ರಾತ್ರಿ ಮತ್ತು ವಾರಾಂತ್ಯ ಕರ್ಫ್ಯೂ ಹಿನ್ನೆಲೆ: 4ಕ್ಕಿಂತ ಹೆಚ್ಚಿನ ಜನ ಸೇರುವಂತಿಲ್ಲ:ಡಿ.ಸಿ.ವಿ.ವಿ.ಜ್ಯೋತ್ಸ್ನಾ

ಕಲಬುರಗಿ.ಏ.21: ಕೊರೋನಾ ಸೋಂಕಿನ ಎರಡನೇ ಅಲೆ ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯದಾದ್ಯಂತ ರಾತ್ರಿ ಮತ್ತು ವಾರಾಂತ್ಯ ಕರ್ಫ್ಯೂ ಜಾರಿಗೊಂಡಿರುವ ಹಿನ್ನೆಲೆಯಲ್ಲಿ ಮೇ 4ರ ಮಧ್ಯ ರಾತ್ರಿಯವರೆಗೆ ಕಲಬುರಗಿ ಜಿಲ್ಲೆಯಾದ್ಯಂತ ಸಿ.ಆರ್.ಪಿ‌.ಸಿ ಕಾಯ್ದೆ- 1973ರ ಕಲಂ144ರನ್ವಯ ಜಿಲ್ಲೆಯಾದ್ಯಂತ ಸಾರ್ವಜನಿಕ ಸ್ಥಳದಲ್ಲಿ 4ಕ್ಕಿಂತ ಹೆಚ್ಚಿನ ಜನ ಗುಂಪು ಸೇರುವುದನ್ನು ನಿಷೇಧಿಸಿ ಜಿಲ್ಲಾಧಿಕಾರ ವಿ.ವಿ.ಜ್ಯೋತ್ಸ್ನಾ ಅವರು ಆದೇಶ ಹೊರಡಿಸಿದ್ದಾರೆ.

ಸಾರ್ವಜನಿಕ ಜನದಟ್ಟನೆ ಪ್ರದೇಶದಲ್ಲಿ ಕಡ್ಡಾಯವಾಗಿ ಕೋವಿಡ್-19 ನಿಯಮಾವಳಿಗಳನ್ನು ತಪ್ಪದೇ ಪಾಲಿಸಬೇಕು. ಈ ಆದೇಶವು ಬಸ್ ನಿಲ್ದಾಣ, ರೈಲು ನಿಲ್ದಾಣ ಹಾಗೂ ವಿಮಾನ ನಿಲ್ದಾಣಗಳಿಗೆ ಅನ್ವಯವಾಗುವುದಿಲ್ಲ ಎಂದು ಅಚರು ಸ್ಪಷ್ಟಪಡಿಸಿದ್ದಾರೆ.

ಸರ್ಕಾರದ ಕೋವಿಡ್-19 ಮಾರ್ಗಸೂಚಿಗಳನ್ನು ಉಲ್ಲಂಘಿಸಿದಲ್ಲಿ ವಿಪತ್ತು ನಿರ್ವಹಣಾ ಕಾಯ್ದೆ-2005ರ ಸೆಕ್ಷನ್ 51 ರಿಂದ 60 ಮತ್ತು ಐ.ಪಿ.ಸಿ ಕಲಂ 188 ರನ್ವಯ ಕಾನೂನು ಕ್ರಮ ಕೈಗೊಳ್ಳುವುದಾಗಿ ಅವರು ಎಚ್ಚರಿಕೆ ನೀಡಿದ್ದಾರೆ.