ರಾತ್ರಿಯಿಡಿ ರೇವಣ್ಣ ವಿಚಾರಣೆ

ಬೆಂಗಳೂರು,ಮೇ೫-ಲೈಂಗಿಕ ದೌರ್ಜನ್ಯಕ್ಕೊಳಗಾದ ಸಂತ್ರಸ್ತೆಯ ಅಪಹರಣ ಪ್ರಕರಣದಲ್ಲಿ ನಿನ್ನೆ ರಾತ್ರಿ ಬಂಧಿತರಾಗಿರುವ ಮಾಜಿ ಸಚಿವ, ಶಾಸಕ ಹೆಚ್.ಡಿ. ರೇವಣ್ಣರನ್ನು ವಿಶೇಷ ತನಿಖಾ ತಂಡ(ಎಸ್‌ಐಟಿ) ಅಧಿಕಾರಿಗಳು ಇಂದು ಸಂಜೆಯೊಳಗೆ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಿದ್ದಾರೆ.
ನಿರೀಕ್ಷಣಾ ಜಾಮೀನು ನೀಡಲು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ನಿರಾಕರಿಸಿದ ಬೆನ್ನಲ್ಲೇ ವಶಕ್ಕೆ ತೆಗೆದುಕೊಂಡು ಸಿಐಡಿ ಕಚೇರಿಗೆ ಕರೆದೊಯ್ದ ಎಸ್‌ಐಟಿ ಅಧಿಕಾರಿಗಳು ಬಂಧಿಸಿ ನಡೆಸಿದ ವಿಚಾರಣೆಯಲ್ಲಿ ರೇವಣ್ಣ ಸರಿಯಾಗಿ ಉತ್ತರ ನೀಡಿಲ್ಲ ಎನ್ನಲಾಗುತ್ತಿದೆ.
ಎಸ್‌ಐಟಿ ಅಧಿಕಾರಿಗಳು ನಡೆಸಿದ ವಿಚಾರಣೆಯಲ್ಲಿ ಮಹಿಳೆಯ ಅಪಹರಣಕ್ಕೂ ನನಗೂ ಸಂಬಂಧವಿಲ್ಲ. ತಾನು ಯಾರನ್ನು ಅಪಹರಿಸಲು ಹೇಳಿಲ್ಲ ಎನ್ನುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ತಡರಾತ್ರಿವರೆಗೂ ರೇವಣ್ಣ ಅವರನ್ನು ಇನ್ನೂ ಎಸ್‌ಐಟಿ ಹಿರಿಯ ಅಧಿಕಾರಿಗಳು ಅಪಹರಣ ಪ್ರಕರಣದ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದರು. ಎಸ್‌ಐಟಿ ಎಡಿಜಿಪಿ ಬಿ.ಕೆ.ಸಿಂಗ್ ಮತ್ತವರ ತಂಡ ರೇವಣ್ಣ ಅವರಿಗೆ ಹಲವು ಪ್ರಶ್ನೆಗಳನ್ನು ಕೇಳಿದಾಗ ತಮ್ಮ ಮೇಲಿನ ಆರೋಪಗಳನ್ನು ರೇವಣ್ಣ ನಿರಾಕರಿಸಿದ್ದಾರೆ.
ನಾವು ಆಕೆಯನ್ನು ಅಪಹರಣ ಮಾಡಿಲ್ಲ. ಚುನಾವಣೆ ಇರುವ ಇರುವ ಕಾರಣ ಆಕೆ ನಮ್ಮ ಮನೆಗೆ ಬಂದಿದ್ದರು. ಅವರು ಕೆಲವು ವರ್ಷಗಳಿಂದ ನಮ್ಮ ಮನೆಯಲ್ಲಿ ಕೆಲಸ ಮಾಡಿಕೊಂಡಿದ್ದರು. ಅದಷ್ಟೆ ಗೊತ್ತು. ಅದನ್ನು ಹೊರತುಪಡಿಸಿ ಆಕೆಯ ಬಗ್ಗೆಯಾಗಲಿ, ಅಪರಹರಣದ ಬಗ್ಗೆಯಾಗಲೀ ಯಾವುದೂ ಗೊತ್ತಿಲ್ಲ ಎಂದು ರೇವಣ್ಣ ತಿಳಿಸಿದ್ದಾರೆ.
ರಾತ್ರಿ ಮಲಗಲು ಸಿಐಡಿ ಸೆಲ್‌ನಲ್ಲಿ ಇರಿಸದೇ ಎಸ್‌ಐಟಿ ತನ್ನ ಕಛೇರಿಯಲ್ಲಿ ವ್ಯವಸ್ಥೆ ಮಾಡಿದ್ದು, ಹೀಗಾಗಿ ರಾತ್ರಿ ರೇವಣ್ಣರನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿಲ್ಲ. ಇಂದು ಕೆಲ ಪ್ರಶ್ನೆಗಳನ್ನು ಮಾಡಲಿರುವ ಎಸ್‌ಐಟಿ ನಂತರ ನ್ಯಾಯಾಧೀಶರ ಮುಂದೆ ಹಾಜರು ಪಡಿಸಲು ತೀರ್ಮಾನಿಸಿದ್ದಾರೆ.
ಅತ್ಯಾಚಾರಕ್ಕೆ ಒಳಗಾದ ಮಹಿಳೆ ದೂರು ನೀಡಬಾರದು ಎಂದು ಆಕೆಯನ್ನು ಅಪಹರಣ ಮಾಡಿದ ಗಂಭೀರ ಆರೋಪ ಈಗ ಹೆಚ್‌ಡಿ ರೇವಣ್ಣ ಮೇಲಿದೆ. ಅತ್ಯಾಚಾರ ವಿಚಾರ ರೇವಣ್ಣರಿಗೆ ಗೊತ್ತಿತ್ತಾ ಅಥವಾ ವಿಚಾರ ಗೊತ್ತಿದ್ದೂ ಅತ್ಯಾಚಾರ ಮಾಡಿದ್ದ ಆರೋಪಿ ಪ್ರಜ್ವಲ್ ರೇವಣ್ಣರಿಗೆ ಸಹಾಯ ಮಾಡುವ ಉದ್ದೇಶದಿಂದ ಅಪಹರಣ ಮಾಡಿಸಿದರಾ ದೂರು ಕೊಟ್ಟಲ್ಲಿ ನಿನಗೆ ಏನಾದರೂ ಮಾಡುತ್ತೇವೆ ಎಂದು ಮಹಿಳೆಗೆ ಬೆದರಿಕೆ ಹಾಕಿದ್ದಾರೆಯೇ ಹೀಗೆ ಹಲವಾರು ಆಯಾಮದಲ್ಲಿ ಎಸ್‌ಐಟಿ ವಿಚಾರಣೆ ನಡೆಸಲಿದೆ.
ಸಂತ್ರಸ್ತೆಯ ಹೇಳಿಕೆ ಮುಖ್ಯ:
ಅಪಹರಣವಾಗಿರುವ ಮಹಿಳೆಯನ್ನು ಎಸ್‌ಐಟಿ ಅಧಿಕಾರಿಗಳು ಪತ್ತೆಮಾಡಿದ್ದು, ಮಹಿಳೆಯ ಹೇಳಿಕೆ ಬಹುಮುಖ್ಯವಾಗಿದೆ. ಇಂದು ರೇವಣ್ಣ ನ್ಯಾಯಾಧೀಶರ ಮುಂದೆ ಹಾಜರು ಪಡಿಸುವ ಮೊದಲೇ ಎಸ್‌ಐಟಿ ಮಹಿಳೆಯಿಂದ ಮಾಹಿತಿ ಮತ್ತು ಹೇಳಿಕೆಯ ಮಾಡಿಕೊಳ್ಳಲಿದೆ.
ಅಪಹರಣ ಮಾಡಿ ತನಗೆ ಬೆದರಿಕೆ ಇಟ್ಟಿದ್ದರು. ತನ್ನ ಮೇಲೆ ಅತ್ಯಾಚಾರ ಆಗಿದೆ ಈ ವಿಚಾರ ಹೊರ ಬಾರದಂತೆ ತಡೆದರು ಎಂದು ಹೇಳಿಕೆ ನೀಡಿ ಸಾಕ್ಷ್ಯ ನೀಡಿದರೆ ರೇವಣ್ಣ ಕುಟುಂಬಕ್ಕೆ ಸಂಕಷ್ಟ ಎದುರಾಗಲಿದೆ. ಇಲ್ಲಾ ತಾನಾಗಿಯೇ ಹೋಗಿದ್ದೆ ಯಾವ ಒತ್ತಡ ಇರಲಿಲ್ಲ ಎಂದು ಹೇಳಿಕೆ ನೀಡಿದರೆ ಮಾತ್ರ ರೇವಣ್ಣ ಮತ್ತು ಕುಟುಂಬಕ್ಕೆ ರಿಲೀಫ್ ಸಿಗಲಿದೆ. ಅಪಹರಣವಾಗಿರುವ ಮಹಿಳೆ ಹೇಳಿಕೆ ಹಾಗೂ ಇತರೆ ಸಾಕ್ಷಿಗಳ ಮೇಲೆ ಮುಂದಿನ ತನಿಖೆ ನಿರ್ಧಾರವಾಗಲಿದೆ.
ಜಾಮೀನಿಗೆ ಮನವಿ:
ರೇವಣ್ಣ ಬಂಧನದ ಬೆನ್ನಲ್ಲೆ ನಿರೀಕ್ಷಣಾ ಜಾಮೀನು ಅರ್ಜಿ ತನ್ನಿಂದ ತಾನೆ ವಜಾಗೊಂಡಿದ್ದು, ನಾಳೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ರೆಗ್ಯುಲರ್ ಜಾಮೀನಿಗಾಗಿ ರೇವಣ್ಣ ಪರ ವಕೀಲರು ಅರ್ಜಿ ಸಲ್ಲಿಸಲಿದ್ದಾರೆ.
ಸಂತ್ರಸ್ತೆ ಪತ್ತೆಯಾಗಿದ್ದು, ರೇವಣ್ಣ ಅವರಿಗೂ ಅಪಹರಣ ಕೇಸ್‌ಗೂ ಯಾವುದೇ ಸಂಬಂಧವಿಲ್ಲ ಎಂದು ವಾದ ಮಂಡಿಸುವ ಸಾಧ್ಯತೆ ಇದೆ.
ಜಾಮೀನು ರದ್ದಾದರೆ:
ಇನ್ನು ಜನಪ್ರತಿನಿಧಿಗಳ ಕೋರ್ಟ್‌ನಲ್ಲಿ ಜಾಮೀನು ರದ್ದಾದರೆ ರೇವಣ್ಣ ಅವರು ಹೈಕೋರ್ಟ್ ಮೊರೆ ಹೋಗಲಿದ್ದಾರೆ. ಹೈಕೋರ್ಟ್‌ನ ಜನಪ್ರತಿನಿಧಿಗಳ ಪೀಠದಲ್ಲಿ ಅರ್ಜಿ ಸಲ್ಲಿಸಲು ಅವಕಾವಿದೆ. ಇದೆಲ್ಲವೂ ಅಪಹರಣಕ್ಕೊಳಗಾದ ಸಂತ್ರಸ್ತೆ ನೀಡುವ ಹೇಳಿಕೆಗಳ ಮೇಲೆ ನಿರ್ಧಾರವಾಗಲಿದೆ. ಒಂದು ವೇಳೆ ಸಂತ್ರಸ್ತೆ ರೇವಣ್ಣ ಪರ ಗುರುತರ ಆರೋಪಗಳನ್ನ ಮಾಡದಿದ್ದರೆ ಸುಲಭವಾಗಿ ಜಾಮೀನು ಸಿಗಬಹುದು. ಬದಲಾಗಿ ರೇವಣ್ಣ ವಿರುದ್ಧ ಸಂತ್ರಸ್ತೆ ಅಪಹರಣ, ಕಿರುಕುಳದ ಆರೋಪ ಮಾಡಿ ಅದು ಸಾಬೀತಾದರೆ ಜಾಮೀನು ಲಭಿಸುವುದು ಕಷ್ಟ ಎಂದು ಮೂಲಗಳು ತಿಳಿಸಿವೆ.