ರಾತ್ರಿ ಕರ್ಫ್ಯೂ ಜಾರಿ ಪೊಲೀಸ್ ಬಿಗಿ ಭದ್ರತೆ

ಬೆಂಗಳೂರು, ಏ. ೯- ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ಸೋಂಕಿನ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನಾಳೆಯಿಂದ ”ಕೊರೊನಾ ಕರ್ಫ್ಯೂ”” ಮತ್ತುಷ್ಟು ಬಿಗಿಗೊಳಿಸಲು ರಾಜ್ಯ ಸರ್ಕಾರ ಮುಂದಾಗಿದೆ.
ಸೋಂಕು ನಿಗ್ರಹ ಮಾಡುವ ಹಿನ್ನೆಲೆಯಲ್ಲಿ ಕಳೆದ ಬಾರಿಯ ಲಾಕ್ ಡೌನ್ ಸಮಯದಲ್ಲಿ ಕೈಗೊಂಡಿದ್ದ ಬಿಗಿಕ್ರಮಗಳ ಮಾದರಿಯಲ್ಲಿಯೇ ಪೊಲೀಸರು ಬೆತ್ತ ಹಿಡಿದು ನಗರದ ಗಲ್ಲಿಗಲ್ಲಿಗಳಲ್ಲಿ ನಿಲ್ಲಲು ನಿರ್ಧರಿಸಿದ್ದಾರೆ.
ಮಾಲ್‌ಗಳು, ಚಿತ್ರಮಂದಿರಗಳು, ಹೊಟೇಲ್‌ಗಳು, ರೆಸ್ಟೋರೆಂಟ್‌ಗಳು ಸಂಪೂರ್ಣವಾಗಿ ಬಂದ್ ಆಗಲಿದ್ದು, ನಾಳೆ ರಾತ್ರಿ ೧೦ ಗಂಟೆಯಿಂದ ಅನಗತ್ಯವಾಗಿ ರಸ್ತೆಗಿಳಿಯುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸಿದ್ದತೆ ಮಾಡಿಕೊಂಡಿದ್ದಾರೆ.
ಬೆಂಗಳೂರಿನಿಂದ ರಾಜ್ಯದ ಮೂಲೆಮೂಲೆಗೆ ತೆರಳುವ ಸಾರ್ವಜನಿಕರು, ಕರ್ಫ್ಯೂ ಅವಧಿ ಆರಂಭವಾಗುವ ಹಲವು ಗಂಟೆಗಳ ಮುನ್ನವೆ ತೆರಳುವ ಜೊತೆಗೆ ಬೇರೆ ಊರುಗಳಿಂದ ನಗರಕ್ಕೆ ಬರುವವರೂ ಕೂಡ ಮುಂಚಿತವಾಗಿ ಬನ್ನಿ ಎಂದು ಪ್ರಯಾಣಿಕರಿಗೆ ಮನವಿ ಮಾಡಲಾಗಿದೆ.
ರಾಜಧಾನಿ ಬೆಂಗಳೂರಿನಲ್ಲಿ ದಿನನಿತ್ಯ ಸೋಂಕು ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅದರ ತಡೆಗೆ ಕಠಿಣ ಕ್ರಮ ಕೈಗೊಳ್ಳಲು ರಾತ್ರಿ ೧೦ ರಿಂದ ಬೆಳಿಗ್ಗೆ ೫ರವರೆಗೆ ಬಿಗಿಕ್ರಮಗಳನ್ನು ಕೈಗೊಳ್ಳಲು ಮುಂದಾಗಿದೆ.