ರಾಧಿಕಾ ಖಾತೆಗೆ ಒಂದು ಕೋಟಿ ವರ್ಗಾವಣೆ

ಬೆಂಗಳೂರು, ಜ. ೬- ಕೋಟ್ಯಂತರ ರೂಪಾಯಿ ವಂಚನೆ ನಡೆಸಿ ಬಂಧಿತನಾಗಿರುವ ಆರೋಪಿ ಯುವರಾಜ ಅಲಿಯಾಸ್ ಸ್ವಾಮಿಯು ಸ್ಯಾಂಡಲ್ ವುಡ್ ನಟಿ ಹಾಗೂ ನಿರ್ಮಾಪಕಿ ರಾಧಿಕಾ ಕುಮಾರಸ್ವಾಮಿ ಬ್ಯಾಂಕ್ ಖಾತೆಗೆ ಯುವರಾಜ್ ಒಂದು ಕೋಟಿ ರೂ.ಗಳನ್ನು ವರ್ಗಾವಣೆ ಮಾಡಿರುವುದು ಸಿಸಿಬಿ ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಆರೋಪಿ ಸ್ವಾಮಿಯ ಸಿನಿಮಾ ನಿರ್ಮಾಣ, ವ್ಯವಹಾರ, ಹಣ ವರ್ಗಾವಣೆ ಸೇರಿದಂತೆ ವಿವಿಧ ಆಯಾಮಗಳಲ್ಲಿ ತನಿಖೆ ಕೈಗೊಂಡಿರುವ ಸಿಸಿಬಿ ಪೊಲೀಸರಿಗೆ ರಾಧಿಕಾ ಕುಮಾರಸ್ವಾಮಿ ಬ್ಯಾಂಕ್ ಖಾತೆಗೆ ಆರೋಪಿಯು ಒಂದು ಕೋಟಿ ರೂ.ಗಳನ್ನು ವರ್ಗಾವಣೆ ಮಾಡಿರುವುದು ಪತ್ತೆಯಾಗಿದೆ.
ಹಣ ವರ್ಗಾವಣೆಯ ಪರಿಶೀಲನೆ ಬಳಿಕ ರಾಧಿಕಾ ಕುಮಾರಸ್ವಾಮಿ ಅವರನ್ನು ವಿಚಾರಣೆಗೆ ಕರೆಯುವ ಸಾಧ್ಯತೆಯಿದೆ ಎಂದು ಸಿಸಿಬಿ ಮೂಲಗಳು ತಿಳಿಸಿವೆ. ಹಣ ವರ್ಗಾವಣೆ ಸಂಬಂಧಿಸಿದಂತೆ ಈಗಾಗಲೇ ರಾಧಿಕಾ ಸಹೋದರ ರವಿರಾಜ್‌ನನ್ನು ಸಿಸಿಬಿ ಅಧಿಕಾರಿಗಳು ಕರೆಸಿ ವಿಚಾರಣೆ ನಡೆಸಿರುವುದು ನಟಿ ರಾಧಿಕಾಗೆ ಸಂಕಷ್ಟ ಎದುರಾಗಲಿದೆಯಾ ಎಂಬ ಪ್ರಶ್ನೆ ಮೂಡಿದೆ
ಶಿವಮೊಗ್ಗ ಮೂಲ:
ಶಿವಮೊಗ್ಗ ಮೂಲದ ಆರೋಪಿಯು ಹಲವು ವರ್ಷಗಳಿಂದ ನಗರದಲ್ಲಿ ನೆಲೆಸಿದ್ದು ತಾನು ಆರ್‌ಎಸ್‌ಎಸ್‌ನ ಹಿರಿಯ ನಾಯಕ ಎಂದು ಬಿಂಬಿಸಿಕೊಳ್ಳುತ್ತಾ ಆರ್‌ಎಸ್‌ಎಸ್ ಹಾಗೂ ಬಿಜೆಪಿ ಹಿರಿಯ ನಾಯಕರ ರೀತಿಯಲ್ಲೇ ವೇಷ ಧರಿಸಿ ಪೋಸ್ ನೀಡುತಿದ್ದ. ಎಲ್ಲರೂ ನನಗೆ ಪರಿಚಯವಿದ್ದಾರೆ, ನಾವು ಅವರ ಬಳಿ ಕೆಲಸ ಮಾಡಿಸಿಕೊಡುತ್ತೇನೆ ಎಂದು ಹೇಳಿಕೊಳ್ಳುತ್ತಿದ್ದ. ವಿಮಾನ ಮಾರ್ಗವಾಗಿ ಅತಿ ಹೆಚ್ಚು ಬೆಂಗಳೂರು -ದೆಹಲಿ ನಡುವೆ ಸಂಚರಿಸುವ ಪ್ರಯಾಣಿಕರನ್ನು ಗುರಿಯಾಗಿಸಿಕೊಂಡು ಪರಿಚಯಿಸಿಕೊಂಡು ತಾನು ಪ್ರಭಾವಿ ಎಂದು ನಂಬಿಸುತ್ತಿದ್ದ.
ನಂಬಿಸಿ ವಸೂಲಿ:
ನಂಬಿಕೆ ಗಳಿಸಿದ ಬಳಿಕ ಸರ್ಕಾರದ ಮಟ್ಟದಲ್ಲಿ ಕೆಲಸ ಕಾರ್ಯ ಮಾಡಿಕೊಡುತ್ತೇನೆ ಎಂದು ವಂಚಿಸುತಿದ್ದ. ಅದೇ ರೀತಿ ಐಎಎಸ್, ಐಪಿಎಸ್ ಹಾಗೂ ಕೆಎಎಸ್ ಅಧಿಕಾರಿಗಳಿಗೆ ಹೇಳುವ ಜಾಗದ ಹುದ್ದೆ ಕೊಡಿಸುವುದಾಗಿ ನಂಬಿಸಿ ಹಣ ವಸೂಲಿ ಮಾಡುತ್ತಿದ್ದ.
ವರ್ಗಾವಣೆ ಮಾಡಿಸದೇ, ಹಣವನ್ನೂ ನೀಡದೇ ಸತಾಯಿಸುತ್ತಿದ್ದ. ಕೆಲ ರಾಜಕಾರಣಿಗಳಿಗೆ ನಿಗಮ ಮಂಡಳಿ ಕೊಡಿಸುತ್ತೇನೆ ಎಂದು ನಂಬಿಸಿ ಹಣ ವಂಚಿಸಿದ್ದ ಎಂಬುವುದು ವಿಚಾರಣೆ ವೇಳೆ ತಿಳಿದುಬಂದಿದೆ.
ನಿವೃತ್ತ ಜಡ್ಜ್‌ಗೆ ದೋಖಾ:
ರಾಜಕಾರಣಿಗಳು, ಸರ್ಕಾರಿ ಅಧಿಕಾರಿಗಳು ಹಾಗೂ ನಿವೃತ್ತ ಜಡ್ಜ್ ಸೇರಿದಂತೆ, ವಿವಿಧ ವರ್ಗದ ಜನರನ್ನು ವಂಚಿಸುತ್ತಿದ್ದ ವಂಚಕ ಇದೀಗ ಖ್ಯಾತ ನಟಿ ಬ್ಯಾಂಕ್ ಖಾತೆಗೆ ಕೋಟ್ಯಂತರ ರೂಪಾಯಿ ಹಣ ಹಾಕಿರುವ ಆರೋಪ ಕೇಳಿಬಂದಿದೆ.