ರಾತ್ರಿ ಕಫ್ರ್ಯೂ ಉಲ್ಲಂಘಿಸಿ ಓಡಾಡಿದವರಿಗೆ ಪೋಲಿಸರಿಂದ ಲಾಠಿ ಏಟು

ಕಲಬುರಗಿ.ಏ.22:ಕೋವಿಡ್ ಹೆಚ್ಚಳದ ಹಿನ್ನೆಲೆಯಲ್ಲಿ ಸೋಂಕು ನಿಯಂತ್ರಿಸಲು ಕರ್ನಾಟಕ ಸರ್ಕಾರದ ಆದೇಶದಂತೆ ರಾತ್ರಿ 9ರಿಂದ ಬೆಳಿಗ್ಗೆ 6ರ ತನಕ ರಾತ್ರಿ ಕಫ್ರ್ಯೂ ಮತ್ತು ಶನಿವಾರ ಮತ್ತು ಭಾನುವಾರ ವಾರಂತ್ಯದ ಕಫ್ರ್ಯೂ ಜಾರಿಗೆ ತಂದ ಹಿನ್ನೆಲೆಯಲ್ಲಿ ರಾತ್ರಿ ಕಫ್ರ್ಯೂ ಉಲ್ಲಂಘಿಸಿ ಸಂಚರಿಸಿದವರ ಮೇಲೆ ಪೋಲಿಸರು ಲಾಠಿ ಬೀಸಿ ಚದುರಿಸಿದರು.
ನಗರದ ಸೂಪರ್ ಮಾರ್ಕೆಟ್‍ನಲ್ಲಿ ರಾತ್ರಿ 9 ಗಂಟೆಯಾದರೂ ಸಹ ರಸ್ತೆಯಲ್ಲಿ ಸಂಚರಿಸುವುದನ್ನು ಕಂಡ ಪೋಲಿಸರು ತಕ್ಷಣವೇ ಅವರ ಮೇಲೆ ಲಾಠಿ ಬೀಸಿದರು. ರಾತ್ರಿ ಕಫ್ರ್ಯೂವನ್ನು ನಿರ್ಲಕ್ಷಿಸಿ ಬೇಕಾಬಿಟ್ಟಿಯಾಗಿ ಓಡಾಡುತ್ತಿದ್ದ ಸಾರ್ವಜನಿಕರು ಪೋಲಿಸರ ಬೆತ್ತದ ರುಚಿಯನ್ನು ಅನುಭವಿಸಿದರು.
ರಾತ್ರಿ 9 ಗಂಟೆಯೊಳಗೆ ಎಲ್ಲ ಅಂಗಡಿ, ಮುಂಗಟ್ಟುಗಳನ್ನು ಬಂದ್ ಮಾಡಬೇಕೆಂಬ ಆದೇಶವನ್ನು ಉಲ್ಲಂಘಿಸಿ, ಹಲವರು ತಮ್ಮ ಅಂಗಡಿ, ಮುಂಗಟ್ಟುಗಳನ್ನು ಮುಚ್ಚದೇ ವ್ಯಾಪಾರದಲ್ಲಿ ತೊಡಗಿದ್ದರು. ಯಾವಾಗ ಪೋಲಿಸ್ ವಾಹನಗಳು ಬಂದವೋ ಆಗ ವರ್ತಕರು ತಮ್ಮ ತಮ್ಮ ಅಂಗಡಿ, ಮುಂಗಟ್ಟುಗಳನ್ನು ಬಂದ್ ಮಾಡಿಕೊಂಡು ಓಡಿದರು. ರಸ್ತೆಯಲ್ಲಿ ಸುಮ್ಮನೇ ನಿಂತವರಿಗೂ ಸಹ ಪೋಲಿಸರು ಲಾಠಿ ಏಟು ಕೊಟ್ಟರು.
ಗ್ರಾಮೀಣ ಪ್ರದೇಶಗಳಲ್ಲಿಯೂ ಸಹ ಪೋಲಿಸರು ತಂಡಗಳನ್ನು ಮಾಡಿಕೊಂಡು ಸುತ್ತು ಹೊಡೆಯುತ್ತಿದ್ದರು. ಅನಗತ್ಯವಾಗಿ ರಸ್ತೆ ಮೇಲೆ ತಿರುಗಾಡುವವರೆಗೂ ಲಾಠಿ ರುಚಿ ತೋರಿಸಿ ಮನೆಗೆ ಕಳಿಸಿದರು.
ಕೋವಿಡ್ ಹಿನ್ನೆಲೆಯಲ್ಲಿ ಮಾಲ್‍ಗಳು ಕಾರ್ಯನಿರ್ವಹಿಸಲಿಲ್ಲ. ಹೀಗಾಗಿ ಮಾಲ್ ಪ್ರದೇಶಗಳು ಗ್ರಾಹಕರು ಇಲ್ಲದೇ ಬಿಕೋ ಎನ್ನುತ್ತಿತ್ತು. ರಾತ್ರಿಯಷ್ಟೇ ಕಫ್ರ್ಯೂ ವಿಧಿಸಿ ಜನರನ್ನು ಚದುರಿಸಿದರೂ ಸಹ ಬೆಳಿಗ್ಗೆ ಮಾತ್ರ ಗುಂಪುಗೂಡುವುದು ಹಾಗೂ ಮಾಸ್ಕ್ ಧರಿಸದೇ ಓಡಾಡುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಇರುವುದು ಕಂಡುಬರುತ್ತಿದೆ. ಮಾರುಕಟ್ಟೆಗಳಲ್ಲಿ ಕೋವಿಡ್ ನಿಯಮಗಳನ್ನು ಪಾಲಿಸುತ್ತಿಲ್ಲ. ಅಲ್ಲಿ ಯಾವುದೇ ಕಟ್ಟುನಿಟ್ಟಿನ ಕ್ರಮಗಳನ್ನೂ ಸಹ ಕೈಗೊಂಡಿಲ್ಲ. ಇದು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗುತ್ತಿದೆ.