ರಾತ್ರಿ ಉಷ್ಣತೆ ಜನರಲ್ಲಿ ತುರಿಕೆ, ಬೇಧಿ ಸಮಸ್ಯೆ

ಹೆಚ್ಚುತ್ತಿದೆ ಬಿಸಿಲು, ಮನಸ್ಸಿಗೆ ದಿಗಿಲು! ಹಗಲಿನಲ್ಲಿ ಪ್ರಖರತೆ
ದೇವದುರ್ಗ.ಜೂ.೦೮-ಗುಡ್ಡದಂಥ ಮೋಡ ಕವಿದರೂ ತಾಲೂಕಿನಲ್ಲಿ ಬಿಸಿಲಿನ ಪ್ರಖರತೆ ಕಡಿಮೆಯಾಗಿಲ್ಲ. ಗಾಳಿ ಸಂಪೂರ್ಣವಾಗಿ ಕಟ್ ಆಗಿದ್ದು, ಉರಿಬಿಸಿಲು ಜನರಿಗೆ ಸಂಕಷ್ಟ ತರುತ್ತಿದೆ.
ತಾಲೂಕು ಬಹುತೇಕ ನೀರಾವರಿ ಪ್ರದೇಶವಾಗಿದ್ದರಿಂದ ಜಮೀನಿನಲ್ಲಿ ಗಿಡಮರಗಳು ಕಡಿಮೆ. ಕೃಷಿ ತ್ಯಾಜ್ಯಕ್ಕೆ ಬೆಂಕಿ ಹಚ್ಚುತ್ತಿದ್ದು, ಉಷ್ಣಾಂಶ ಹೆಚ್ಚುತ್ತಿದೆ. ಬಹುತೇಕ ಕಡೆ ಗುಡ್ಡಗಳಿದ್ದು, ಬಿಸಿಲು ಹಿಡಿದಿಟ್ಟುಕೊಳ್ಳುವ ಕಾರಣ, ಜನರಿಗೆ ಉಷ್ಣಾಂಶ ಹೆಚ್ಚಾಗುತ್ತಿದೆ.
ಬೆಳಗ್ಗೆ ೮ರಿಂದಲೇ ಬೆಂಕಿ ಉಗುಳುವ ಸೂರ್ಯ, ಸಂಜೆ ೫ಗಂಟೆಯಾದರೂ ಸಿಟ್ಟು ತಣಿಯುವುದಿಲ್ಲ. ಬಿಸಿಗಾಳಿ, ಉಷ್ಣತೆ ಆರೋಗ್ಯದಲ್ಲಿ ಸಮಸ್ಯೆ ತರುತ್ತಿದೆ. ನಿತ್ಯ ಉಷ್ಣಾಂಶ ೩೫ರಿಂದ ೪೦ಡಿಗ್ರಿ ಸೆಲ್ಸಿಯಸ್ ದಾಖಲಾಗುತ್ತಿದೆ. ಸಂಜೆ ಅಲ್ಲಲ್ಲಿ ಮಳೆ ಬಿದ್ದರೂ ಭೂಮಿ ಕಾದ ಹಂಚಿನಂತೆ ಹಗಲಿನಲ್ಲಿ ಸುಡುತ್ತಿದೆ. ಇದರಿಂದ ಜನರಲ್ಲಿ ನೀರಿನಾಂಶ ಕಡಿಮೆ ಆಗಿ, ಬೇಧಿ, ಮೂತ್ರ ಕಡಿತ ಸಮಸ್ಯೆ, ಕಿಡ್ನಿ ಸ್ಟೋನ್, ಆಯಸ ಕಂಡುಬರುತ್ತಿದೆ.
ಮಹಿಳೆಯರು, ಮಕ್ಕಳು ಹಾಗೂ ವಯೋವೃದ್ಧರು ಬಿಸಿಲಿಗೆ ಬೆಂಡಾಗಿದ್ದಾರೆ. ಹೊರಗಡೆ ಬಂದು ತಂಪಾದ ಗಿಡದ ಕೆಳಗೆ ಕುಳಿತುಕೊಳ್ಳೊಣ ಎಂದರೂ ಲಾಕ್‌ಡೌನ್ ಕಡಿವಾಣ ಹಾಕಿದೆ. ಗುಡ್ಡಗಾಡುಗಳಲ್ಲಿ ಗಿಡಗಳ ಸಂಖ್ಯೆ ಕಡಿಮೆ ಆಗಿದ್ದು, ಬರೀಬಂಡೆ, ಕಲ್ಲುಗಳು ಮಿರಮಿರ ಮಿಂಚುತ್ತಿವೆ. ರಾತ್ರಿ ವೇಳೆ ಬಿಸಿಗಾಳಿ ಹೊರಸೂಸುತ್ತಿವೆ. ಇದರಿಂದ ಬೇಸಿಗೆ ಎನ್ನುವುದು ವಯೋವೃದ್ಧರಿಗೆ ನರಕಯಾತನೆ ಎನಿಸಿದೆ.
ಈಜು, ಸ್ನಾನದ ಮೊರೆ
ಬಿಸಿಲಿನ ಪ್ರಖರತೆ ತಗ್ಗಿಸಲು ಜನರು ನಿತ್ಯ ಎರಡ್ಮೂರು ಸಲ ಸ್ನಾನ ಮಾಡುತ್ತಿದ್ದಾರೆ. ಸಮೀಪದ ಕೆರೆ, ಬಾವಿ, ಹಳ್ಳ, ನದಿಗಳಿಗೆ ತೆರಳಿ ನೀರಲ್ಲಿ ಮಿಂದೇಳುತ್ತಿದ್ದಾರೆ. ಕೃಷ್ಣಾ ನದಿ ತಾಲೂಕಿನ ಸುಮಾರು ೫೭ಕಿಮೀ ಹರಿಯುತ್ತಿದ್ದು, ೨೫ಕ್ಕೂ ಹೆಚ್ಚು ಹಳ್ಳಿಗಳಿಗೆ ಟಚ್ ಕೊಟ್ಟಿದೆ. ನದಿ ಸಮೀಪದ ಜನರು ಬಿಸಲಿನ ಪ್ರಖರತೆಯಿಂದ ನದಿಗೆ ಈಜಲು ತೆರಳಿ ದೇಹ ತಂಪಾಗಿಸುತ್ತಿದ್ದಾರೆ. ಹೊರಗಡೆ ತಂಪು ಪಾನಿಯ, ಜೂಸ್ ಇಲ್ಲದ ಕಾರಣ ಮನೆಯಲ್ಲೇ ಮಚ್ಚಿಗೆ, ಸರಬತ್ ಮಾಡಿಕೊಂಡು ಕುಡಿಯುತ್ತಿದ್ದಾರೆ.

ಕೋಟ್=====
ಹೆಚ್ಚಾದ ಬಿಸಿಲಿನಿಂದ ಜನರಲ್ಲಿ ತುರಿಗೆ, ದೇಹದ ಮೇಲೆ ಬೆವರಸಾಲೆ ಏಳುತ್ತವೆ. ನೀರಿನಾಂಶ ಕಡಿಮೆಯಾಗಿ ಬೇಧಿ ಆಗುವ ಸಾಧ್ಯತೆಯಿದೆ. ಕಿಡ್ನಿ ಸ್ಟೋನ್, ಮೂತ್ರ ಉರಿತ ಉಂಟಾಗಬಹುದು. ಇದರ ನಿವಾರಣೆಗೆ ನಿತ್ಯ ೫-೬ ಲೀಟರ್ ನೀರು ಕುಡಿಯಬೇಕು. ಜನರು ಮನೆಯಿಂದ ಹೊರಬಾರದೆ. ಬಿಸಿಲು ಹಾಗೂ ಕರೊನಾದಿಂದ ರಕ್ಷಣೆ ಪಡೆಯಬೇಕು.
| ಡಾ.ದೇವರಾಜ ದೇಸಾಯಿ
ಖಾಸಗಿ ವೈದ್ಯರು