ರಾಧಾಕೃಷ್ಣ ಗೆಲುವು ಖಚಿತ: ಕೆಕೆಆರ್‍ಡಿಬಿ ಅಧ್ಯಕ್ಷರ ವಿಶ್ವಾಸಜಾಗ್ರತೆಯ ಮತದಾನಕ್ಕೆ ಅಜಯಸಿಂಗ್ ಕರೆ

ಕಲಬುರಗಿ,ಮೇ 5: ರಾಜ್ಯ ಸರಕಾರ ಯಶಸ್ವಿಯಾಗಿ ಜಾರಿಗೆ ತಂದಿರುವ ಐದು ಗ್ಯಾರಂಟಿಗಳಿಂದ ಜನರು ತೃಪ್ತರಾಗಿದ್ದು, ಇದರಿಂದಾಗಿ ಜನರು ಅತ್ಯಂತ ಎಚ್ಚರಿಕೆಯಿಂದ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಪರವಾಗಿ ಮತ ಚಲಾಯಿಸಬೇಕೆಂದು ಕೆಕೆಆರ್ ಡಿಬಿ ಅಧ್ಯಕ್ಷ ಹಾಗೂ ಜೇವರ್ಗಿ ಶಾಸಕ ಡಾ.ಅಜಯಸಿಂಗ್ ಹೇಳಿದರು.
ಇಲ್ಲಿನ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಪ್ರತಿ ತಿಂಗಳು 200 ಕೋಟಿ ಮಹಿಳೆಯರು ಶಕ್ತಿ ಯೋಜನೆಯಡಿ ಉಚಿತವಾಗಿ ಬಸ್ ಪ್ರಯಾಣ ಮಾಡುತ್ತಿದ್ದಾರೆ. ಗೃಹಲಕ್ಷ್ಮಿ ಯೋಜನೆಯಡಿ ಪ್ರತಿ ತಿಂಗಳು 1 ಕೋಟಿ 28 ಲಕ್ಷ ಮಹಿಳೆಯರು ಪ್ರತಿ ತಿಂಗಳು ತಲಾ 2000 ರೂ. ಹಣ ಪಡೆಯುತ್ತಿದ್ದಾರೆ. ಯುವ ನಿಧಿ ಅಡಿ ಪದವಿ ಪಡೆದ ಯುವಕರಿಗೆ ಅನುಕೂಲ ಆಗಿದೆ. ಈ ಎಲ್ಲ ಅಂಶಗಳನ್ನು ಜನರು ಮೆಚ್ಚಿದ್ದಾರೆ. ಹೀಗಾಗಿ, ಹಾಲಿ ಲೋಕಸಭಾ ಚುನಾವಣೆಯಲ್ಲಿ ಅತ್ಯಂತ ಜಾಗ್ರತೆಯಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ರಾಧಾಕೃಷ್ಣ ಅವರ ಪರವಾಗಿ ಮತ ಚಲಾಯಿಸಬೇಕೆಂದು ಸಲಹೆ ನೀಡಿದರು.
ನಮ್ಮ ಭಾಗದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಯಾರು ಕೈಗೊಂಡಿದ್ದಾರೆ ಎಂಬುದನ್ನು ಮತದಾರರು ಪರಾಮರ್ಶಿಸಬೇಕು. ಬದಲಿಗೆ ಭಾವನಾತ್ಮಕ ಅಂಶಗಳಿಗೆ ಆದ್ಯತೆ ನೀಡದೆ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಬೇಕೆಂದು ಆಗ್ರಹಿಸಿದರು.
ಶೇ. 72.20 ಮಹಿಳೆಯರು ಕಾಂಗ್ರೆಸ್ ಪಕ್ಷದ ಪರವಾಗಿ ಜಿಲ್ಲೆಯಾದ್ಯಂತ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಲು ತುದಿಗಾಲಲ್ಲಿ ನಿಂತಿದ್ದಾರೆ. ಈ ಬಗ್ಗೆ ಪಕ್ಷದ ವತಿಯಿಂದ ನಡೆಸಿದ ಸಮೀಕ್ಷೆಯಿಂದ ಗೊತ್ತಾಗಿದೆ. ಹಾಗಾಗಿ ಈ ಬಾರಿ ಸುಮಾರು ಒಂದುವರೆ ಲಕ್ಷ ಮತಗಳ ಅಂತರದಿಂದ ಕಾಂಗ್ರೆಸ್ ಅಭ್ಯರ್ಥಿ ರಾಧಾಕೃಷ್ಣ ಅವರು ಗೆಲುವು ಸಾಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಜಗದೇವ ಗುತ್ತೇದಾರ್, ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಶರಣಕುಮಾರ್ ಮೋದಿ,
ಯುವ ಮುಖಂಡರಾದ ಚೇತನ್ ಗೋನಾಯಕ್, ಅರವಿಂದ ಚವ್ಹಾಣ, ಸಂಗಮೇಶ ನಾಗನಳ್ಳಿ, ನೀಲಕಂಠ ಮುಲಗೆ, ರಾಜಗೋಪಾಲರೆಡ್ಡಿ, ಶರಣು ಭೂಸನೂರ, ಮೆಹಬೂಬ್ ಮುಲ್ಲಾ, ಮಹಾಂತೇಶ್ ಕವಲಗಾ, ಪ್ರಶಾಂತ ಕೊರಳ್ಳಿ, ಬಸವರಾಜ ಬೂದಿಹಾಳ ಸೇರಿದಂತೆ ಇತರರು ಉಪಸ್ಥಿತರಿದ್ದರು.