ರಾಮದುರ್ಗದಲ್ಲಿ ಮತದಾನ ಬಹಿಷ್ಕಾರ

ಬೆಳಗಾವಿ, ಏ17: ಬೆಳಗಾವಿ ಲೋಕಸಭಾ ಕ್ಷೇತ್ರ ಉಪಚುನಾವಣೆಗೆ ಇಂದು ಬೆಳಿಗ್ಗೆ 7 ಗಂಟೆಯಿಂದಲೇ ಕ್ಷೇತ್ರದಾದ್ಯಂತ ಉತ್ಸಾಹದ ಮತದಾನ ದೃಶ್ಯಗಳು ಕಂಡು ಬಂದಿದ್ದು, ಆದರೆ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನಲ್ಲಿ ಮತದಾರರು ಮತದಾನ ಬಹಿಷ್ಕಾರ ಮಾಡಿದ ಘಟನೆ ನಡೆದಿದೆ.
ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಹಿರೇತಡಸಿ, ಚಿಕ್ಕ ತಡಸಿ ಹಾಗೂ ಓಗಳಾಪೂರ ಎಸ್.ಎಲ್.ಟಿ. ಗ್ರಾಮಸ್ಥರು ಮತದಾನ ಬಹಿಷ್ಕಾರ ಮಾಡಿದ್ದಾರೆ.
ಗ್ರಾಮಗಳ ಪೈಕಿ ಸುಮಾರು 2500 ಕ್ಕೂ ಅಧಿಕ ಜನರಿಂದ ಮತದಾನಕ್ಕೆ ಬಹಿಷ್ಕಾರ ಹಾಕಲಾಗಿದೆ. ಕಳೆದೆರಡು ವರ್ಷಗಳಿಂದ ಕ್ಷೇತ್ರದಲ್ಲಿ ಅತೀವ ಪ್ರವಾಹ ಪರಿಸ್ಥಿತಿಯನ್ನು ಅನುಭವಿಸಿದ್ದು ಸೂಕ್ತ ವ್ಯವಸ್ಥೆ ಕಲ್ಪಿಸಿಲ್ಲ ಎಂದು ಗ್ರಾಮಸ್ಥರು ಆಕ್ರೋಶಗೊಂಡು ಬಹಿಷ್ಕಾರಕ್ಕೆ ಮುಂದಾದರು.
ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ಹಲವು ದಿನಗಳಿಂದ ಅಧಿಕಾರಿಗಳಿಗೆ ಕೇಳಿದರೂ ನಮ್ಮ ಬೇಡಿಕೆ ಆಲಿಸಲು ಇದುವರೆಗೂ ಯಾರೂ ಮುಂದಾಗಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ.
ಎರೆಡು ವರ್ಷಗಳಲ್ಲಿ ಎರಡು ಬಾರಿ ತೀವ್ರ ಪ್ರವಾಹಕ್ಕೆ ಒಳಗಾಗಿದ್ದು ಗ್ರಾಮಗಳ ಸ್ಥಳಾಂತರ ಮಾಡದ ಹಿನ್ನೆಲೆ ಮತದಾನದಿಂದ ದೂರ ಉಳಿದಿದ್ದೇವೆ ಎಂದು ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ. ಅಲ್ಲದೆ ಓಗಳಾಪೂರ ಎಸ್.ಎಲ್.ಟಿ. ಗ್ರಾಮವನ್ನು ಕಂದಾಯ ಗ್ರಾಮವಾಗಿ ಮಾಡುವಂತೆ ಆಗ್ರಹಿಸಿ ವಸತಿ ಕಲ್ಪಿಸಿಕೊಡಬೇಕೆಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ.