ರಾತ್ರೋ ರಾತ್ರಿ ವಕೀಲರ ಮೊರೆ ಹೋದ ದಿಗಂತ್- ಐಂದ್ರಿತಾ!

ಬೆಂಗಳೂರು,ಸೆ.೧೬-ಸಿಸಿಬಿ ಪೊಲೀಸರು ವಿಚಾರಣೆಗೆ ಹಾಜರಾಗುವ ಹಿನ್ನೆಲೆಯಲ್ಲಿ ಸ್ಟಾರ್ ದಂಪತಿ ದಿಗಂತ್ ಮತ್ತು ಐಂದ್ರಿತಾ ರೇ ನಿನ್ನೆ ರಾತ್ರಿ ವಕೀಲರನ್ನು ಭೇಟಿಯಾಗಿ ಸಲಹೆ ಪಡೆದುಕೊಂಡಿದ್ದಾರೆ
ತಡರಾತ್ರಿ ವಕೀಲರನ್ನು ಸಂಪರ್ಕಿಸಿರುವ ಮನಸಾರೆ ಜೋಡಿ,ಕಾನೂನಿನಲ್ಲಿರುವ ಅವಕಾಶಗಳು ಹಾಗೂ ವಿಚಾರಣೆಯನ್ನು ಹೇಗೆ ಎದುರಿಸಬೇಕು? ಎನ್ನುವ ಬಗ್ಗೆಯೂ ಮಾಹಿತಿ ಪಡೆದುಕೊಂಡಿದ್ದಾರೆ. ವಿಚಾರಣೆಗೆ ಹಾಜರಾಗುವ ಮುನ್ನ ದಿಗಂತ್ ಮತ್ತು ಐಂದ್ರಿತಾ ಎಲ್ಲಿದ್ದೀವಿ ಎಂಬುದರ ಗುಟ್ಟು ಬಿಟ್ಟುಕೊಟ್ಟಿರಲಿಲ್ಲ. ಇತ್ತ ದಿಗಂತ್ ತಾಯಿ, ಮಗ ಹಾಗೂ ಸೊಸೆ ಕೇರಳಕ್ಕೆ ಹೋಗಿದ್ದಾರೆ ಎಂದು ಹೇಳಿದ್ದರು.
ಸ್ಟಾರ್ ಜೋಡಿ ವಿಚಾರಣೆಗೆ ಆಗಮಿಸುವ ಹಿನ್ನೆಲೆ ಸಿಸಿಬಿ ಕಚೇರಿ ಸುತ್ತಮುತ್ತ ಹೆಚ್ಚಿನ ಭದ್ರತೆ ನಿಯೋಜನೆ ಮಾಡಲಾಗಿದೆ. ಕಾಟನ್ ಪೇಟೆ ಪೊಲೀಸರ ನೇತೃತ್ವದಲ್ಲಿ ಹೆಚ್ಚಿನ ಭದ್ರತೆ ನಿಯೋಜಿಸಲಾಗಿದ್ದು, ಹಿರಿಯ ಅಧಿಕಾರಿಗಳ ಸೂಚನೆ ಮೇರೆಗೆ ಎಲ್ಲ ಮುಂಜಾಗ್ರತ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.
ಸಂಜನಾ-ರಾಗಿಣಿಗೆ ಮುನ್ನವೇ ನಟ ದಿಗಂತ್ ಹೆಸರು ಕೇಳಿಬಂದಿತ್ತು. ಆರಂಭದಲ್ಲೇ ನಟ ದಿಗಂತ್‌ರನ್ನು ಎನ್‌ಸಿಬಿ ವಿಚಾರಣೆಗೆ ಒಳಪಡಿಸಿತ್ತು ಎನ್ನಲಾಗಿತ್ತು. ಮೂರು ದಿನಗಳ ಹಿಂದಷ್ಟೇ ನಟಿ ಶೇಖ್ ಫಾಝಿಲ್, ರಾಹುಲ್ ಶೆಟ್ಟಿ ಜೊತೆ ಐಂದ್ರಿತಾ ರೇ ಕಾಣಿಸಿಕೊಂಡ ಫೋಟೋಗಳು ವೈರಲ್ ಆಗಿದ್ದವು. ೨೦೧೮ರಲ್ಲಿ ಎರಡು ಬಾರಿ ಶ್ರೀಲಂಕಾದ ಕೊಲಂಬೋದಲ್ಲಿರುವ ಬ್ಯಾಲೆ ಕ್ಯಾಸಿನೋಗೆ ನಟಿ ಐಂದ್ರಿತಾ ರೇ ಹೋಗಿ ಬಂದಿದ್ದರು. ಹಬ್ಬಕ್ಕೆ ನಾನು ಹೋಗ್ತಿದ್ದೀ, ನೀವು ಬನ್ನಿ. ನನಗೆ ಆಹ್ವಾನ ನೀಡಿರುವ ಶೇಖ್ ಫಾಝಿಲ್‌ಗೆ ಧನ್ಯವಾದ ಎಂದಿದ್ದ ವಿಡಿಯೋ ಸಹ ವೈರಲ್ ಆಗಿತ್ತು. ಈ ಬಗ್ಗೆ ಸ್ಪಷ್ಟನೆ ನೀಡಿದ್ದ ನಟಿ ಐಂದ್ರಿತಾ ರೇ, ಸಿನಿಮಾ ಪ್ರಮೋಷನ್‌ಗಾಗಿ ಕ್ಯಾಸಿನೋಗೆ ಹೋಗಿದ್ದೇ ಅಷ್ಟೇ. ನನಗೂ ಫಾಝಿಲ್‌ಗೂ ಯಾವುದೇ ಸಂಬಂಧ ಇಲ್ಲ. ಅವರೇನು ಎನ್ನುವುದು ಈಗಷ್ಟೇ ಗೊತ್ತಾಗಿದೆ. ನನಗೂ ಡ್ರಗ್ ಕೇಸ್‌ಗೂ ಸಂಬಂಧ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.