಂತಪ್ಪ, ಅಲೆಕ್ಸಾಂಡರ್ ಜಾನ್, ಮಹಮದ್ ಸನಾವುಲ್ಲಾ, ತೋಳಹುಣಸೆ ಶೇಖರಪ್ಪ, ಆನಗೋಡು ಬಸವರಾಜಪ್ಪ, ಶಂಭುಲಿಂಗಪ್ಪ, ಆಲೂರು ಶಿವಕುಮಾರ್, ವೆಂಕಟೇಶ್, ಸನಾವುಲ್ಲಾ, ಮಂಜುನಾಥ್, ಬಸಣ್ಣ ಇತರರಿದ್ದರು.