ರಾಮಕೃಷ್ಣ ಆಶ್ರಮದ ನಡೆ ಖಂಡಿಸಿ ಹೋರಾಟ

ಮೈಸೂರು: ನ.23:- ಎನ್‍ಟಿಎಂ ಶಾಲೆಯನ್ನು ಕೆಡವಿ, ಆ ಸ್ಥಳದಲ್ಲಿ ವಿವೇಕ ಸ್ಮಾರಕ ನಿರ್ಮಿಸುತ್ತಿರುವ ರಾಮಕೃಷ್ಣ ಆಶ್ರಮದ ನಡೆಯನ್ನು ಖಂಡಿಸಿ ಮಹಾರಾಣಿ ಎನ್‍ಟಿಎಂ ಶಾಲೆ ಉಳಿಸಿ ಹೋರಾಟ ಒಕ್ಕೂಟದ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು.
ನಾರಾಯಣಶಾಸಿ ರಸ್ತೆಯಲ್ಲಿರುವ ಸ್ವಾತಂತ್ರ್ಯ ಉದ್ಯಾನದಲ್ಲಿ ಜಮಾಯಿಸಿದ ಪ್ರತಿಭಟನಕಾರರು, ರಾಮಕೃಷ್ಣ ಆಶ್ರಮದ ವಿರುದ್ಧ ಘೋಷಣೆ ಕೂಗಿದರು. ರಾಮಕೃಷ್ಣ ಆಶ್ರಮದವರು ಹೇಳಿದಂತೆ ನಡೆದುಕೊಂಡು ಶಾಲೆಯನ್ನು ಉಳಿಸಿಲ್ಲಘಿ.ಇದು ಸ್ವಾಮಿ ವಿವೇಕಾನಂದರ ಆಶಯಗಳಿಗೆ ವಿರುದ್ಧವಾಗಿದೆ ಎಂದು ಕಿಡಿಕಾರಿದರು.
ಶಾಲೆ ಕೆಡುವವ ಮುನ್ನ ಸುತ್ತೂರು ಶ್ರೀಗಳು ಹಾಗೂ ಸಂಸದ ವಿ.ಶ್ರೀನಿವಾಸಪ್ರಸಾದ್ ಅವರ ಉಪಸ್ಥಿತಿಯಲ್ಲಿ ನಡೆದ ಸಂಧಾನ ಸಭೆಯಲ್ಲಿ ಸ್ಮಾರಕದ ಜೊತೆ ಶಾಲೆಯನ್ನು ನಿರ್ಮಿಸುವ ಪ್ರಸ್ತಾವಕ್ಕೆ ರಾಮಕೃಷ್ಣ ಆಶ್ರಮದವರು ಒಪ್ಪಿದ್ದರು. ಆದರೆ, ಏಕಾಏಕಿ ಎನ್‍ಟಿಎಂ ಶಾಲೆಯನ್ನು ಕೆಡವಲಾಗಿದೆ. ಅಲ್ಲದೇ, ಆಶ್ರಮವು ಸ್ಮಾರಕ ನಿರ್ಮಿಸುತ್ತಿರುವುದು ಮಕ್ಕಳಿಗೆ ಮಾಡಿದ ಅನ್ಯಾಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಒಪ್ಪಂದವನ್ನು ಉಲ್ಲಂಘಿಸಿರುವ ಆಶ್ರಮವು ಶಾಲೆಯ ಉಳಿವಿಗೆ ಹೋರಾಡಿದವರಿಗೂ ಅಪಚಾರ ಮಾಡುತ್ತಿದೆ. ಶಾಲೆ ನಿರ್ಮಾಣ ಆಗುವವರೆಗೂ ಹೋರಾಟ ನಿಲ್ಲುವುದಿಲ್ಲ ,ರಾಮಕೃಷ್ಣ ಆಶ್ರಮದವರು ಹೇಳಿದ ಮಾತಿನಂತೆ ಬದ್ಧತೆ ತೋರಬೇಕು ಎಂದರು.
ಪ್ರತಿಭಟನೆಯಲ್ಲಿ ಮಾಜಿ ಮೇಯರ್ ಪುರುಷೋತ್ತಮ್, ಟಿ.ರವಿಗೌಡ, ಸ್ವಾಮಿ, ಬಿ.ಮಹದೇವ, ಡಿ.ಆರ್.ಕರೀಗೌಡ, ಸುನೀಲ್ ಕುಮಾರ್, ರವಿಕುಮಾರ್, ಸಿದ್ದೇಗೌಡ, ಸಿದ್ದಪ್ಪ, ಎಸ್.ಬಾಲಕೃಷ್ಣ, ಬೆಳ್ಳಾಲೆ ಬೆಟ್ಟೇಗೌಡ ಮತ್ತಿತರರು ಪಾಲ್ಗೊಂಡಿದ್ದರು.