ರಾತ್ರಿ ಮೈಸೂರಿಗೆ ಮೋದಿ ಬಿಜೆಪಿಯಲ್ಲಿ ಸಂಚಲನ

ಬೆಂಗಳೂರು, ಏ.೮- ರಾಜ್ಯ ವಿಧಾನಸಭೆಗೆ ಮೇ ೧೦ ರಂದು ಚುನಾವಣೆ ಘೋಷಣೆಯಾಗಿ ಚುನಾವಣಾ ಕಾವು ಏರಿರುವಾಗಲೇ ಪ್ರಧಾನಿ ಮೋದಿ ಅವರು ಸಾಂಸ್ಕೃತಿಕ ನಗರಿ ಮೈಸೂರಿಗೆ ಆಗಮಿಸುತ್ತಿರುವುದು ಬಿಜೆಪಿ ಕಾರ್ಯಕರ್ತರಲ್ಲಿ ಉತ್ಸಾಹ-ಹುಮ್ಮಸ್ಸು ವೃದ್ಧಿಸಿದೆ.
ಪ್ರಧಾನಿ ಮೋದಿ ಅವರು ಮೈಸೂರು, ಚಾಮರಾಜನಗರ ಜಿಲ್ಲೆಗಳಲ್ಲಿ ನಡೆಯುವ ಸರ್ಕಾರಿ ಕಾರ್ಯಕ್ರಮದಲ್ಲಿ ಭಾಗಿಯಾಗಲು ರಾಜ್ಯಕ್ಕೆ ಬರುತ್ತಿರುವರಾದರೂ ಅವರ ಭೇಟಿ ಪಕ್ಷದಲ್ಲಿ ಸಂಚಲನ ಮೂಡಿಸಿದ್ದು, ಮೈಸೂರಿನ ಬಿಜೆಪಿ ಕಾರ್ಯಕರ್ತರು ಪ್ರಧಾನಿಯವರಿಗೆ ಅದ್ಧೂರಿ ಸ್ವಾಗತ ಕೋರಲು ಸಿದ್ಧತೆ ನಡೆಸಿದ್ದಾರೆ.
ಪ್ರಧಾನಿ ಮೋದಿ ಅವರು ಪಕ್ಷದ ಯಾವುದೇ ಕಾರ್ಯಕ್ರಮದಲ್ಲಿ ಭಾಗಿಯಾಗದೇ ಇದ್ದರೂ ಅವರ ಭೇಟಿ ಮೈಸೂರು ಭಾಗದಲ್ಲಿ ಚುನಾವಣಾ ಕಾವನ್ನು ಮತ್ತಷ್ಟು ಹೆಚ್ಚಿಸಿದ್ದು, ಪ್ರಧಾನಿಯವರಿಗೆ ಸ್ವಾಗತ ಕೋರಲು ಮೈಸೂರು, ಚಾಮರಾಜನಗರ, ಮಂಡ್ಯ ಜಿಲ್ಲೆಗಳ ಕಾರ್ಯಕರ್ತರು ಮೈಸೂರಿಗೆ ಬರುತ್ತಿದ್ದು, ಚುನಾವಣಾ ಸಂದರ್ಭದಲ್ಲಿ ಮೋದಿ ಅವರ ಭೇಟಿ ಬಿಜೆಪಿಗೂ ಒಂದು ರೀತಿ ಬಲ ತುಂಬಲಿದೆ.
ಬಂಡೀಪುರದಲ್ಲಿ ಸಫಾರಿ
ಪ್ರಧಾನಿ ಮೋದಿ ಅವರು ಹುಲಿ ಸಂರಕ್ಷಣೆಗೆ ಸಂಬಂಧಿಸಿದ ಕಾರ್ಯಕ್ರಮದಲ್ಲಿ ಭಾಗಿಯಾಗಲು ಇಂದು ರಾತ್ರಿ ೮.೪೦ಕ್ಕೆ ದೆಹಲಿಯಿಂದ ಮೈಸೂರಿನ ಮಂಡಕ್ಕಳ್ಳಿ ವಿಮಾನನಿಲ್ದಾಣಕ್ಕೆ ಆಗಮಿಸಿ ಮೈಸೂರಿನ ಖಾಸಗಿ ಹೋಟೆಲ್‌ನಲ್ಲಿ ವಾಸ್ತವ್ಯ ಹೂಡುವರು. ನಾಳೆ ಬೆಳಿಗ್ಗೆ ೬,೩೦ಕ್ಕೆ ಮಂಡಕ್ಕಳ್ಳಿ ವಿಮಾನನಿಲ್ದಾಣದಿಂದ ಹೆಲಿಕಾಪ್ಟರ್ ಮೂಲಕ ಬಂಡೀಪುರಕ್ಕೆ ತೆರಳಿ ಅಲ್ಲಿ ಅರಣ್ಯ ಹುತಾತ್ಮರ ಸ್ಮಾರಕಕ್ಕೆ ನಮನ ಸಲ್ಲಿಸಿ ವಿಶೇಷ ಅಂಚೆ ಲಕೋಟೆ ಬಿಡುಗಡೆಗೊಳಿಸಿ ಬಂಡೀಪುರ ಕಾಡಿನಲ್ಲಿ ಸಫಾರಿ ನಡೆಸಿ ಅಲ್ಲಿಂದ ತಮಿಳುನಾಡಿನ ಮಧುಮಲೈ ಅರಣ್ಯಕ್ಕೆ ತೆರಳಿ ಅಲ್ಲಿಯ ತೆಪ್ಪಕಾಡು ಆನೆಕ್ಯಾಂಪ್‌ನಲ್ಲಿ ಆನೆಗಳ ಆರೈಕೆಯಲ್ಲಿ ತೊಡಗಿಕೊಂಡಿರುವ ಬೊಮ್ಮಾ ಮತ್ತು ಬೆಳ್ಳಿ ದಂಪತಿಗಳನ್ನು ಸನ್ಮಾನಿಸುವರು. ನಂತರ ಪ್ರಧಾನಿ ಮೋದಿ ಅವರು ಹೆಲಿಕಾಪ್ಟರ್‌ನಲ್ಲಿ ಮಂಡಕ್ಕಳ್ಳಿ ವಿಮಾನನಿಲ್ದಾಣಕ್ಕೆ ವಾಪಸ್ಸಾಗಿ ಅಲ್ಲಿಂದ ರಸ್ತೆ ಮೂಲಕ ಬೆಳಿಗ್ಗೆ ೧೦.೩೦ಕ್ಕೆ ಕರ್ನಾಟಕ ಮುಕ್ತವಿಶ್ವವಿದ್ಯಾಲಯದ ಘಟಿಕೋತ್ಸವ ಭವನದಲ್ಲಿ ನಡೆಯುವ ಹುಲಿ ಸಂರಕ್ಷಣಾ ಯೋಜನೆಯ ೫೦ನೇ ವರ್ಷಾಚರಣೆ ಸಂಭ್ರಮದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಧ್ಯಾಹ್ನ ದೆಹಲಿಗೆ ವಾಪಸ್ಸಾಗುವರು.
ಬಿಗಿ ಭದ್ರತೆ
ಪ್ರಧಾನಿ ಮೋದಿ ಅವರ ಆಗಮನದ ಹಿನ್ನೆಲೆಯಲ್ಲಿ ಬಂಡೀಪುರದಲ್ಲಿ ಬಿಗಿ ಭದ್ರತೆ ಒದಗಿಸಲಾಗಿದ್ದು, ಇಂದು ಸಂಜೆ ೪ ಗಂಟೆಯಿಂದ ನಾಳೆ ಮಧ್ಯಾಹ್ನ ೧೨ರವರೆಗೆ ಬಂಡೀಪುರ ಮಾರ್ಗವಾಗಿ ತಮಿಳುನಾಡಿಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ ಹಾಗೂ ಕೇರಳ ರಾಜ್ಯಕ್ಕೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿಯನ್ನು ಸಂಪೂರ್ಣವಾಗಿ ಬಂದ್ ಮಾಡಲಾಗುತ್ತದೆ.