ರಾತ್ರಿ ಕರ್ಫ್ಯೂ ಸಿ.ಎಂ. ದಾರಿ ತಪ್ಪಿಸಿದ ಸುಧಾಕರ್

ಬೆಂಗಳೂರು, ಡಿ. ೨೫- ರಾಜ್ಯದಲ್ಲಿನ ಬಿಜೆಪಿ ಸರ್ಕಾರ ಕೈಗೊಂಡ ನಿರ್ಧಾರಗಳ ಬಗ್ಗೆ ಯುಟರ್ನ್ ತೆಗೆದುಕೊಂಡಿದೆ. ಇದು ಹೊಸತೇನಲ್ಲ ಎಂದು ರಾತ್ರಿ ಕರ್ಫ್ಯೂ ವಾಪಸ್ಸಾತಿಯ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ.
ರಾತ್ರಿ ಕರ್ಫ್ಯೂ ಜಾರಿ ಮಾಡುವ ಅಗತ್ಯವೇ ಇರಲಿಲ್ಲ. ಆಡಳಿತ ನಡೆಸುವವರಿಗೆ ಕನಿಷ್ಠ ಸಾಮಾನ್ಯ ಜ್ಞಾನ ಇರಬೇಕು. ಮುಖ್ಯಮಂತ್ರಿ ಯಡಿಯೂರಪ್ಪ ಅವರು ಏಕೆ ಇಷ್ಟು ಬಲಹೀನರಾದರೋ ಗೊತ್ತಿಲ್ಲ. ಯಾರನ್ನೂ ಕೇಳದೆ ಸಚಿವ ಸುಧಾಕರ್ ಅವರ ಮಾತನ್ನು ಕೇಳಿ ರಾತ್ರಿ ಕರ್ಫ್ಯೂ ಜಾರಿ ಮಾಡಿದ್ದು ಸರಿಯಲ್ಲ ಎಂದರು.
ಸಚಿವ ಸುಧಾಕರ್ ದೊಡ್ಡ ಜ್ಞಾನಿಯಂತೆ ರಾತ್ರಿ ಕರ್ಫ್ಯೂ ಜಾರಿಗೆ ಮುಖ್ಯಮಂತ್ರಿ ಯಡಿಯೂರಪ್ಪನವರ ದಾರಿ ತಪ್ಪಿಸಿದ್ದಾರೆ. ನಾನು ಯಡಿಯೂರಪ್ಪನವರ ಬಗ್ಗೆ ಮಾತನಾಡಲ್ಲ. ಸಚಿವ ಸುಧಾಕರ್ ಅವರಿಗೆ ಕನಿಷ್ಠ ಸಾಮಾನ್ಯ ಜ್ಞಾನ ಇರಬೇಕು ಎಂದು ಸದಾಶಿವನಗರದ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು.
ಕೊರೊನಾ ಸೋಂಕು ರಾತ್ರಿ ಮಾತ್ರ ಹರಡುತ್ತದೆ, ಬೆಳಿಗ್ಗೆ ಹರಡಲ್ಲ. ಹಾಗಾಗಿ ರಾತ್ರಿ ೧೧ ರಿಂದ ಬೆಳಿಗ್ಗೆ ೫ ರವರೆಗೆ ಎಲ್ಲ ಚಟುವಟಿಕೆ ಬಂದ್ ಮಾಡೋಣ ಎಂದು ಸಚಿವ ಸುಧಾಕರ್ ಅವರಿಗೆ ಯಾವ ತಜ್ಞರು ಹೇಳಿದ್ದಾರೋ, ಆ ತಜ್ಞರ ಫೊಟೋ ಕೊಡಲಿ. ಅವರದೂ, ಸಚಿವ ಸುಧಾಕರ್ ರವರದ್ದು ಮನೆಯಲ್ಲಿ ಫೊಟೋ ಹಾಕಿಕೊಂಡು ದೇವರೆಂದು ಕೃತಾರ್ಥರಾಗುತ್ತೇವೆ ಎಂದು ವ್ಯಂಗ್ಯವಾಡಿದರು.
ಆಡಳಿತ ನಡೆಸುವವರು ಎಲ್ಲರಿಗೂ ಮೇಲ್ಪಂಕ್ತಿಯಾಗಿರಬೇಕು. ಹಿಂದೆ ಇದೇ ಸುಧಾಕರ್ ಲಾಕ್‌ಡೌನ್ ಸಂದರ್ಭದಲ್ಲಿ ಈಜುಕೊಳದಲ್ಲಿ ಈಜಿದಿದ್ದು ಫೊಟೋ ಹಾಕಿದ್ದರು. ಆಗ ಇವರ ವಿರುದ್ಧ ಏಕೆ ಕೇಸ್ ಹಾಕಲಿಲ್ಲ. ಸುಮ್ಮನೆ ದೊಡ್ಡ ಜ್ಞಾನಿಯಂತೆ ರಾತ್ರಿ ಕರ್ಫ್ಯೂ ಬಗ್ಗೆ ತೀರ್ಮಾನ ಕೈಗೊಂಡಿದ್ದು ಸರಿಯಲ್ಲ ಎಂದರು.
ಸಾರ್ವಜನಿಕರು, ಯುವ ಜನರ ಹಾಗೂ ವಿರೋಧ ಪಕ್ಷಗಳ ಧ್ವನಿಗೆ ಸ್ಪಂದಿಸಿ ರಾತ್ರಿ ಕರ್ಫ್ಯೂ ಜಾರಿ ವಾಪಸ್ ತೀರ್ಮಾನವನ್ನು ಸರ್ಕಾರ ತೆಗೆದುಕೊಂಡಿದೆ. ಆಡಳಿತ ಪಕ್ಷದಲ್ಲೇ ಹಲವು ಸಚಿವರು ಹಾಗೂ ಶಾಸಕರು ಇದನ್ನು ವಿರೋಧ ವ್ಯಕ್ತಪಡಿಸಿದ್ದರು.
ಕಳೆದ ಒಂದು ವರ್ಷದಿಂದ ಯುವ ಜನರು ನೋವು ಅನುಭವಿಸಿದ್ದಾರೆ. ಏನೋ ಹೊಸ ವರ್ಷಾಚರಣೆ ಸಂದರ್ಭದಲ್ಲಿ ಸಂಭ್ರಮ ಮಾಡಿಕೊಳ್ಳುತ್ತಾರೆ. ರಾಜ್ಯದ ಜನತೆ ಸಾಮಾನ್ಯ ತಿಳಿದುಕೊಂಡೆ ಎಲ್ಲವನ್ನೂ ಆಚರಿಸುತ್ತಾರೆ. ಸುಮ್ಮನೆ ನಿರ್ಬಂಧ ಹೇರುವುದು ಸರಿಯಲ್ಲ. ಜನರ ನಿಯಮ ಪಾಲನೆಯಿಂದಲೇ ಸರ್ಕಾರಕ್ಕೆ ಒಳ್ಳೆಯ ಹೆಸರು ಬಂದಿದೆ. ಸಚಿವರುಗಳಿಂದ ಸರ್ಕಾರಕ್ಕೆ ಹೆಸರು ಬಂದಿಲ್ಲ ಎಂದು ಕಿಡಿಕಾರಿದರು.
ಸಚಿವ ಸುಧಾಕರ್ ನಮ್ಮ ಬಗ್ಗೆಯೂ ಟೀಕೆ ಮಾಡಿದ್ದಾರೆ. ಎಲ್ಲದಕ್ಕೂ ಕಾಲವೇ ಉತ್ತರ ಕೊಡಲಿದೆ. ದಕ್ಷಿಣಾಯನ ಹೋಗಿ ಉತ್ತರಾಯಣ ಬರುತ್ತಿದೆ. ಡಾ. ಸುಧಾಕರ್ ಈಗ ಸಚಿವರಾಗಿದ್ದಾರೆ, ಏನೇನೋ ಮಾತನಾಡುತ್ತಾರೆ, ಮಾತನಾಡಲಿ. ಕಾಲ ಬಂದಾಗ ಉತ್ತರ ನೀಡುತ್ತೇನೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.
ವೈಕುಂಠ ಏಕಾದಶಿಯ ಪವಿತ್ರ ದಿನವಾದ ಇಂದು ನಾಡಿನ ಸುಖ-ಸಮೃದ್ಧಿಗೆ ಪ್ರಾರ್ಥಿಸಿದ್ದೇನೆ ಎಂದ ಅವರು, ಹೊಸ ವರ್ಷಕ್ಕೂ ಶಾಂತಿ, ಸಮೃದ್ಧಿ ನೆಲೆಸಲಿ ಪ್ರಾರ್ಥಿಸಿ ನಾಡಿನ ಜನತೆಗೆ ಹೊಸ ವರ್ಷದ ಶುಭಾಶಯ ಕೋರಿದರು.