ರಾತಿ ಸುರಿದ ಬಾರಿ ಮಳೆಗೆ ಕೊಚ್ಚಿ ಹೋದ ಗ್ರಾಮಕ್ಕೆ ಸಂಪರ್ಕ ರಸ್ತೆ

ಕೆ.ಆರ್.ಪೇಟೆ. ಆ.03:- ತಾಲೂಕಿನ ಕೆ.ಆರ್.ಪೇಟೆ ಸಂತೆಬಾಚಹಳ್ಳಿ ಮುಖ್ಯ ರಸ್ತೆಯಿಂದ ಅಗ್ರಹಾರಬಾಚಹಳ್ಳಿ ಗ್ರಾಮಕ್ಕೆ ಹೋಗುವ ರಸ್ತೆಯು ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆಯಿಂದ ತಾತ್ಕಾಲಿಕವಾಗಿ ನಿರ್ಮಿಸಿದ್ದ ರಸ್ತೆಯು ರಾತ್ರಿ ಸುರಿದ ಬಾರಿ ಮಳೆಗೆ ಕೊಚ್ಚಿ ಹೋಗಿದ್ದು ಗ್ರಾಮಕ್ಕೆ ಸಂಪರ್ಕ ಕಡಿತಗೊಂಡಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಈ ರಸ್ತೆಯಲ್ಲಿ ಕೆರೆ ಕೋಡಿ ನೀರು ಹರಿದು ಹೋಗುವುದರಿಂದ ಅಡ್ಡಲಾಗಿ ಹೊಸದಾಗಿ ಸೇತುವೆ ನಿರ್ಮಾಣದ ಕಾಮಗಾರಿ ನಡೆಯುತ್ತಿದೆ ಅದಕ್ಕೆ ಪರ್ಯಾಯವಾಗಿ ತಾತ್ಕಾಲಿಕ ರಸ್ತೆ ನಿರ್ಮಾಣ ಮಾಡಲಾಗಿತ್ತು ಆದರೆ ಅದು ಕೂಡ ಮಳೆ ನೀರಿಗೆ ಕೊಚ್ಚಿ ಹೋಗಿದೆ ಈ ಕಾಮಗಾರಿಯ ಟೆಂಡರ್ ಪ್ರಕ್ರಿಯೆ ಎಂಟು ತಿಂಗಳ ಹಿಂದೆಯೇ ಮುಗಿದಿತ್ತು ಆದರೆ ಬೇಸಿಗೆಯಲ್ಲಿ ಕಾಮಗಾರಿ ಪ್ರಾರಂಬಿಸದೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಮುಂದಕ್ಕೆ ಹಾಕಿ ಮಳೆಗಾಲದಲ್ಲಿ ಪ್ರಾರಂಭ ಮಾಡಿರುವುದು ಇಷ್ಟೆಲ್ಲಾ ಗೊಂದಲಕ್ಕೆ ಕಾರಣವಾಗಿದೆ ಇದಲ್ಲದೆ ಕೋಡಿ ನೀರು ಹರಿಯವ ಹಳ್ಳವನ್ನು ಒತ್ತುವರಿ ಮಾಡಿಕೊಂಡಿದ್ದು ತಾಲ್ಲೂಕು ಆಡಳಿತ ಒತ್ತವರಿಯಾಗಿರುವ ಜಾಗವನ್ನು ತೆರವುಗೊಳಿಸದಿರುವುದರಿಂದ ಹಳ್ಳವು ಕಿರಿದಾಗಿದ್ದು ಹೆಚ್ಚುವರಿ ನೀರು ನೂರಾರು ಎಕರೆ ಜಮೀನನ್ನು ಆವರಿಸಿಕೊಂಡಿದೆ ಇದರಿಂದ ರೈತರು ಹಾಕಿದ್ದ ಭತ್ತದ ಅಗೆಯು ನೀರಿನಲ್ಲಿ ಕೊಚ್ಚಿ ಹೋಗಿದ್ದು ಇದರಿಂದ ರೈತರಿಗೆ ಬಾರಿ ನಷ್ಟವಾಗಿದೆ ಎಂದು ಆರೋಪಿಸಿದ್ದಾರೆ.
ಇನ್ನೂ ನಾಲ್ಕು ತಿಂಗಳುಗಳ ಕಾಲ ಮಳೆ ಬೀಳುವುದರಿಂದ ಸೇತುವೆಯ ಕಾಮಗಾರಿಯನ್ನು ನಿರ್ವಹಿಸುವುದು ಕಷ್ಟವೇ ಅಲ್ಲಿಯವರೆಗೆ ಗ್ರಾಮದಿಂದ ಪಟ್ಟಣಕ್ಕೆ ಹೋಗುವ ಶಾಲಾ ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರು, ಹಾಲು, ಪಡಿತರ ವಾಹನಗಳು ಸೇರಿದಂತೆ ನೂರಾರು ದ್ವಿಚಕ್ರ ವಾಹನಗಳು ಗ್ರಾಮಕ್ಕೆ ಬಂದು ಹೋಗುತ್ತವೆ ಇದೇ ಮಾರ್ಗವಾಗಿ ಮುಂದಿನ ನಾಲ್ಕೈದು ಗ್ರಾಮಗಳಿಗೂ ಈ ರಸ್ತೆ ಸಂಪರ್ಕ ಕಲ್ಪಿಸುತ್ತದೆ ಈಗ ರಸ್ತೆ ಇಲ್ಲದ ಕಾರಣ ಹದಿನೈದು ಇಪ್ಪತ್ತು ಕಿ.ಮೀಟರ್ ಸುತ್ತಿ ಬಳಸಿ ಗ್ರಾಮಕ್ಕೆ ಸೇರಬೇಕಾದ ದುಸ್ಥಿತಿ ಸಾರ್ವಜನಿಕರಿಗೆ ಒದಗಿಬಂದಿದೆ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ. ಸಂಬಂಧ ಪಟ್ಟ ಅಧಿಕಾರಿಗಳು ಕೂಡಲೇ ಸ್ಥಳ ಪರಿಶೀಲಿಸಿ ಆಗಿರುವ ಸಮಸ್ಯೆಯನ್ನು ಬಗೆಹರಿಸದಿದ್ದರೆ ನಾವೆ ಅಧಿಕಾರಿಗಳನ್ನು ಕಟ್ಟಿ ಹೊಡೆಯಬೇಕಾದ ಸಂಧರ್ಭ ಬರಬಹುದು ಎಂದು ಅಧಿಕಾರಿಗಳಿಗೆ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಗ್ರಾಮದ ಯಜಮಾನರುಗಳಾದ ಪುಟ್ಟಸ್ವಾಮಿ ಗೌಡ, ಅಣ್ಣಪ್ಪ, ಸುರೇಶ, ಮಹೇಶ, ಬೋರೇಗೌಡ, ಮಹದೇವೇಗೌಡ, ನಾಗರಾಜು ಸೇರಿದಂತೆ ಹಲವರು ಹಾಜರಿದ್ದರು.