ರಾಮನವಮಿ: ಹಿಂದೂ ಮುಸ್ಲಿಂರಿಂದ ಮಜ್ಜಿಗೆ-ಪಾನಕ ವಿತರಣೆ

ಮೈಸೂರು:ಮಾ.31:- ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಹಿಂದೂ- ಮುಸ್ಲಿಂ ಇಬ್ಬರೂ ಸೇರಿ ರಾಮ ಪೂಜೆಯೊಂದಿಗೆ ಮಜ್ಜಿಗೆ ಪಾನಕ ಹಂಚಿ ಭಾವೈಕ್ಯತೆಯ ರಾಮನವಮಿ ಆಚರಿಸುವ ಜತೆಗೆ ನಗರ ಹಾಗೂ ಜಿಲ್ಲೆಯಾದ್ಯಂತ ರಾಜಕಾರಣಿಗಳ ಹೊರತಾಗಿ ಶ್ರದ್ಧಾ ಭಕ್ತಿಯ ರಾಮನವಮಿ ಆಚರಣೆ ಮಾಡಲಾಯಿತು.
ನಾರಾಯಣಶಾಸ್ತ್ರಿ ರಸ್ತೆಯಲ್ಲಿರುವ ಮೈಸೂರು ಜಿಲ್ಲಾ ಪೆಂಡಾಲ್ ಮಾಲೀಕರ ಸಂಘ ಆಯೋಜಿಸಿದ ಶ್ರೀ ರಾಮನವಮಿ ಪ್ರಯುಕ್ತ ಹಿಂದೂ ಮುಸಲ್ಮಾನ್ ಭಾವೈಕ್ಯತೆಯಿಂದ ಶ್ರೀ ರಾಮಚಂದ್ರನ ಪ್ರಭು ಭಾವಚಿತ್ರಕ್ಕೆ ಪೂಜಿ ಸಲ್ಲಿಸಿ ನಂತರ ಭಕ್ತಾದಿಗಳಿಗೆ ಪಾನಕ ಮಜ್ಜಿಗೆ ಕೋಸಂಬರಿ ವಿತರಿಸಿದರು.
ವಿಶೇಷವಾಗಿ ಶ್ರೀ ರಾಮನ ವೇಷ ಧರಿಸಿ ಬಂದ ಸಿದ್ದಾರ್ಥ ಲೇಔಟ್ ನಿವಾಸಿ ಜೀವನ್ ರವರು ವಿಶೇಷ ಗಮನ ಸೆಳೆದರು. ಇದೇ ಸಂದರ್ಭದಲ್ಲಿ ಅಧ್ಯಕ್ಷ ಶಿವಕುಮಾರ್, ಅಧ್ಯಕ್ಷ ತಾಜ್ ಮಹಮ್ಮದ್, ಲಿಂಗಪ್ಪ, ರಾಜ್ಯ ಉಪಾಧ್ಯಕ್ಷ ಅಬ್ದುಲ್ ರೆಹಮಾನ್, ವಾಸಿಂ, ಜೀವದಾರ ರಕ್ಕ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ಲೋಹಿತ್ ಹಾಗೂ ಇನ್ನಿತರರು ಭಾಗವಹಿಸಿದ್ದರು.