ರಾಫಾ ಮೇಲೆ ಇಸ್ರೇಲ್ ದಾಳಿ

ಜೆರುಸಲೆಂ (ಇಸ್ರೇಲ್), ಫೆ.೯- ಹಮಾಸ್ ಪ್ರಸ್ತಾವನೆಯನ್ನು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ತಿರಸ್ಕರಿಸಿದ ಹೊರತಾಗಿಯೂ ರಾಜತಾಂತ್ರಿಕ ವಲಯವು ಸೂಕ್ತ ರೀತಿಯ ಕದನ ವಿರಾಮದ ಯೋಜನೆಗೆ ಸಿದ್ದವಾಗಿರುವ ನಡುವೆಯೇ ಇದೀಗ ಇಸ್ರೇಲಿ ಪಡೆಗಳು ಗಾಝಾದ ದಕ್ಷಿಣ ಗಡಿ ನಗರವಾದ ರಫಾದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಆಶ್ರಯ ಪಡೆದಿರುವ ಪ್ರದೇಶಗಳ ಮೇಲೆ ಬಾಂಬ್ ದಾಳಿ ನಡೆಸಿದೆ.
ಹಿರಿಯ ಅಧಿಕಾರಿ ಖಲೀಲ್ ಅಲ್-ಹಯ್ಯ ನೇತೃತ್ವದ ಹಮಾಸ್ ನಿಯೋಗವು ಮಧ್ಯವರ್ತಿಗಳಾದ ಈಜಿಪ್ಟ್ ಮತ್ತು ಕತಾರ್‌ನೊಂದಿಗೆ ಕದನ ವಿರಾಮ ಮಾತುಕತೆಗಾಗಿ ಈಗಾಗಲೇ ಕೈರೋಗೆ ಆಗಮಿಸಿತು. ಒಂದೆಡೆ ಈಜಿಪ್ಟ್‌ನ ಗಡಿ ಪ್ರದೇಶ ರಫಾದ ಮೇಲೆ ಇಸ್ರೇಲ್ ತೀವ್ರ ರೀತಿಯಲ್ಲಿ ದಾಳಿ ನಡೆಸುತ್ತಿದ್ದರೆ ಇಲ್ಲಿನ ೧೦ ಲಕ್ಷಕ್ಕೂ ಅಧಿಕ ನಿವಾಸಿಗಳು ಸೂಕ್ತ ಸಮಯದಲ್ಲಿ ಕದನ ವಿರಾಮ ಘೋಷಣೆಯಾಗಬಹುದು ಎಂದು ಅಶಿಸುತ್ತಿದ್ದಾರೆ. ಇಲ್ಲಿನ ಹೆಚ್ಚಿನ ನಿವಾಸಿಗಳು ಸದ್ಯ ಡೇರೆಯಲ್ಲಿ ವಾಸಿಸುತ್ತಿದ್ದು, ಸದ್ಯ ಇಲ್ಲಿ ಇಸ್ರೇಲಿ ಪಡೆಗಳು ತೀವ್ರ ದಾಳಿ ಆರಂಭಿಸಿದೆ. ಘಟನೆಯಲ್ಲಿ ೧೧ ಮಂದಿ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಇನ್ನು ದಾಳಿಯ ಬಗ್ಗೆ ಪ್ರತಿಕ್ರಿಯೆ ನೀಡಿರುವ ಶ್ವೇತಭವನದ ವಕ್ತಾರ ಜಾನ್ ಕಿರ್ಬಿ, ನಾಗರಿಕರ ಅವಸ್ಥೆಯನ್ನು ಪರಿಗಣಿಸದೆ ಇಸ್ರೇಲಿ ರಫಾದಲ್ಲಿ ನಡೆಸಿದ ಕಾರ್ಯಾಚರಣೆಯು ಒಂದು ಅನಾಹುತವಾಗಿದೆ. ನಾವು ಈ ದಾಳಿಯನ್ನು ಬೆಂಬಲಿಸುವುದಿಲ್ಲ ಎಂದು ತಿಳಿಸಿದ್ದಾರೆ.