ರಾಮನ ಹೆಸರಿನಲ್ಲಿ ರಾಜಕೀಯ ಸಲ್ಲದು

ವಿಜಯಪುರ.ಫೆ೬:ರಾಮನ ಹೆಸರಿನಲ್ಲಿ ರಾಜಕೀಯ ಮಾಡುವುದನ್ನು ಬಿಟ್ಟು, ಅಭಿವೃದ್ಧಿಯ ಹೆಸರಿನಲ್ಲಿ ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸಾಮಾಜಿಕ ನ್ಯಾಯ ದೊರಕಿಸುವ ಕಡೆ ರಾಜಕೀಯ ಮಾಡಬೇಕೆಂದು, ಆಹಾರ ಮತ್ತು ನಾಗರಿಕ ಸರಬರಾಜು ಗ್ರಾಹಕರ ವ್ಯವಹಾರಗಳ ಸಚಿವರಾದ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವರು ಆದ ಕೆಎಚ್ ಮುನಿಯಪ್ಪ ರವರು ತಿಳಿಸಿದರು
ಅವರು ಪಟ್ಟಣದ ಕೋಲಾರ ರಸ್ತೆಯಲ್ಲಿರುವ ಶ್ರೀ ಅನ್ನಪೂರ್ಣೇಶ್ವರಿ ಕನ್ವೆನ್ಷನ್ ಹಾಲ್‌ನಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಏರ್ಪಡಿಸಲಾಗಿದ್ದ ಕರ್ನಾಟಕ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿಯ ಐದು ಗ್ಯಾರೆಂಟಿ ಯೋಜನೆಗಳ ಪರಿಣಾಮಕಾರಿ ಅನುಷ್ಠಾನ ಹಾಗೂ ಜನರಿಗೆ ಮಾಹಿತಿ ನೀಡುವ ಸಮಾವೇಶ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ದೇಶದಲ್ಲಿ ಎಲ್ಲಾ ಜಾತಿ ಧರ್ಮಗಳ ಜನತೆ ವಾಸ ಮಾಡುತ್ತಿದ್ದು, ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಅವರವರ ದೇವರುಗಳನ್ನು ಪೂಜಿಸುತ್ತಿದ್ದು, ಭಾರತ ದೇಶವು ಜಾತ್ಯಾತೀತ ರಾಷ್ಟ್ರವಾಗಿದ್ದು, ಇಲ್ಲಿ ರಾಮನ ಹೆಸರಿನಲ್ಲಿ ರಾಜಕೀಯ ಮಾಡುವುದು ಸರಿಯಲ್ಲವೆಂದು, ಭರತ ಖಂಡದಲ್ಲಿ ಎಲ್ಲರೂ ವಾಸಿಸಲು ಯೋಗ್ಯರಾಗಿದ್ದು, ಕೋಮುಗಲಭೆ ಸೃಷ್ಟಿಸುವುದು, ಜಾತಿ ರಾಜಕಾರಣ ಮಾಡುವುದು ಸರಿಯಲ್ಲವೆಂದು ತಿಳಿಸಿದರು.
ಈ ಹಿಂದೆ ಬಿಜೆಪಿ ಪಕ್ಷದವರು ಕಾಂಗ್ರೆಸ್ ಪಕ್ಷ ಅನುಷ್ಠಾನಕ್ಕೆ ತರಲು ಹೊರಟಿದ್ದ ಗ್ಯಾರಂಟಿಗಳನ್ನು ಜನರಿಗೆ ತಲುಪಿಸಲು ಹಣ ಇಲ್ಲವೆಂದು, ಈ ರೀತಿ ನಡೆದರೆ ಸರ್ಕಾರ ದಿವಾಳಿಯಾಗಿ ಸರಕಾರ ನಡೆಸಲು ಸಾಧ್ಯವಾಗುವುದಿಲ್ಲವೆಂದು ತಿಳಿಸಿದ್ದರು.
ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲಾ ಬಡವರಿಗೂ, ನಿವೇಶನ ರಹಿತರಿಗೆ ನಿವೇಶನಗಳನ್ನು ಹಾಗೂ ಮನೆಗಳನ್ನು ನೀಡಲು ನಿರ್ಧರಿಸಿದ್ದು, ಈಗಾಗಲೇ ತಾಲೂಕು ಪಂಚಾಯಿತಿ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಇದರ ಬಗ್ಗೆ ಮಾಹಿತಿ ಕಲೆ ಹಾಕಲು ತಿಳಿಸಲಾಗಿದೆ ಎಂದು ತಿಳಿಸಿದರು.
ನಾನು ರಾಮನ ಭಕ್ತನೇ ಆಗಿದ್ದು, ಕಳೆದ ೨೫ ವರ್ಷಗಳಿಂದಲೂ ಪ್ರತಿ ದಿನ ರಾಮ ಕೋಟಿ ಬರೆಯುತ್ತಿದ್ದು, ಎಷ್ಟು ಜನ ಬಿಜೆಪಿ ಕಾರ್ಯಕರ್ತರು ರಾಮಕೋಟಿ ಬರೆಯುತ್ತಿರುವರೆಂದು, ಸ್ವ ವಿಮರ್ಶೆ ಮಾಡಿಕೊಳ್ಳಬೇಕೆಂದು, ದೇಶದಲ್ಲಿ ರಾಮನ ಹೆಸರು ಹೇಳಿ ವೋಟ್ ಬ್ಯಾಂಕ್ ಮಾಡುವುದು ಸರಿಂiiಲ್ಲ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕೆ.ಪಿ.ಸಿ.ಸಿ. ಕಾರ್ಯದರ್ಶಿ ವಿ.ಮಂಜುನಾಥ್, ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷರುಗಳಾದ ಬಿ. ರಾಜಣ್ಣ, ಅನಂತಕುಮಾರಿ ಚಿನ್ನಪ್ಪ, ವಿಜಯಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಮಚಂದ್ರಪ್ಪ, ಮಾಜಿ. ಪುರಸಭಾ ಅಧ್ಯಕ್ಷ ಎಂ.ಸತೀಶ್ ಕುಮಾರ್, ಚೌಡಪ್ಪನಹಳ್ಳಿ ಲೋಕೇಶ್, ಮುಖಂಡರುಗಳಾದ ಚಿನ್ನಪ್ಪ, ಪುರಸಭಾ ಸದಸ್ಯ ನಂದಕುಮಾರ್, ಎ.ಆರ್. ಹನಿಪುಲ್ಲ ಎಕ್ಬಲ್, ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ಮುಭಾರಕ್, ಸೈಫುಲ್ಲಾ, ಮಹಮ್ಮದ್ ಏಜಾಜ್, ರಾಜಣ್ಣ, ನಾರಾಯಣಸ್ವಾಮಿ, ಅಡುಗೆ ಗುತ್ತಿಗೆದಾರರಾದ ಬಿ.ವಿ.ಕೃಷ್ಣಪ್ಪ ಹಾಗೂ ಎಲ್ಲಾ ಇಲಾಖೆಯ ಅಧಿಕಾರಿಗಳು ಮುಖಂಡರು ಹಾಗೂ ಕಾರ್ಯಕರ್ತರು ಹಾಜರಿದ್ದರು.