ರಾತ್ರಿಯಿಂದ ಕರ್ಫ್ಯೂ ಜಾರಿ ಮೇ 12 ರವರೆಗೆ ಜನಜೀವನ ಸ್ತಬ್ಧ

ಬೆಂಗಳೂರು,ಏ.೨೭- ಕೊರೊನಾ ತಡೆಗೆ ರಾಜ್ಯಾದ್ಯಂತ ಇಂದು ರಾತ್ರಿಯಿಂದಲೇ ೧೪ ದಿನಗಳ ಲಾಕ್‌ಡೌನ್ ಜಾರಿಯಾಗಲಿದ್ದು, ೧೪ ದಿನ ರಾಜ್ಯದಲ್ಲಿ ಜನಜೀವನ ಬಹುತೇಕ ಸ್ತಬ್ಧವಾಗಲಿದೆ.
ರಾಜ್ಯಾದ್ಯಂತ ಹೆಚ್ಚುತ್ತಿರುವ ಕೊರೊನಾ ಸೋಂಕಿನ ಸರಪಳಿಯನ್ನು ತುಂಡರಿಸಲು ನಿನ್ನೆ ನಡೆದ ಸಚಿವ ಸಂಪುಟ ಸಭೆಯಲ್ಲಿ ೧೪ ದಿನ ಅಂದರೆ, ಮೇ ೧೨ರವರೆಗೆ ಲಾಕ್‌ಡೌನ್ ಜಾರಿಮಾಡುವ ತೀರ್ಮಾನವನ್ನು ಕೈಗೊಳ್ಳಲಾಗಿತ್ತು. ರಾಜ್ಯಾದ್ಯಂತ ರಾತ್ರಿ ೯ ರಿಂದಲೇ ಲಾಕ್‌ಡೌನ್ ಜಾರಿಯಾಗಲಿದೆ.
ಲಾಕ್‌ಡೌನ್ ಅವಧಿಯಲ್ಲಿ ಜನರ ಅನಗತ್ಯ ಓಡಾಟಕ್ಕೂ ನಿರ್ಬಂಧ ವಿಧಿಸಲಾಗಿದೆ. ಅನಗತ್ಯವಾಗಿ ಜನ ರಸ್ತೆಯಲ್ಲಿ ಓಡಾಡಿದರೆ ಕಾನೂನಿನಡಿ ಶಿಕ್ಷೆಗೆ ಗುರಿಪಡಿಸಲಾಗುವುದು.
ಲಾಕ್‌ಡೌನ್ ಸಂದರ್ಭಗಳಲ್ಲಿ ಅಂಗಡಿ-ಮುಂಗಟ್ಟುಗಳು, ವಾಹನಗಳ ಸಂಚಾರ ಸಂಪೂರ್ಣ ಬಂದ್ ಆಗಲಿದ್ದು, ಅಗತ್ಯ ವಸ್ತುಗಳನ್ನು ಖರೀದಿಸಲು ಸಾರ್ವಜನಿಕರಿಗೆ ಬೆಳಿಗ್ಗೆ ೬ ರಿಂದ ೧೦ರವರೆಗೆ ಅವಕಾಶ ಕಲ್ಪಿಸಲಾಗಿದೆ.
ಬೆಳಿಗ್ಗೆ ೬ ರಿಂದ ೧೦ರವರೆಗೂ ಹಾಲು, ಹಣ್ಣು, ತರಕಾರಿ, ದಿನಸಿ, ಮದ್ಯದಂಗಡಿ ಸೇರಿದಂತೆ, ಅವಶ್ಯ ವಸ್ತುಗಳ ಅಂಗಡಿಗಳನ್ನು ತೆರೆಯಲು ಅವಕಾಶ ನೀಡಲಾಗಿದೆ. ಪ್ರತಿದಿನ ಬೆಳಿಗ್ಗೆ ಸಾರ್ವಜನಿಕರು ಅಗತ್ಯ ವಸ್ತುಗಳನ್ನು ೬ ರಿಂದ ೧೦ರವರೆಗೂ ಖರೀದಿಸಬಹುದು. ಬೆಳಿಗ್ಗೆ ೧೦ ಗಂಟೆ ನಂತರ ಈ ಎಲ್ಲಾ ಅಂಗಡಿಗಳು ಬಾಗಿಲು ಹಾಕಬೇಕು. ಹೋಟೆಲ್, ಮಾಲ್, ಚಿತ್ರಮಂದಿರ, ಜಿಮ್ ಸೇರಿದಂತೆ, ಎಲ್ಲಾ ರೀತಿಯ ವಾಣಿಜ್ಯ ಚಟುವಟಿಕೆಗಳು ಬಂದ್ ಆಗಿರುತ್ತವೆ. ಹೋಟೆಲ್‌ಗಳಲ್ಲಿ ಪಾರ್ಸೆಲ್‌ಗೆ ಅವಕಾಶ ಕಲ್ಪಿಸಲಾಗಿದೆ.
ಸಾರಿಗೆ ಬಂದ್
೧೪ ದಿನಗಳ ಲಾಕ್‌ಡೌನ್‌ನಲ್ಲಿ ಸಾರಿಗೆ ಸಂಚಾರ ಸಂಪೂರ್ಣ ಬಂದ್ ಆಗಲಿದೆ, ಸರ್ಕಾರಿ ಮತ್ತು ಖಾಸಗಿ ಬಸ್ ಸಂಚಾರವಿರುವುದಿಲ್ಲ. ಇದರಿಂದಾಗಿ ತುರ್ತಾಗಿ ಪ್ರಯಾಣಿಸಬೇಕಾದವರು ಪರಿತಪಿಸುವಂತಾಗಿದೆ. ತುರ್ತು ಸಂದರ್ಭಗಳಲ್ಲಿ ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ.
ಗಾರ್ಮೆಂಟ್ ಹೊರತುಪಡಿಸಿ, ಉಳಿದ ಎಲ್ಲಾ ಉತ್ಪಾದನಾ ವಲಯದ ಕಾರ್ಖಾನೆಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ. ದೇವಸ್ಥಾನ, ಮಸೀದಿ, ಚರ್ಚ್, ಶಾಲಾ-ಕಾಲೇಜುಗಳು ಲಾಕ್‌ಡೌನ್ ಅವಧಿಯಲ್ಲಿ ಬಂದ್ ಆಗಲಿವೆ.
ಕಚೇರಿ ಬಂದ್
ಲಾಕ್‌ಡೌನ್ ಅವಧಿಯಲ್ಲಿ ಸರ್ಕಾರಿ ಕಚೇರಿಗಳು ಮುಚ್ಚಲಾಗಿದೆ, ಅವಶ್ಯ ಸೇವೆ ಹೊರತುಪಡಿಸಿ ಉಳಿದ ಎಲ್ಲಾ ಸರ್ಕಾರಿ ಕಚೇರಿಗಳ ಬಾಗಿಲು ತೆರೆಯುವಂತಿಲ್ಲ, ಬ್ಯಾಂಕ್, ವಿಮಾ ಕಚೇರಿ, ಆಸ್ಪತ್ರೆ, ಮೆಡಿಕಲ್ ಸ್ಟೋರ್, ಎಟಿಎಂಗಳು ತೆರೆದಿರುತ್ತವೆ.

ಏನಿರುತ್ತದೆ
ಆರೋಗ್ಯ ಸೇವೆ, ಆಸ್ಪತ್ರೆ, ಕ್ಲಿನಿಕ್, ಮೆಡಿಕಲ್ ಶಾಪ್, ಉದ್ಯಮ, ದೂರಸಂಪರ್ಕ, ಇಂಟರ್‌ನೆಟ್ ಸೇವೆ, ಅಗತ್ಯ ಸೇವೆ ಒದಗಿಸುವ ಸರ್ಕಾರದ ವಿವಿಧ ಕಚೇರಿಗಳು, ನಿರ್ಮಾಣ ವಲಯದ ಚಟುವಟಿಕೆಗಳು, ಕೃಷಿ ಚಟುವಟಿಕೆಗಳು, ೫೦ ಜನಕ್ಕೆ ಸೀಮಿತವಾಗಿ ಮದುವೆಗೆ ಅವಕಾಶ, ಕಾರ್ಗೋ ಮತ್ತು ಇ-ಕಾಮರ್ಸ್, ಆರೋಗ್ಯ ಸೇರಿದಂತೆ, ತುರ್ತು ಸಂದರ್ಭಗಳಲ್ಲಿ ಆಟೋ, ಟ್ಯಾಕ್ಸಿ ಬಳಕೆ,
ಏನಿರುವುದಿಲ್ಲ
ದೇವಸ್ಥಾನ, ಮಸೀದಿ, ಚರ್ಚ್, ಶಾಲಾ-ಕಾಲೇಜು, ಸಿನಿಮಾ ಮಂದಿರ, ಜಿಮ್, ಸರ್ಕಾರಿ ಮತ್ತು ಖಾಸಗಿ ಬಸ್, ಟ್ಯಾಕ್ಸಿ, ಆಟೋ, ಸಿನಿಮಾ ಮಂದಿರ, ಶಾಪಿಂಗ್ ಮಾಲ್, ಈಜುಕೊಳ, ಯೋಗಕೇಂದ್ರ, ಸ್ಪಾಗಳು, ಪಾರ್ಕ್‌ಗಳು, ರಾಜಕೀಯ, ಸಾಮಾಜಿಕ ಹಾಗೂ ಧಾರ್ಮಿಕ ಸಮಾವೇಶಗಳು,