ರಾತ್ರೋರಾತ್ರಿ ವರದಿ ಬೇಡಾ ತಾಕತ್ತಿದ್ದರೆ ಸಾರ್ವಜನಿಕ ಚರ್ಚೆಗೆ ಮುಂದಿಡಿ: ರವಿ ಲಮಾಣಿ

ವಿಜಯಪುರ, ಸೆ.25- ನ್ಯಾ.ಎ.ಜೆ ಸದಾಶಿವ ಆಯೋಗ ವರದಿಯನ್ನು ತಿರಸ್ಕರಿಸುವಂತೆ ಹಾಗೂ ಬಂಜಾರಾ ಕುಲಗುರು ಶ್ರೀ ಸಂತ ಸೇವಾಲಾಲ ಮಹಾರಾಜರಿಗೆ ಅಪಮಾನ ಮಾಡಿದ ಕಿಡಿಗೇಡಿಗಳ ಮೇಲೆ ಸೂಕ್ತ ಕಾನೂನಿನ ಕ್ರಮಕ್ಕಾಗಿ ಒತ್ತಾಯಿಸಿ ಇಂದು ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಒತ್ತಾಯಿಸಿದರು.
ಆಲ್ ಇಂಡಿಯಾ ಬಂಜಾರಾ ಸೇವಾ ಸಂಘ ಹಾಗೂ ದಲಿತ ಸಮೂದಾಯದ ಬೋವಿ, ಕೊಂಚಕೊರ ಸಂಘಟನೆಯ ಸಂಯುಕ್ತಾಶ್ರಯದಲ್ಲಿಂದು ನಗರದ ಅಂಬೇಡ್ಕರ್ ಸರ್ಕಲ್ ಮೂಲಕ ವಿವಿಧ ಘೋಷಗಳನ್ನು ಕೂಗುತ್ತಾ ಪ್ರತಿಭಟನೆ ಮಾಡಿದ ಅವರು ಕೊನೆಗೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಬಂಜಾರಾ ಆಲ್ ಇಂಡಿಯಾ ಸೇವಾ ಸಂಘದ ಜಿಲ್ಲಾ ಯುವ ಘಟಕದ ಅಧ್ಯಕ್ಷ ರವಿ ಸೇವು ಲಮಾಣಿ ಅವರು ಮಾತನಾಡಿ ನ್ಯಾಯಾಧೀಶ ಸದಾಶಿವ ಆಯೋಗ ವರದಿಯೂ ಅವೈಜ್ಞಾನಿಕವಾಗಿದ್ದು, ಬಂಜಾರ ಸಮಾಜ ಸೇರಿದಂತೆ ಭೋವಿ, ಕೊಂಚ, ಕೊರಮ ಜಾತಿಯವರನ್ನು ಹೊರ ಹಾಕುವ ಉದ್ದೇಶದಿಂದ ಮತ್ತು ಕೆಳ ವರ್ಗದ ಜನತೆ ಕಚ್ಚಾಡುವಂತಿರಬೇಕು, ತಾವು ರಾಜಕೀಯ ಬೇಳೆ ಬೆಯಿಸಿಕೊಳ್ಳಬೇಕೆಂಬ ಉದ್ದೇಶದಿಂದ ನಮ್ಮಲ್ಲಿ ದ್ವೇಶದ ಮನೋಭಾವನೆ ಹುಟ್ಟಿಸಲು ಕೆಲವು ಕುತಂತ್ರ ರಾಜಕಾರಣಿಗಳು ನಮ್ಮನ್ನು ಸಂಘರ್ಷಕ್ಕೆ ಅಣಿಮಾಡಿರುವುದು ಖಂಡನೀಯ ಎಂದು ಹೇಳಿದರು.
ನ್ಯಾಯಮುರ್ತಿ ಸದಾಶಿವ ಆಯೋಗವು ಸಂಪೂರ್ಣ ಅಸಂವಿಧಾನಿಕವಾಗಿದ್ದು ನಾಲ್ಕು ಗೋಡೆಗಳ ಮಧ್ಯ ರಾತ್ರೋರಾತ್ರಿ ತಯಾರಿಸಲಾದ ವರದಿಯಾಗಿದೆ. ಬಂಜಾರಾ ಸಮೂದಾಯ ಹಾಗೂ ಇನ್ನಿತರ ದಲಿತ ಸಮುದಾಯಗಳು ಈಗಲೂ ತುತ್ತು ಅನ್ನಕ್ಕಾಗಿ ಗುಳೆ ಹೋಗುವುದನ್ನು ನಾವೆಲ್ಲರು ಕಣ್ಣಾರೆ ಕಾಣುತಿದ್ದೆವೆ ಎಂದರು.
ರಾಜ್ಯದಲ್ಲಿ ದಲಿತ ಸಮೂದಾಯದಲ್ಲಿ ಒಟ್ಟು 101 ಸಮುದಾಯಗಳ ಇದ್ದು, ಇಟ್ಟು ದೊಡ್ಡ ಮಟ್ಟದ ಸಮೂದಾಯಕ್ಕೆ, ಅಸಂವಿಧಾನಿಕ ವಾಗಿರುವ, ರಾತ್ರೋ ರಾತ್ರಿ ತಯಾರಾದ ನ್ಯಾಯಮುರ್ತಿ ಸದಾಶಿವ ಆಯೋಗದಲ್ಲಿ ಕೇವಲ 1% ಮಿಸಲಾತಿಯನ್ನು ನಾವೆಲ್ಲರು ಖಂಡಿಸುತ್ತೆವೆ. ಅಷ್ಟು ದೊಡ್ಡ ಸಮುದಾಯವನ್ನು ಕಡೆಗಣಿಸಿ, ಹಿಂದುಗಳ ನಡುವೆ ಜಗಳ ಹಚ್ಚು ಬೆಂಕಿ ಇಡುವ ಕೆಲಸವನ್ನು ಇಂದಿನ ಕಲವು ಕುತಂತ್ರಿ ರಾಜಕಾರಣಿಗಳು ಮಾಡುತ್ತಿದ್ದಾರೆ. ಎಂದರು.
ಈಗಲೇ ಸದಾಶಿವ ಆಯೋಗದ ವರದಿಯನ್ನು ಮಾನ್ಯ ಮುಖ್ಯಮಂತ್ರಿಗಳು ಪರಿಶೀಲಿಸಿ ಅದನ್ನು ತಿರಸ್ಕರಿಸಬೇಕು. ಇಲ್ಲದೆ ಹೋದಲ್ಲಿ ಅದನ್ನು ಸರಿಯಾಗಿ ಸಂವಿಧಾನಿಕವಾಗಿ ಪರಿಶೀಲನೆ ನಡಿಸಿ ತಾಕತ್ತಿದ್ದರೆ ಸಾರ್ವಜನಿಕವಾಗಿ ಚರ್ಚೆಗೆ ಇಡಬೇಕು ಎಂದರು.
ಆಲ್ ಇಂಡಿಯಾ ಬಂಜಾರ ಸೇವಾ ಸಂಘದ ಜಿಲ್ಲಾ ಅಧ್ಯಕ್ಷ ರಾಜು ಲಕ್ಷ್ಮಣ ಅವರು ಮಾತನಾಡಿ ನಾವು ಬಂಜಾರಾ ಜನಾಂಗದವರು ಕಾಡಿನಲ್ಲಿ ಇದ್ದವರು, ಬೇಟೆ ಆಡಿ ಜೀವನ ನಡೆಸಿದವರು, ನಮಗೆ ಶಾಂತಿಯಿಂದ ಇರಲು ಗೊತ್ತು, ಕ್ರಾಂತಿಯಿಂದ ಇರಲು ಗೊತ್ತು, ನಮಗೆ ಶಾಂತಿಯಿಂದ ಇರಲು ಬಿಡಿ ಕ್ರಾಂತಿಕಾರಿ ಬೆಳವಣಿಗೆಯಾಗಲು ಬಿಡದಿರಿ ಎಂದು ಸರ್ಕಾರಕ್ಕೆ ಎಚ್ಚರಿಕೆಯನ್ನು ನೀಡಿದರು.
ಈ ಆಯೋಗದ ವರದಿಯನ್ನು ಎಲ್ಲ ಸಮೂದಾಯಗಳ ಹಿತಾಸಕ್ತಿಯಿಂದ ಸರ್ಕಾರ ಕೂಡಲೆ ಯಾವುದೇ ಮುಖಾ ಮುಲಾಜಿಲ್ಲದೆ ಸರಾಸಗಟಾಗಿ ತಿರಸ್ಕರಿಸಬೇಕು ಹಾಗೂ ಪ್ರಸ್ತು ಕೆಲವು ರಾಜಕಾರಣಿಗಳು ನಮ್ಮ ಧಾರ್ಮಿಕ ಭಾವನೆಗಳಿಗೆ ಧಕ್ಕೆ ನೀಡಿದರೆ ಮತ್ತು ರಾಜ್ಯವ್ಯಾಪಿ ಅಲ್ಲೋಲ ಕಲ್ಲೋಲ ಸೃಷ್ಠಿಮಾಡಿ ಒಬ್ಬರಿಗೊಬ್ಬರು ಹೊಡೆದಾಡುವ ಪರಿಸ್ಥಿತಿಯನ್ನು ನಿರ್ಮಾಣ ಮಾಡಬಾರದೆಂದು ಅರಿತು ಇದಕ್ಕೆ ಪೂರಕವಾದ ದಾವಣಗೇರೆ ಜಿಲ್ಲೆ ನ್ಯಾಮತಿ ತಾಲೂಕಿನಲ್ಲಿ ಮಾದಿಗ ದಂಡೂರ ಸಮಿತಿಯ ತಿಮ್ಮಾಪೂರ ಲೋಕೇಶ, ಜಗಳೂರು ಕುಬೇರಪ್ಪ, ರಾಜಪ್ಪ, ಹರೀಶ ಹಾಗೂ ಇತರರನ್ನು ಕುಮ್ಮಕ್ಕೂ ನೀಡಿ ನಮ್ಮ ಬಂಜಾರಾ ಸಮಾಜದ ಸಂತ ಸೇವಾಲಾಲ ಮಹಾರಾಜರಿಗೆ ಅಪಮಾನ ಮಾಡಿ ಹಾಗೂ ಸಚಿವ ಪ್ರಭು ಚಹ್ವಾಣ ಏಕವಚನದಲ್ಲಿ ಹಾಡಿ ಕುಣಿದು ಕುಪ್ಪಳಿಸಿ ಅಪಮಾನ ಮಾಡಿರುವುದನ್ನು ಇದಕ್ಕಾಗಿ ಕೂಡಲೆ ಅಪಮಾನ ಮಾಡಿದವರನ್ನು ಬಂಧಿಸಬೇಕು ಎಂದು ಒತ್ತಾಯಿಸಿದರು.
ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ಈ ಕುತಂತ್ರಿಗಳ ಮೇಲೆ ಸೂಕ್ತ ಕ್ರಮ ಕೈಗೊಂಡು ಬಂಧಿಸಬೇಕು. ನಮ್ಮ ಕುಲ ಗುರುವಿಗೆ ಯಾವುದೇ ಅಪಮಾನ ಮಾಡದ ಹಾಗೆ ತಾಕೀತು ಮಾಡಬೇಕು. ಒಂದು ವೇಳೆ ಸರ್ಕಾರ ನಿರ್ಲಕ್ಷ ಮಾಡಿದರೇ ರಾಜ್ಯಾದ್ಯಂತ ಕೋಮು ಸಂಘರ್ಷ ಹಾಗೂ ರಕ್ತಪಾತ ಆಗಬಹುದೆಂದು ಈ ಮೂಲಕ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಬಂಜಾರಾ ಮುಖಂಡ ಡಾ.ಬಾಬು ರಾಜೇಂದ್ರ ಮಾತನಾಡಿದರು. ಬಂಜಾರಾ ಸಮೂದಾಯದ ಕೆಸರಟ್ಟಿ ಸ್ವಾಮಿಜಿ, ತೊರವಿಯ ಧನಸಿಂಗ ಸ್ವಾಮಿಜಿ, ಗೋಪಾಲ ಮಹರಾಜ ತೊರವಿ, ಸಂಜೀವ ಮಹಾರಾಜ ಆಹೇರಿ, ಹಾಗೂ ಬಂಜಾರಾ ಸಮೂದಾಯದ ಮುಖಂಡರಾದ, ರಾಜು ಲಕ್ಷ್ಮಣ ಜಾಧವ, ರಾಜಪಾಲ ಚಹ್ವಾಣ, ಅರಿ ರಾಠೋಡ, ಅನುಶಾಬಾಯಿ ಜಾಧವ, ಸುನಿಲ ರಾಠೋಡ, ಕುಮಾರ ನಾಯಕ, ಅನಿಲ ನಾಯಕ, ರವಿರಾಜ ಜಾಧವ, ಕುಮಾರ ನಾಯಕ, ಪಾಲಾಕ್ಷೀ ರಾಠೋಡ, ಅಪ್ಪು ರಾಠೋಡ, ಧೇನು ರಾಠೋಡ ಹಾಗೂ ಇತರರಿದ್ದರು.