ರಾತ್ರಿ ಕರ್ಫ್ಯೂ ಮುಂದುವರಿಕೆ

ಬೆಂಗಳೂರು, ಏ. ೧೬- ರಾಜ್ಯದಲ್ಲಿ ರಣಕೇಕೆ ಹಾಕುತ್ತಿರುವ ಕೊರೊನಾ ಮಹಾಮಾರಿಯನ್ನು ನಿಯಂತ್ರಿಸಲು ಈಗಿರುವ ಕೊರೊನಾ ನೈಟ್ ಕರ್ಫ್ಯೂ ವಿಸ್ತರಣೆ ಸೇರಿದಂತೆ ಮತ್ತಷ್ಟು ಕಠಿಣ ಕ್ರಮಗಳನ್ನು ಜಾರಿಗೊಳಿಸುವ ಬಗ್ಗೆ ಏ. ೨೦ರಂದು ಸರ್ಕಾರ ನಿರ್ಧಾರ ಕೈಗೊಳ್ಳಲಿದ್ದು, ಅಲ್ಲಿಯವರೆಗೂ ಈಗಿರುವ ಯಥಾಸ್ಥಿತಿಯೇ ಮುಂದುವರೆಯಲಿದೆ. ಕೊರೊನಾ ಮಾರ್ಗಸೂಚಿಗಳಲ್ಲಿ ಯಾವುದೇ ಬದಲಾವಣೆ ಸದ್ಯಕ್ಕೆ ಇಲ್ಲ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದರು.
ನೈಟ್ ಕರ್ಫ್ಯೂವನ್ನು ಮತ್ತೆ ಕೆಲ ದಿನಗಳ ಕಾಲ ವಿಸ್ತರಿಸುವ ತೀರ್ಮಾನ ಮಾಡಲಾಗಿದೆ. ಹಾಗೆಯೇ ಇನ್ನೂ ಕೆಲವು ಜಿಲ್ಲೆಗಳಲ್ಲಿ ನೈಟ್ ಕರ್ಫ್ಯೂ ಜಾರಿ ಮಾಡುವ ಬಗ್ಗೆಯೂ ಚರ್ಚಿಸಲಾಗಿದ್ದು, ಎಲ್ಲದರ ಬಗ್ಗೆಯೂ ಏ. ೨೦ ರಂದು ತೀರ್ಮಾನ ಕೈಗೊಳ್ಳಲಾಗುವುದು ಎಂದವರು ಹೇಳಿದರು.
ರಾಜ್ಯದಲ್ಲಿ ಹೆಚ್ಚುತ್ತಿರುವ ಕೊರೊನಾ ನಿಯಂತ್ರಣದ ಬಗ್ಗೆ ಇಂದು ತಮ್ಮ ಅಧಿಕೃತ ನಿವಾಸ ಕಾವೇರಿಯಲ್ಲಿ ಹಿರಿಯ ಅಧಿಕಾರಿಗಳ ಸಭೆ ನಡೆಸಿ, ಚರ್ಚಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿಗಳು, ೮ ನಗರಗಳಲ್ಲಿ ಜಾರಿಯಲ್ಲಿರುವ ಕೊರೊನಾ ನೈಟ್ ಕರ್ಫ್ಯೂವನ್ನು ಮುಂದುವರಿಕೆ ಮಾಡುತ್ತೇವೆ. ಏ. ೨೦ ರಂದು ಮತ್ತೆ ಅಧಿಕಾರಿಗಳ ಜತೆ ಚರ್ಚಿಸಿ ಕೆಲವು ಕಠಿಣ ತೀರ್ಮಾನ ಕೈಗೊಳ್ಳುತ್ತೇವೆ ಎಂದರು.
ಈಗ ಜಾರಿ ಮಾಡಿರುವ ಕೊರೊನಾ ನೈಟ್ ಕರ್ಪ್ಯೂ ಏ. ೨೦ ರವರೆಗೂ ಜಾರಿಯಲ್ಲಿರುತ್ತದೆ. ನಂತರ ಕರ್ಫ್ಯೂವನ್ನು ಎಷ್ಟು ದಿನ ಮುಂದುವರೆಸಬೇಕು. ಮತ್ತಷ್ಟು ಜಿಲ್ಲೆಗಳಿಗೆ ಕರ್ಫ್ಯೂ ವಿಸ್ತರಿಸುವ ಬಗ್ಗೆ ತೀರ್ಮಾನ ಮಾಡುತ್ತೇವೆ ಎಂದರು.
ರಾಜ್ಯದಲ್ಲಿನ ಕೊರೊನಾ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡೇ ಇಂದು ಒಂದೂವರೆ ಗಂಟೆಗಳ ಕಾಲ ಅಧಿಕಾರಿಗಳ ಜತೆ ಸುದೀರ್ಘವಾಗಿ ಚರ್ಚೆ ನಡೆಸಿದ್ದೇನೆ. ಪ್ರಧಾನಿ ಮೋದಿ ಅವರ ಸಲಹೆ ಪಡೆದು ಏ. ೨೦ರ ನಂತರ ಕೆಲವು ಕಠಿಣ ತೀರ್ಮಾನಗಳನ್ನು ಮಾಡಲಾಗುವುದು ಎಂದರು.
ಸದ್ಯಕ್ಕಂತೂ ಕೊರೊನಾ ಮಾರ್ಗಸೂಚಿಗಳಲ್ಲಿ ಯಾವುದೇ ಬದಲಾವಣೆ ಇಲ್ಲ. ಈಗಿರುವ ಮಾರ್ಗಸೂಚಿಗಳು ಏ. ೨೦ರವರೆಗೂ ಮುಂದುವರೆಯುತ್ತವೆ. ಏ. ೨೦ ರಂದು ಎಲ್ಲರೊಡನೆ ಚರ್ಚಿಸಿ ಸರ್ಕಾರ ಕೆಲವೊಂದು ತೀರ್ಮಾನಗಳನ್ನು ಮಾಡಲಿದೆ ಎಂದು ಅವರು ಹೇಳಿದರು.
ದೆಹಲಿ, ಮಾಹಾರಾಷ್ಟ್ರ ಮಾದರಿಯಲ್ಲಿ ರಾಜ್ಯದಲ್ಲೂ ಲಾಕ್‌ಡೌನ್‌ನಂತಹ ಬಿಗಿ ಕ್ರಮಗಳು ಜಾರಿಯಾಗುತ್ತವೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಬೇರೆ ರಾಜ್ಯಗಳಿಗೂ ಕರ್ನಾಟಕಕ್ಕೂ ಹೋಲಿಸಬೇಡಿ. ನಮ್ಮ ರಾಜ್ಯದ ಪರಿಸ್ಥಿತಿಯೇ ಬೇರೆ. ಬೇರೆ ರಾಜ್ಯಗಳ ಪರಿಸ್ಥಿತಿಯೇ ಬೇರೆ. ಕೊರೊನಾ ನಿಯಂತ್ರಣಕ್ಕೆ ಕಠಿಣ ಕ್ರಮ ಜಾರಿ ಮಾಡುತ್ತೇವೆ ಅಷ್ಟೇ ಎಂದರು.
ಲಾಕ್‌ಡೌನ್‌ಗೆ ಶಿಫಾರಸ್ಸು
ರಾಜ್ಯದಲ್ಲಿ ಅದರಲ್ಲೂ ರಾಜಧಾನಿ ಬೆಂಗಳೂರಿನಲ್ಲಿ ಸೋಂಕು ಪ್ರಕರಣಗಳು ಭಾರಿ ಪ್ರಮಾಣದಲ್ಲಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕೋವಿಡ್ ತಜ್ಞರ ಸಲಹಾ ಸಮಿತಿ ರಾಜ್ಯದಲ್ಲಿ ಲಾಕ್‌ಡೌನ್‌ಗೆ ಶಿಫಾರಸ್ಸು ಮಾಡಿದೆ ಎಂದು ಹೇಳಲಾಗಿದೆ.
ಇಂದಿನ ಸಭೆಯ ಸಂದರ್ಭದರಲ್ಲಿ ತಜ್ಞರುಗಳು ಕೊರೊನಾ ನಿಯಂತ್ರಿಸಲು ಬಾರ್, ಹೋಟೆಲ್, ಸಿನಿಮಾ ಮಂದಿರ ಎಲ್ಲವನ್ನು ಬಂದ್ ಮಾಡುವ ಅಗತ್ಯತೆಯನ್ನು ಪ್ರಸ್ತಾಪಿಸಿದರು ಎಂದು ಹೇಳಲಾಗಿದೆ.
ರಾಜ್ಯದಲ್ಲಿ ಕೊರೊನಾ ಪರಿಸ್ಥಿತಿ ಕೆಟ್ಟದಾಗಿದೆ. ಕೊರೊನಾ ನಿಯಂತ್ರಣಕ್ಕೆ ಪಬ್, ಧಾರ್ಮಿಕ ಕೇಂದ್ರಗಳು, ಅತಿ ಹೆಚ್ಚು ಜನರು ಸೇರುವ ಕಾರ್ಯಕ್ರಮಗಳು ಸೇರಿದಂತೆ ಇನ್ನಿತರ ಕಡೆ ಕೆಲ ದಿನಗಳ ಕಾಲ ನಿರ್ಬಂಧ ಹೇರುವಂತೆ ತಜ್ಞರ ಸಮಿತಿ ಮುಖ್ಯಮಂತ್ರಿಗಳಿಗೆ ವರದಿ ರೂಪದ ಶಿಫಾರಸ್ಸನ್ನು ಮಾಡಿದೆ ಎಂದು ಹೇಳಲಾಗಿದೆ.
ತಜ್ಞರ ಸಲಹೆ ಅಭಿಪ್ರಾಯಗಳನ್ನು ಆಲಿಸಿದ ಮುಖ್ಯಮಂತ್ರಿಗಳು ಈ ತಿಂಗಳ ೧೮ ರಂದು ಸರ್ವಪಕ್ಷಗಳ ಮುಖಂಡರ ಸಭೆ ಕರೆದಿದ್ದೇನೆ. ಅಲ್ಲಿಯೂ ಚರ್ಚೆ ನಡೆಸಿ ವಿರೋಧ ಪಕ್ಷಗಳ ನಾಯಕರುಗಳಿಂದಲೂ ಸಲಹೆ ಪಡೆದು ನಂತರ ಒಂದು ತೀರ್ಮಾನಕ್ಕೆ ಬರೋಣ ಎಂದು ಸಭೆಯಲ್ಲಿ ಹೇಳಿದರು ಎನ್ನಲಾಗಿದೆ.
ನಾಳೆ ರಾಜ್ಯದಲ್ಲಿ ಉಪಚುನಾವಣೆ ಇದೆ. ಹಾಗಾಗಿ ತತ್‌ಕ್ಷಣದಿಂದಲೇ ಯಾವುದೇ ನಿಯಮಗಳನ್ನು ಜಾರಿ ಮಾಡಲು ಸಾಧ್ಯವಿಲ್ಲ. ಸರ್ವಪಕ್ಷಗಳ ಮುಖಂಡರ ಸಭೆ ನಂತರ ಏ. ೨೦ ರಂದು ಮತ್ತೆ ಸಭೆ ಸೇರಿ ಎಲ್ಲವನ್ನು ತೀರ್ಮಾನಿಸೋಣ ಎಂದು ಮುಖ್ಯಮಂತ್ರಿಗಳು ಸಭೆಯಲ್ಲಿ ಹೇಳಿ, ಸಭೆಯನ್ನು ಬರ್ಕಾಸ್ತುಗೊಳಿಸಿದರು ಎನ್ನಲಾಗಿದೆ.