ರಾತ್ರಿ ಸುರಿದ ಅತಿ ಮಳೆಯಿಂದ ಕೊಳೆಯುತ್ತಿದೆ ಬೆಳೆ – ತುಂಬಿಹರಿದ ಹಳ್ಳಕೊಳ್ಳ

ದೇವದುರ್ಗ.ಆ.೦೩- ತಾಲೂಕಿನ ವಿವಿಧೆಡೆ ಸೋಮವಾರ ಹಾಗೂ ಮಂಗಳವಾರ ತಡರಾತ್ರಿ ಧಾರಾಕಾರವಾಗಿ ಮಳೆ ಸುರಿದಿದ್ದು, ಅನ್ನದಾತರಿಗೆ ಆತಂಕತಂದಿದೆ. ರಾತ್ರಿವಿಡಿ ಮಳೆ ಸುರಿದ ಕಾರಣ ರೈತರ ಜಮೀನಿ ವಡ್ಡುವಾರಿ ತುಂಬಿಕೊಂಡಿದ್ದು, ನೀರುನಿಂತು ಬೆಳೆಗಳು ಕೊಳೆಯುವ ಸಾಧ್ಯತೆಯಿದೆ.
ದೇವದುರ್ಗ ಹೋಬಳಿಯಲ್ಲಿ ದಾಖಲೆ ೪೦.೮೦ಮಿಮೀ, ಅರಕೇರಾದಲ್ಲಿ ೧೩ಮಿಮೀ, ಗಬ್ಬೂರಿನಲ್ಲಿ ೧೩.೧೧ಮಿಮೀ, ಗಲಗನಲ್ಲಿ ೨೮ಮಿಮೀ ಹಾಗೂ ಜಾಲಹಳ್ಳಿಯಲ್ಲಿ ೧೮.೨೦ಮಿಮೀ ಮಳೆ ಸುರಿದಿದೆ. ಮುಂಗಾರಿನಲ್ಲಿ ರೈತರು ಹತ್ತಿ, ತೊಗರಿ, ಮೆಣಸಿನಕಾಯಿ, ಸೂರ್ಯಕಾಂತಿ, ಸಜ್ಜೆ ಸೇರಿ ವಿವಿಧ ಬೆಳೆ ಬಿತ್ತನೆ ಮಾಡಿದ್ದು, ಸದ್ಯ ಬೆಳೆಗಳು ಸಮೃದ್ಧವಾಗಿ ಬೆಳೆದಿವೆ.
ಎರಡ್ಮೂರು ದಿನಗಳಿಂದ ಮಳೆ ಸುರಿಯುತ್ತಿರುವ ಕಾರಣ ಭೂಮಿಯಲ್ಲಿ ತೇವಾಂಶ ಹೆಚ್ಚಾಗಿದೆ. ಸೋಮವಾರ ರಾತ್ರಿಯಿಂದ ಬೆಳಗಿನವರೆಗೆ ಮಳೆ ಧಾರಾಕಾರವಾಗಿ ಸುರಿದ ಕಾರಣ ಬೆಳೆಗಳ ನಡುವೆ ನೀರುನಿಂತಿವೆ. ಈ ನೀರು ಒಂದೆರಡು ದಿನ ನಿಂತರೆ ಹತ್ತಿ, ತೊಗರಿ, ಸೂರ್ಯಕಾಂತಿ ಬೆಳೆ ಹಳದಿ ಬಣ್ಣಕ್ಕೆ ತಿರುಗಲಿವೆ. ಕೆಲಬೆಳೆ ತೇವಾಂಶ ಹೆಚ್ಚಾಗಿ ಒಣಗುವ ಸಾಧ್ಯತೆಯಿದೆ.
ಹಳದಿಬಣ್ಣಕ್ಕೆ ತಿರುಗಿದರೆ ಬಹುತೇಕ ಬೆಳೆ ರೋಗಕ್ಕೆ ತುತ್ತಾಗುವ ಸಾಧ್ಯತೆಯಿದ್ದು, ಬೆಳವಣಿಗೆ ಕುಂಠಿತತೊಂಡು ಚೇತರಿಸಿಕೊಳ್ಳುವುದು ಅನುಮಾನ. ಮುಂಗಾರು ಬಿತ್ತನೆ, ಬಿತ್ತನೆ ಬೀಜ, ರಸಗೊಬ್ಬರ, ಕ್ರಿಮಿನಾಶಕ ಸೇರಿ ರೈತರು ಹೆಕ್ಟೇರ್‌ಗೆ ೨೦-೨೫ಸಾವಿರ ರೂ. ಖರ್ಚು ಮಾಡಿದ್ದಾರೆ. ಗಬ್ಬೂರು, ಮಸರಕಲ್, ಹೂವಿನಹೆಡಗಿ, ಚಿಕ್ಕಹೊನ್ನಕುಣಿ, ಕರಿಗುಡ್ಡ, ನೀಲಗಲ್, ನಾಗಡದಿನ್ನಿ, ಗಣೇಕಲ್ ಸೇರಿ ವಿವಿಧೆಡೆ ರೈತರ ಜಮೀನಿನಲ್ಲಿ ನೀರು ನಿಂತಿದ್ದು, ಬೆಳೆ ಕೊಳೆಯುವ ಆತಂಕವಿದೆ. ಕೂಡಲೇ ಸಂಬಂಧಿಸಿದ ಕೃಷಿ ಇಲಾಖೆ ಅಧಿಕಾರಿಗಳು ಸಮೀಕ್ಷೆ ನಡೆಸಿ ರೈತರಿಗೆ ಬೆಳೆ ಪರಿಹಾರ ನೀಡಬೇಕು ಎಂದು ಕೃಷಿಕರು ಒತ್ತಾಯಿಸಿದ್ದಾರೆ.

ಸಂಚಾರ ಬಂದ್
ಅತಿಯಾದ ಮಳೆಗೆ ಗಬ್ಬೂರು ಹೋಬಳಿಯ ಮಸೀದಾಪುರ ಗ್ರಾಮದ ಹಳ್ಳ ಉಕ್ಕಿಹಿರಿದು ಸಂಚಾರ ಬಂದ್‌ಆಗಿದೆ. ಗಬ್ಬೂರಿನಿಂದ ಸಿರವಾರಗೆ ಗ್ರಾಮದ ಮೂಲಕ ಸಂಪರ್ಕವಿದ್ದು, ಮಧ್ಯರಾತ್ರಿಯಿಂದ ಹಳ್ಳಕಟ್ಟಿದ್ದು ಸಂಚಾರ ಬಂದ್‌ಆಯಿತು. ಇದರಿಂದ ಸಾರ್ವಜನಿರ ಓಡಾಟ, ರೈತರ ಸಂಚಾರ ಹಾಗೂ ಶಾಲಾ ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳು ಸಮಸ್ಯೆ ಎದುರಿಸಿದರು. ಗಬ್ಬೂರಿನಿಂದ ಸಿರವಾರಗೆ ೧೯ಕಿಮೀ ದೂರವಿದ್ದು, ಮಸೀದಾಪುರ, ಎನ್.ಗಣೇಕಲ್, ನಾಗಡದಿನ್ನಿ, ನೀಲಗಲ್ ಮೂಲಕ ಸಿರವಾರಗೆ ಸಂಪರ್ಕವಿದೆ. ಈಹಳ್ಳ ತುಂಬಿದ್ದರಿಂದ ಜನರು ನೀಲಗಲ್ ಸುಲ್ತಾನಪುರ, ಕಲ್ಮಲಾ ಮೂಲಕ ಓಡಾಡುತ್ತಿದ್ದಾರೆ. ಕೂಡಲೆ ಸೇತುವೆ ನಿರ್ಮಿಸಬೇಕು ಎಂದು ಗ್ರಾಮಸ್ಥರಾದ ಶಾಂತಕುಮಾರ ಹೊನ್ನಟಗಿ, ತುಕಾರಾಮ ಎನ್.ಗಣೇಕಲ್, ನರಸಪ್ಪ, ರಾಜಪ್ಪ ಸಿರವಾರಕರ್, ಮಲ್ಲಯ್ಯ ಒತ್ತಾಯಿಸಿದ್ದಾರೆ.

ಕೋಟ್===
ತಾಲೂಕಿನಲ್ಲಿ ಉತ್ತಮವಾಗಿ ಮಳೆ ಸುರಿದಿದ್ದು, ಬೆಳೆ ಹಾನಿಯಾದ ಬಗ್ಗೆ ನಮಗೆ ಈವರಗೆ ದೂರು ಬಂದಿಲ್ಲ. ಹಾನಿಯಾಗಿದ್ದರೆ ಕಂದಾಯ ನಿರೀಕ್ಷಕರು ಹಾಗೂ ಗ್ರಾಮ ಲೆಕ್ಕಾಧಿಕಾರಿಗಳ ಮೂಲಕ ಸರ್ವೇ ನಡೆಸಿ ಜಿಲ್ಲಾಡಳಿತಕ್ಕೆ ವರದಿ ನೀಡಲಾಗುವುದು.
| ಶ್ರೀನಿವಾಸ್ ಚಾಪೇಲ್
ತಹಸೀಲ್ದಾರ್