ರಾತ್ರಿ ಕರ್ಫ್ಯೂ ಆಟಕ್ಕುಂಟು – ಲೆಕ್ಕಕ್ಕಿಲ್ಲ

ಬೆಂಗಳೂರು,ಡಿ.೨೪- ಇಂಗ್ಲೆಂಡ್‌ನಲ್ಲಿ ಕಾಣಿಸಿಕೊಂಡಿರುವ ರೂಪಾಂತರ ಕೊರೊನಾ ಸೋಂಕನ್ನು ತಡೆಗಟ್ಟಲು ರಾಜ್ಯದಲ್ಲಿ ಇಂದು ರಾತ್ರಿ ೧೧ ಗಂಟೆಯಿಂದ ಬೆಳಿಗ್ಗೆ ೫ ಗಂಟೆವರೆಗೆ ರಾತ್ರಿ ಕರ್ಫ್ಯೂ ಜಾರಿ ಮಾಡಿರುವ ಸರ್ಕಾರದ ನಡೆ ನಗೆಪಾಟಲಿಗೆ ಗುರಿಯಾಗಿದೆ.
ಸಾರಿಗೆ ಸಂಚಾರ, ಆಟೋ, ಟ್ಯಾಕ್ಸಿ ಸಂಚಾರಕ್ಕೆ ಅನುವು ಮಾಡಿಕೊಡುವ ಜತೆಗೆ ರಾತ್ರಿ ೧೧ ಗಂಟೆ ವೇಳೆಗೆ ಜನರು ನಿದ್ದೆಗೆ ಜಾರಿದ ಬಳಿಕ ಕರ್ಫ್ಯೂ ಜಾರಿ ಮಾಡಿರುವ ಸರ್ಕಾರದ ಕ್ರಮ ಸಾರ್ವಜನಿಕರ ಲೇವಡಿಗೆ ಗುರಿಯಾಗಿದೆ,
ರಾಜ್ಯಸರ್ಕಾರ ಜಾರಿ ಮಾಡಿರುವ ರಾತ್ರಿ ಕರ್ಫ್ಯೂ ಆಟಕ್ಕುಂಟು ಲೆಕ್ಕಕ್ಕಿಲ್ಲದಂತಾಗಿದೆ. ಸರ್ಕಾರ ಜಾರಿ ಮಾಡಿರುವ ಈ ಕ್ರಮದಿಂದ ಕೊರೊನಾ ಸೋಂಕು ಯಾವುದೇ ಕಾರಣಕ್ಕೂ ಕಡಿಮೆಯಾಗುವುದಿಲ್ಲ. ಈ ರೀತಿಯ ರಾತ್ರಿ ಕರ್ಫ್ಯೂ ಅಗತ್ಯವಿರಲಿಲ್ಲ ಎಂದು ಸಾರ್ವಜನಿಕರು ಸೇರಿದಂತೆ ತಜ್ಞರಿಂದ ಅಭಿಪ್ರಾಯ ವ್ಯಕ್ತವಾಗಿದೆ.
ರಾಜ್ಯಸರ್ಕಾರ ಹೊರಡಿಸಿರುವ ಸಡಿಲ ರಾತ್ರಿ ಕರ್ಫ್ಯೂ ಜಾರಿ ಮಾಡಿರುವ ನಿರ್ಧಾರಕ್ಕೆ ಎಲ್ಲೆಡೆ ವಿರೋಧ ವ್ಯಕ್ತವಾಗಿದ್ದು, ಅನಗತ್ಯವಾಗಿ ಇಂತಹ ನಿರ್ಧಾರ ಕೈಗೊಳ್ಳುವ ಬದಲು ಹೊಸವರ್ಷಾಚರಣೆಯ ಸಂಭ್ರಮಕ್ಕೆ ಕಡಿವಾಣ ಹಾಕುವ ಒಂದು ದಿನದ ಕಟ್ಟುನಿಟ್ಟಿನ ನಿರ್ಬಂಧ ವಿಧಿಸಿದ್ದರೆ ಸಾಕಿತ್ತು ಎನ್ನುವ ಸಾರ್ವತ್ರಿಕ ಅಭಿಪ್ರಾಯ ವ್ಯಕ್ತವಾಗಿದೆ.
ಸುಧಾಕರ್ ಕಿಡಿ
ಎಲ್ಲದಕ್ಕೂ ಅನುಮತಿ ನೀಡಿ ರಾತ್ರಿ ಕರ್ಫ್ಯೂ ಜಾರಿ ಮಾಡುವ ಜರೂರತ್ತು ಏನಿತ್ತು ಎನ್ನುವ ಸಾರ್ವಜನಿಕರ ಆಕ್ಷೇಪಕ್ಕೆ ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಕಿಡಿಕಾರಿದ್ದಾರೆ.
ರಾತ್ರಿ ವೇಳೆ ಅನಗತ್ಯ ಓಡಾಟ. ಪಾರ್ಟಿ ಮಾಡೋದು ತಪ್ಪಿಸಲು ರಾತ್ರಿ ಕರ್ಫ್ಯೂ ಜಾರಿ ಮಾಡಲಾಗಿದೆ. ಇದು ತಪ್ಪಾ ಎಂದು ಅವರು ಪ್ರಶ್ನಿಸಿದ್ದಾರೆ.
ಕೊರೊನಾ ನಿಯಂತ್ರಣಕ್ಕೆ ಸಹಕಾರ ನೀಡುತ್ತೇವೆ ಎನ್ನುವ ವಿರೋಧ ಪಕ್ಷದವರು ಯಾವೊತ್ತು ಸಹಕಾರ ನೀಡಿಲ್ಲ.ಬದಲಾಗಿ ಪ್ರತಿಯೊಂದು ವಿಷಯಕ್ಕೂ ವಿರೋಧ ಮಾಡಿಕೊಂಡು ಬರುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ರಾತ್ರಿ ಕರ್ಫ್ಯೂ ಜಾರಿ ಮಾಡುವಂತೆ ಸಲಹೆ ಬಂದಿತ್ತು. ಅದನ್ನು ಆಧರಿಸಿ ಕರ್ಫ್ಯೂ ಜಾರಿ ಮಾಡಲಾಗಿದೆ ಎಂದು ಸರ್ಕಾರದ ಕ್ರಮವನ್ನು ಅವರು ಸಮರ್ಥಿಸಿಕೊಂಡರು.
ರಾತ್ರಿ ಕರ್ಫ್ಯೂ ಜಾರಿಯಿಂದ ಬಾರ್, ರೆಸ್ಟೋರೆಂಟ್‌ಗಳಲ್ಲಿ ಸೋಂಕು ಹರಡುವುದನ್ನು ತಪ್ಪಿಸಬಹುದು ಎನ್ನುವ ಉದ್ದೇಶದಿಂದ ಸರ್ಕಾರ ಇಂತಹುದೊಂದು ಕ್ರಮಕೈಗೊಂಡಿದೆ. ಸೋಂಕು ನಿಯಂತ್ರಣಕ್ಕೆ ರಾತ್ರಿ ಕರ್ಫ್ಯೂ ಜಾರಿ ಮಾಡಿರುವುದು ತಪ್ಪಾ ಎಂದು ಅವರು ಪ್ರಶ್ನಿಸಿದ್ದಾರೆ.

ವಿರೋಧ ಪಕ್ಷಗಳ ಅಸಹಾಕಾರ
’ಕೊರೊನಾ ಸೋಂಕಿನ ವಿಷಯದಲ್ಲಿ ಸರ್ಕಾರಕ್ಕೆ ಸಹಕಾರ ನೀಡುತ್ತೇವೆ ಎಂದು ಹೇಳುವ ವಿರೋಧ ಪಕ್ಷಗಳು ಮೊದಲಿನಿಂದಲೂ ಅಸಹಕಾರ ನೀಡುತ್ತಾ ಬಂದಿವೆ. ಪ್ರತಿಯೊಂದರಲ್ಲೂ ವಿರೋಧ ಮಾಡುತ್ತ ತಪ್ಪು ಕಂಡುಹಿಡಿಯುತ್ತಿದ್ದಾರೆ.
ಸರ್ಕಾರ ಏನೇ ಮಾಡಿದರೂ ತಪ್ಪು ಹುಡುಕುವುದೇ ವಿರೋಧ ಪಕ್ಷಗಳ ಕೆಲಸ.’
-ಡಾ. ಕೆ. ಸುಧಾಕರ್
ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ

ಅನಗತ್ಯ ತೊಂದರೆ
ಯಾವುದೋ ಒಂದು ನಿರ್ದಿಷ್ಟ ಸಮುದಾಯವನ್ನು ಗುರಿಯಾಗಿಸಿಕೊಂಡು ತೊಂದರೆ ನೀಡುವ ಉದ್ದೇಶದಿಂದ ಸರ್ಕಾರ ಇಂತಹ ಕ್ರಮಕೈಗೊಂಡಿದೆ. ಸೋಂಕು ನಿಯಂತ್ರಣಕ್ಕೆ ಸರ್ಕಾರ ಯಾವ ಕ್ರಮಕೈಗೊಂಡಿದೆ. ಸೋಂಕು ನಿಯಂತ್ರಿಸಲಾಗಿದೆಯೇ. ಅನಗತ್ಯವಾಗಿ ವಿರೋಧ ಪಕ್ಷಗಳ ಮೇಲೆ ಆರೋಪ ಮಾಡುವುದು ಸರಿಯಲ್ಲ. ವಿಧಾನಮಂಡಲದ ಅಧಿವೇಶನ ಕರೆಯಿರಿ ಅಲ್ಲಿ ಚರ್ಚೆ ಮಾಡೋಣ.
-ಡಿ.ಕೆ ಶಿವಕುಮಾರ್
ಕೆಪಿಸಿಸಿ ಅಧ್ಯಕ್ಷ