ರಾತ್ರಿ ಕರ್ಫ್ಯೂ ಅಶೋಕ್ ಒಲವು


ಬೆಂಗಳೂರು, ಡಿ. ೩೦- ರಾಜ್ಯದಲ್ಲಿ ರೂಪಾಂತರ ವೈರಸ್ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ಯಾವುದೇ ಜಿಲ್ಲೆಯಲ್ಲಿ ಲಾಕ್‌ಡೌನ್ ಮಾಡುವ ಪರಿಸ್ಥಿತಿ ಇಲ್ಲ. ಆದರೆ ರಾತ್ರಿ ಕರ್ಫ್ಯೂ ಜಾರಿ ಮಾಡುವ ಅಗತ್ಯವಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದರು.
ವಿಧಾನಸೌಧದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬ್ರಿಟನ್ ಸೋಂಕು ಹಿನ್ನೆಲೆಯಲ್ಲಿ ನಿಜವಾದ ರಾತ್ರಿ ಕರ್ಫ್ಯೂ ಜಾರಿ ಅಗತ್ಯವಿದೆ. ಜತೆಗೆ ಕೆಲ ಬಿಗಿ ನಿರ್ಬಂಧಗಳು ಜಾರಿಯಾಗಬೇಕು. ಈ ಸಂಬಂಧ ಮುಖ್ಯಮಂತ್ರಿಗಳ ಜತೆ ಚರ್ಚೆ ನಡೆಸುವುದಾಗಿ ಅವರು ಹೇಳಿದರು.
ಬ್ರಿಟನ್‌ನಲ್ಲಿ ರೂಪಾಂತರ ವೈರಸ್ ಕಾಣಿಸಿಕೊಂಡ ನಂತರ ಅಲ್ಲಿ ಸೋಂಕು ಹೆಚ್ಚಾಗಿದೆ. ಹಾಗಾಗಿ ರಾಜ್ಯದಲ್ಲೂ ಸೋಂಕು ತಡೆಗೆ ಬಿಗಿ ಕ್ರಮ ಅಗತ್ಯವಿದೆ. ಬೇರೆ ಜಿಲ್ಲೆಗಳಿಗೆ ಸೋಂಕು ಹರಡದಂತೆ ಎಚ್ಚರವಹಿಸಬೇಕಿದೆ ಎಂದರು.
ಯಾವ ರೀತಿಯ ಬಿಗಿ ಕ್ರಮಗಳನ್ನು ಜಾರಿ ಮಾಡಬೇಕು ಎಂಬ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ತೀರ್ಮಾನ ಮಾಡುತ್ತೇವೆ.
ಲಾಕ್‌ಡೌನ್ ಜಾರಿ ಮಾಡುವ ಪರಿಸ್ಥಿತಿ ಇಲ್ಲ. ಆ ರೀತಿಯ ಪ್ರಸ್ತಾಪವೂ ಸರ್ಕಾರದ ಮುಂದಿಲ್ಲ ಎಂದರು.
ಬಿಜೆಪಿ ಶಕ್ತಿ
ಗ್ರಾಮ ಪಂಚಾಯ್ತಿ ಚುನಾವಣೆಗಳಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ. ಗ್ರಾಮ ಮಟ್ಟದಲ್ಲಿ ಬಿಜೆಪಿ ಶಕ್ತಿ ಹಿಡಿತ ಎದ್ದು ಕಾಣುತ್ತಿದೆ. ಈ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಹಿನ್ನೆಡೆಯಾಗಿದೆ ಎಂದು ಆರ್. ಅಶೋಕ್ ಹೇಳಿದರು.
ಶಾಲಾ-ಕಾಲೇಜುಗಳ ಆರಂಭದ ಬಗ್ಗೆ ಗೊಂದಲಗಳು ಇವೆ. ಕೆಲವರು ಸದ್ಯಕ್ಕೆ ಶಾಲೆ ಬೇಡ ಎನ್ನುತ್ತಿದ್ದಾರೆ. ಶಾಲಾ ಕಾಲೇಜು ಆರಂಭದ ಬಗ್ಗೆ ಪರ ವಿರೋಧ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಶಿಕ್ಷಣ ಸಚಿವ ಸುರೇಶ್‌ಕುಮಾರ್ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳುತ್ತಾರೆ ಎಂದರು.
ವಿಧಾನಪರಿಷತ್ ಉಪಸಭಾಪತಿ ಧರ್ಮೇಗೌಡ ಅವರು ಪರಿಷತ್‌ನ ಗಲಾಟೆ ನೋವು ತಂದಿದೆ ಎಂಬ ವಿಚಾರ ಸೇರಿದಂತೆ ೨ ಅಂಶಗಳನ್ನು ಡೆತ್‌ನೋಟ್‌ನಲ್ಲಿ ಬರೆದಿದ್ದಾರೆ. ತನಿಖೆ ನಂತರವೇ ಎಲ್ಲವೂ ಗೊತ್ತಾಗಲಿದೆ ಎಂದರು.
ಧರ್ಮೇಗೌಡರ ಸಾವು ರಾಜಕಾರಣಿಗಳಿಗೆ ಪಾಠವಾಗಬೇಕು. ಇಂತಹ ಘಟನೆ ಮರುಕಳುಹಿಸಬಾರದು ಎಂದು ಅವರು ಹೇಳಿದರು.
ಉಪಸಭಾಪತಿ ಧರ್ಮೇಗೌಡರ ಸಭಾಪತಿ ಸ್ಥಾನದಲ್ಲಿ ಕುಳಿತಿದ್ದು ತಪ್ಪೇನಲ್ಲ. ಸೀಟಿನಲ್ಲಿ ಕುಳಿತಿದ್ದರೆ ಆಕಾಶವೇನು ಕೆಳಗೆ ಬೀಳುತ್ತಿರಲಿಲ್ಲ. ಈ ಹಿಂದೆ ಸಭಾಪತಿಯಾಗಿದ್ದ ಶಂಕರಮೂರ್ತಿ ಅವರು ಅವಿಶ್ವಾಸ ನಿರ್ಣಯ ಬಂದಿದ್ದಾಗ ಕೆಳಗೆ ಕುಳಿತಿದ್ದರು. ಅದರಂತೆ ಧರ್ಮೇಗೌಡರು ನಡೆದುಕೊಂಡಿದ್ದಾರೆ ಎಂದು ಅವರು ಹೇಳಿದರು.