ರಾಮದುರ್ಗ ಗ್ರಾ ಪಂ : ಡಿ ಬಿ ಚಂದ್ರಪ್ಪ ಅಧ್ಯಕ್ಷ, ಉಪಾಧ್ಯಕ್ಷರಾಗಿ ಲಕ್ಷ್ಮೀದೇವಿ ಆಯ್ಕೆ.


ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಆ 2 :- ತಾಲೂಕಿನ ರಾಮದುರ್ಗ ಗ್ರಾಮಪಂಚಾಯಿತಿಯ ಎರಡನೇ ಅವಧಿಯ ಅಧ್ಯಕ್ಷ ಉಪಾಧ್ಯಕ್ಷರ ಸ್ಥಾನಗಳ ಚುನಾವಣಾ ಪ್ರಕ್ರಿಯೆಯಲ್ಲಿ ಅಧ್ಯಕ್ಷ ಸ್ಥಾನದ ಸ್ಪರ್ಧೆಯಲ್ಲಿ ಚಂದ್ರಪ್ಪ ಗೆಲುವಿನ ಮೂಲಕ ಅಧ್ಯಕ್ಷ ಸ್ಥಾನ ಪಡೆದುಕೊಂಡಿದ್ದು, ಉಪಾಧ್ಯಕ್ಷ ಸ್ಥಾನಕ್ಕೆ ಲಕ್ಷ್ಮೀದೇವಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿಯಾದ ತಹಸೀಲ್ದಾರ್ ಟಿ ಜಗದೀಶ್ ಘೋಷಿಸಿದ್ದಾರೆ.
ಮಂಗಳವಾರದಂದು ರಾಮದುರ್ಗ ಗ್ರಾಮಪಂಚಾಯಿತಿಯ ಅಧ್ಯಕ್ಷ – ಉಪಾಧ್ಯಕ್ಷ ಸ್ಥಾನಕ್ಕೆ ಎರಡನೇ ಅವಧಿಯ ಚುನಾವಣೆ ನಿಗಧಿಯಾದಂತೆ ನಡೆಸಲಾಗಿ ಪರಿಶಿಷ್ಟ ಪಂಗಡದ ಮೀಸಲಾತಿಯ  ಅಧ್ಯಕ್ಷ ಸ್ಥಾನಕ್ಕೆ ಇಬ್ಬರು ನಾಮಪತ್ರ ಸಲ್ಲಿಸಿದ್ದು ಆದರಲ್ಲಿ 16ಜನ ಸದಸ್ಯರ ಬಲಾಬಲದಲ್ಲಿ ಚುನಾವಣೆ ನಡೆಸಲಾಗಿ ಡಿ ಬಿ ಚಂದ್ರಪ್ಪ ಅವರಿಗೆ 10ಮತಗಳು ಹಾಗೂ ಪ್ರತಿಸ್ಪರ್ದಿ ಪಾಲಮ್ಮ ಅವರಿಗೆ 6ಮತಗಳು ಮಾತ್ರ ಲಭಿಸಿದ್ದು ಇದರಲ್ಲಿ ಚಂದ್ರಪ್ಪ ಆಯ್ಕೆ ಖಚಿತಪಡಿಸಲಾಯಿತು ಹಾಗೂ ಪರಿಶಿಷ್ಟ ಪಂಗಡ ಮಹಿಳೆ ಮೀಸಲಾತಿಯ ಉಪಾಧ್ಯಕ್ಷ ಸ್ಥಾನಕ್ಕೆ ಲಕ್ಷ್ಮೀದೇವಿ ನಾಗರಾಜ  ಒಬ್ಬರೇ ನಾಮಪತ್ರ ಸಲ್ಲಿಕೆ ಮಾಡಿದ್ದರಿಂದ  ಇವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ಚುನಾವಣಾಧಿಕಾರಿಯಾಗಿದ್ದ ಕೂಡ್ಲಿಗಿ ತಹಸೀಲ್ದಾರ್ ಟಿ ಜಗದೀಶ್ ಘೋಷಣೆ ಮಾಡಿದರು.
ಈ  ಸಂದರ್ಭದಲ್ಲಿ  ಚುನಾವಣಾ ಸಹಾಯಕರಾಗಿ  ಈಶಪ್ಪ, ವಾಸುದೇವ, ಹಾಗೂ ಕಂದಾಯ ನಿರೀಕ್ಷಕ ಚೌಡಪ್ಪ, ಗ್ರಾಮಪಂಚಾಯಿತಿ ಪಿಡಿಓ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು. ಗುಡೇಕೋಟೆ ಪೊಲೀಸರು ಚುನಾವಣಾ ಬಂದೋಬಸ್ತ್ ಏರ್ಪಡಿಸಿದ್ದರು.