ರಾಮದುರ್ಗ: ಮದ್ಯ ವಶ

ರಾಮದುರ್ಗ,ಮೇ9: ತುರುನೂರು ಗ್ರಾಮದ ಮೂಲಕ ಪಟ್ಟಣಕ್ಕೆ ಗೋಣಿ ಚೀಲದಲ್ಲಿ ತುಂಬಿದ್ದ ಮದ್ಯದ ಟೆಟ್ರಾ ಪ್ಯಾಕ್‍ಗಳನ್ನು ರಾಮದುರ್ಗದ ಅಬಕಾರಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ತುರುನೂರು ಗ್ರಾಮವನ್ನು ದಾಟಿ ರಾಮದುರ್ಗಕ್ಕೆ ಆಗಮಿಸುತ್ತಿದ್ದ ಡಸ್ಟರ್‍ವಾಹನವನ್ನು ಸಿನಿಮೀಯ ರೀತಿಯಲ್ಲಿ ಬೆನ್ನಟ್ಟಿದ್ದ ಅಬಕಾರಿ ಪೊಲೀಸರು ಪಟ್ಟಣದ ಮಿನಿ ವಿಧಾನ ಸೌಧದ ಬಳಿ ತಡೆದು ನಿಲ್ಲಿಸಿದರು. ಅಷ್ಟರಲ್ಲಿ ಅದರಲ್ಲಿದ್ದ ಆರೋಪಿಗಳು ಪÀರಾರಿಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಅಬಕಾರಿ ಅಧಿಕಾರಿಗಳು ಗಸ್ತು ತಿರುಗುತ್ತಿದ್ದ ವೇಳೆ ಅಕ್ರಮವಾಗಿ ಗೋಣಿ ಚೀಲಗಳಲ್ಲಿ ತುಂಬಿದ್ದ ಒಟ್ಟು 77.4 ಲೀಟರ್‍ಮದ್ಯ ಮತ್ತು ವಾಹನವನ್ನು ಅಬಕಾರಿ ಅಧಿಕಾರಿಗಳು ವಶಕ್ಕೆ ಪಡೆದು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.
ಮದ್ಯ ಸಾಗಿಸುತ್ತಿದ್ದ ವಾಹನ ಮತ್ತು ಅಂದಾಜು ಮೌಲ್ಯ ರೂ. 14,30,211 ಕಿಮ್ಮತ್ತಿನ ಮಾಲನ್ನು ವಶಪಡಿಸಿಕೊಂಡು ಅಬಕಾರಿ ನಿರೀಕ್ಷಕ ಬಸವರಾಜ ಕಿತ್ತೂರ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಬೆಳಗಾವಿಯ ಅಬಕಾರಿ ಜಂಟಿ ಆಯುಕ್ತರು ಮತ್ತು ಆಯುಕ್ತರ ಮಾರ್ಗದರ್ಶನದಲ್ಲಿ ರಾಮದುರ್ಗ ಉಪವಿಭಾಗದ ಉಪ ಅಧೀಕ್ಷಕ ಆರ್.ಎಸ್. ಮುದಿಗೌಡ್ರ ಇವರ ನೇತೃತ್ವದಲ್ಲಿ ಅಬಕಾರಿ ನಿರೀಕ್ಷಕ ಮಹೇಶ ಪುಠಾಣಿ, ಸಿಬ್ಬಂದಿಗಳಾದ ರಂಗಪ್ಪ ಗೌಡರ, ರಂಗಪ್ಪ ದುಂಡಾನಟ್ಟಿ, ಸುಭಾಸ ಅಥರ್ಗಾ, ಬಾಳಪ್ಪ ಬಸರಗಿ ಮತ್ತು ವಾಹನ ಚಾಲಕ ಬಸವರಾಜ ಕರೆನ್ನವರ ದಾಳಿ ನಡೆಸಿದ್ದರು. ರಾಮದುರ್ಗದ ಅಬಕಾರಿ ಇಲಾಖೆಯಲ್ಲಿ ತನಿಖೆ ಮುಂದುವರೆದಿದೆ.