ರಾಮದುರ್ಗ ಗ್ರಾಪಂನಲ್ಲಿ ಭಾರಿ ಅವ್ಯವಹಾರ

ದೇವದುರ್ಗ.ಏ.೨೦-ತಾಲೂಕಿನ ರಾಮದುರ್ಗ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ೨೦೨೦ ೨೧ ನೇ ಸಾಲಿನ ೧೫ನೇ ಹಣಕಾಸು ಯೋಜನೆಯಡಿ ಭಾರಿ ಅವ್ಯವಹಾರ ನಡೆದಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಉಪ ಅಧ್ಯಕ್ಷ ಸಂಗಮೇಶ ನಾಯಕ್ ಆರೋಪಿಸಿದರು.
ಪಟ್ಟಣದ ಪತ್ರಿಕಾ ಕಚೇರಿಯಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದರು. ಸುಮಾರು ೬೫ ಲಕ್ಷ ಅನುದಾನದಲ್ಲಿ ವಿವಿಧ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಕುಡಿಯುವ ನೀರು ಮತ್ತು ಪೈಪ್ಲೈನ್ ಕಾಮಗಾರಿಗೆ ೪.೯೦ ಲಕ್ಷ ರೂ, ಬೀದಿ ದೀಪ ನಿರ್ವಹಣೆಗೆ ೯೯ ಸಾವಿರ ರೂಪಾಯಿ, ರಾಮದುರ್ಗ ಗ್ರಾಮದಲ್ಲಿ ಪೈಪ್ಲೈನ್ ಕಾಮಗಾರಿಗೆ ೮೪ ಸಾವಿರ ರೂಪಾಯಿ, ಮಾಡಿರುವುದಾಗಿ ಲೆಕ್ಕದಲ್ಲಿ ತೋರಿಸಿದ್ದಾರೆ. ಆದರೆ ವಾಸ್ತವದಲ್ಲಿ ಈ ಕಾಮಗಾರಿ ಕೈಗೊಂಡಿಲ್ಲ. ಸುಳ್ಳು ದಾಖಲೆ ಸೃಷ್ಟಿ ಮಾಡಿ ಅನುದಾನ ದುರ್ಬಳಕೆ ಮಾಡಲಾಗಿದೆ. ಇದಲ್ಲದೆ ಗ್ರಾಮಸಭೆ, ಸಾಮಾನ್ಯ ಸಭೆ ನಡೆಸದೆ ಅಧಿಕಾರಿಗಳು ಏಕಪಕ್ಷೀಯವಾಗಿ ನಿರ್ಧಾರ ಕೈಗೊಂಡಿದ್ದಾರೆ. ಎಸ್ಸಿ ಮತ್ತು ಎಸ್ಟಿ ಕಾಲೋನಿಯಲ್ಲಿ ಕುಡಿಯುವ ನೀರಿಗೆ ತೀವ್ರ ಸಮಸ್ಯೆ ಇದೆ. ಈ ಬಗ್ಗೆ ಅಧಿಕಾರಿಗಳು ಹಾಗೂ ಪಿಡಿಓ ಗಮನಹರಿಸಿಲ್ಲ. ಆದರೆ ನಕಲಿ ದಾಖಲೆ ಸೃಷ್ಟಿ ಮಾಡಿ ಲಕ್ಷಾಂತರ ರೂಪಾಯಿ ಅನುದಾನ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು.
ಕೂಡಲೇ ಅಧಿಕಾರಿಗಳು ಈ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಬೇಕು. ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿ ಬಗ್ಗೆ ಪರಿಶೀಲನೆ ನಡೆಸಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಕೇಸು ದಾಖಲಿಸಬೇಕು. ನಿರ್ಲಕ್ಷ್ಯ ಮಾಡಿದರೆ ಗ್ರಾಪಂ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ಗ್ರಾಮ ಪಂಚಾಯಿತಿಯಲ್ಲಿ ಕಂಪ್ಯೂಟರ್ ಆಪರೇಟರ್ ನೇಮಕದಲ್ಲಿ ಅಕ್ರಮ ನಡೆದಿದೆ. ಹಿಂದೆ ಇದ್ದ ರಾಜು ಎನ್ನುವ ಸಿಬ್ಬಂದಿಯನ್ನು ಕೆಲಸದಿಂದ ತೆಗೆದು, ಆನಂದ ಎನ್ನುವ ಸಿಬ್ಬಂದಿಯನ್ನು ನೇಮಕ ಮಾಡಿಕೊಂಡಿದ್ದಾರೆ. ಪಂಚಾಯತ್ ಅಧ್ಯಕ್ಷೆ ಪತಿ ಹಾಗೂ ಪಿಡಿಓ ಸೇರಿ ಅಕ್ರಮವಾಗಿ ಹೊಸ ಸಿಬ್ಬಂದಿಯನ್ನು ನೇಮಕ ಮಾಡಿಕೊಂಡಿದ್ದಾರೆ. ಹೊಸ ಸಿಬ್ಬಂದಿಗೆ ಕನಿಷ್ಠ ಅರ್ಹತೆ ಇಲ್ಲ. ಕಂಪ್ಯೂಟರ್ ಜ್ಞಾನವಿಲ್ಲ ಎಂದು ಆರೋಪಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಅಮರೇಶ ನಾಯಕ, ತಮ್ಮಣ್ಣ, ಸಂಗಮೇಶ, ಶಿವರಾಜ್, ನಾಗರಾಜ್ ನಾಯಕ ಇತರರಿದ್ದರು.