ರಾಮದುರ್ಗದಲ್ಲಿ ವಾಲ್ಮೀಕಿ ಜಯಂತಿ

ರಾಮದುರ್ಗ, ನ1- ನಾರದ ಮುನಿಗಳ ಮಾತುಗಳಿಂದ ಮನಸ್ಸು ಪರಿವರ್ತನೆ ಮಾಡಿಕೊಂಡು ರಾಮಾಯಣ ಮಹಾ ಗ್ರಂಥ ರಚನೆಯ ಮೂಲಕ ಮಹರ್ಷಿ ವಾಲ್ಮಿಕಿ ಜಗತ್ತಿನ ಇತಿಹಾಸದಲ್ಲಿಯೇ ಜ್ಞಾನಾರ್ಜನೆ ಹೊಂದಿದ ಮಹಾಪುರುಷ ಎಂಬುದು ಸಾಕ್ಷಿಯಾಗಿದೆ ಎಂದು ಶಾಸಕ ಮಹಾದೇವಪ್ಪ ಯಾದವಾಡ ಹೇಳಿದರು.
ಇಲ್ಲಿನ ಮಿನಿ ವಿಧಾನ ಸೌಧದಲ್ಲಿ ತಾಲ್ಲೂಕು ಆಡಳಿತ ಹಮ್ಮಿಕೊಂಡಿದ್ದ ಮಹರ್ಷಿ ವಾಲ್ಮಿಕಿ ಜನ್ಮ ದಿನಾಚರಣೆ ಸಮಾರಂಭದಲ್ಲಿ ಮಾತನಾಡಿದ ಅವರು, ಜ್ಞಾನಾರ್ಜನೆ ಜೀವನದ ಪ್ರಮುಖ ಅಂಶ. ಅಂತೆಯೇ ವಾಲ್ಮಿಕಿ ಸಮಾಜದ ಪ್ರಮುಖರು ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ದೊರಕಿಸುವಲ್ಲಿ ಮುಂದಾಗಬೇಕು ಎಂದು ಹೇಳಿದರು.
ಪುರಸಭೆಯ ಅಧ್ಯಕ್ಷ ಶಂಕರಪ್ಪ ಬೆಣ್ಣೂರ ಮಾತನಾಡಿ, ಹೊಸದಾಗಿ ಅಧಿಕಾರ ವಹಿಸಿಕೊಂಡಿರುವ ತಮಗೆ ಸಾರ್ವಜನಿಕರು ಸಹಕಾರ ನೀಡಬೇಕು. ಪಟ್ಟಣದ ನೈರ್ಮಲ್ಯಕ್ಕೆ ಕೈ ಜೋಡಿಸಬೇಕು ಎಂದು ಹೇಳಿದರು.
ಪುರಸಭೆ ಉಪಾಧ್ಯಕ್ಷ ರಾಘವೇಂದ್ರ ದೊಡಮನಿ ಮಾತನಾಡಿ, ಪುರಸಭೆಯ ಅಧ್ಯಕ್ಷ, ಉಪಾಧ್ಯಕ್ಷರು ಯುವಕರಾಗಿದ್ದಾರೆ ಎಂದು ಬಿಜೆಪಿ ತಮಗೆ ಅಧಿಕಾರ ನೀಡಿದೆ. ಯುವಕರ ಕೈಯಲ್ಲಿ ಅಧಿಕಾರ ಇದ್ದರೆ ಮಾತ್ರ ಸಮಾಜದಲ್ಲಿ ಏನನ್ನಾದರೂ ಬದಲಾವಣೆ ತರಬಹುದಾಗಿದೆ. ಜನತೆ ಯುವಕರಿಗೆ ಪೆÇ್ರೀತ್ಸಾಹಿಸಬೇಕು ಎಂದು ಹೇಳಿದರು.
ಜಿಲ್ಲಾ ಪಂಚಾಯ್ತಿ ಸದಸ್ಯ ರೇಣಪ್ಪ ಸೋಮಗೊಂಡ, ವಾಲ್ಮಿಕಿ ಸಮಾಜದ ಅಧ್ಯಕ್ಷ ರಂಗಪ್ಪ ತಳವಾರ, ಗೋವಿಂದ ತಳವಾರ, ಗೋವಿಂದ ಮಡ್ಡಿ, ತಾಲ್ಲೂಕು ಪಂಚಾಯ್ತಿ ಇಒ ಮುರಳೀಧರ ದೇಶಪಾಂಡೆ, ಬಿಇಒ ಮಲ್ಲಿಕಾರ್ಜುನ ಅಲಾಸಿ, ಬಾಲವಿಕಾಸನಾಧಿಕಾರಿ ಸಿಂಗಾರೆವ್ವ ವಂಟಮೂರಿ ಇತರರು ಇದ್ದರು.
ಪಿ.ಡಿ. ಕಾಲವಾಡ ಕಾರ್ಯಕ್ರಮ ನಿರೂಪಿಸಿದರು. ಕೆ.ಎಸ್. ಕರ್ಕಿ ವಂದಿಸಿದರು.
ಇದೇ ಸಂದರ್ಭದಲ್ಲಿ ಪುರಸಭೆಯ ನೂತನ ಅಧ್ಯಕ್ಷ ಶಂಕರ ಬೆಣ್ಣೂರ, ಉಪಾಧ್ಯಕ್ಷ ರಾಘವೇಂದ್ರ ದೊಡಮನಿ ಅವರನ್ನು ಸನ್ಮಾನಿಸಲಾಯಿತು.