ರಾಧಿಕಾ ಪಂಡಿತ್‌ಗೆ ಜನ್ಮದಿನದ ಸಂಭ್ರಮ

ಬೆಂಗಳೂರು, ಮಾ ೭- ಸ್ಯಾಂಡಲ್‌ವುಡ್ ಸಿಂಡ್ರೆಲಾ ನಟಿ ರಾಧಿಕಾ ಪಂಡಿತ್ ಅವರಿಗೆ ಇಂದು ಹುಟ್ಟುಹಬ್ಬ ಸಂಭ್ರಮ.
ನಟಿ ರಾಧಿಕಾ ಪಂಡಿತ್ ಅವರ ಹುಟ್ಟುಹಬ್ಬಕ್ಕೆ ಸೆಲೆಬ್ರಿಟಿಗಳು, ಗಣ್ಯರು ಹಾಗೂ ಅಭಿಮಾನಿಗಳಿಂದ ಶುಭಾಶಯದ ಮಹಾಪೂರವೇ ಹರಿದು ಬಂದಿದೆ. ಅವರು ಈ ವರ್ಷ ಫ್ಯಾನ್ಸ್ ಜೊತೆ ಅವರು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ. ಇದು ಅಭಿಮಾನಿಗಳಿಗೆ ಬೇಸರ ತಂದಿದೆ.
ರಾಕಿಂಗ್ ಸ್ಟಾರ್ ಯಶ್ ಅವರನ್ನು ಮದುವೆಯಾದಾಗಿನಿಂದ ಸಂಸಾರ, ಮಕ್ಕಳು ಅಂತ ಫುಲ್ ಬ್ಯುಸಿಯಾಗಿದ್ದಾರೆ. ಆದರೆ ತಮ್ಮ ಫ್ಯಾನ್ಸ್ ಜೊತೆ ಸದಾ ಸಾಮಾಜಿಕ ಜಾಲತಾಣಗಳಲ್ಲಿ ಸಂಪರ್ಕದಲ್ಲಿದ್ದಾರೆ. ಇಂದು ಮಿಸಸ್ ರಾಮಾಚಾರಿ ೩೯ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ.
ಈ ಪ್ರಯುಕ್ತ ಒಂದು ದಿನ ಮುಂಚಿತವಾಗಿಯೇ ಅಭಿಮಾನಿಗಳಿಗೆ ಅಪ್ಡೇಟ್ ನೀಡಿದ್ದಾರೆ. ಪ್ರತಿ ವರ್ಷ ತಮ್ಮ ಹುಟ್ಟುಹಬ್ಬವನ್ನು ಅಭಿಮಾನಿಗಳ ಜೊತೆ ಸೆಲೆಬ್ರೇಟ್ ಮಾಡುತ್ತಿದ್ದರು. ಈ ಬಾರಿ ತಾವು ಮನೆಯಿಂದ ದೂರ ಇರುವುದಾಗಿ ತಿಳಿಸಿದ್ದಾರೆ. ದೂರದ ಊರಿನಲ್ಲಿ ಹುಟ್ಟುಹಬ್ಬ ಆಚರಿಸಿಕೊಳ್ಳು ತ್ತಿರುವುದಾಗಿ ಇನ್ಸ್ಟಾಗ್ರಾಂ ಪೋಸ್ಟ್‌ನಲ್ಲಿ ಹೇಳಿದ್ದಾರೆ.
ಇದೇ ಮೊದಲ ಬಾರಿಗೆ ಮನೆಯಿಂದ ದೂರ ಹೋಗಿ ಹುಟ್ಟುಹಬ್ಬ ಆಚರಿಸಿಕೊಳ್ಳಲಿದ್ದೇನೆ. ನನ್ನ ಪ್ರೀತಿಯ ಅಭಿಮಾನಿಗಳಿಗೆ ಇದರಿಂದ ಬೇಸರ ಆಗಬಹುದು ಎಂಬುದು ನನಗೆ ತಿಳಿದಿದೆ. ಹಾಗಾಗಿ ಇಲ್ಲಿ ಒಂದು ಆಕ್ಟಿವಿಟಿ ಪ್ಲ್ಯಾನ್ ಮಾಡಿದ್ದೇನೆ. ಆ ಮೂಲಕ ನಿಮ್ಮ ಜೊತೆ ಸಂಪರ್ಕದಲ್ಲಿ ಇರಬಹುದು’ ಎಂದು ರಾಧಿಕಾ ಪಂಡಿತ್ ಪೋಸ್ಟ್ ಮಾಡಿದ್ದಾರೆ.
೨೦೦೮ರಲ್ಲಿ ರಿಲೀಸ್ ಆದ ‘ಮೊಗ್ಗಿನ ಮನಸು’ ಸಿನಿಮಾ ಮೂಲಕ ಚಿತ್ರರಂಗಕ್ಕೆ ರಾಧಿಕಾ ಪಂಡಿತ್ ಕಾಲಿಟ್ಟು ಭಾರಿ ಯಶಸ್ಸು ಕಂಡಿದ್ದರು. ಆನಂತರ ೨೦೧೯ರಲ್ಲಿ ತೆರೆಗೆ ಬಂದ ‘ಆದಿ ಲಕ್ಷ್ಮೀ ಪುರಾಣ’ ಚಿತ್ರದ ಮೂಲಕ ಅವರು ಮತ್ತೆ ಕಂಬ್ಯಾಕ್ ಮಾಡಿದ್ದರು. ಇದಾದ ಬಳಿಕ ಅವರು ಯಾವುದೇ ಸಿನಿಮಾಗಳಲ್ಲಿ ನಟಿಸಿಲ್ಲ, ಅಭಿಮಾನಿಗಳು ಮತ್ತೆ ನಟಿಸುವಂತೆ ಒತ್ತಾಯ ಮಾಡಿದ್ದಾರೆ.