
ಸಂಜೆವಾಣಿ ವಾರ್ತೆ
ಬಳ್ಳಾರಿ, ಜು,13- ನೇತಾಜಿ ಸುಭಾಷ್ ಚಂದ್ರ ಬೋಸ್ ರವರ 126 ನೇ ಜನ್ಮ ವಾರ್ಷಿಕದ ಸಂದರ್ಭದಲ್ಲಿ ನೇತಾಜಿಯವರ ” ರಾಣಿ ಝಾನ್ಸಿ ರೆಜಿಮೆಂಟ್” ಸ್ಥಾಪನಾ ದಿನದ ನೆನಪಿನಲ್ಲಿ ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ ( ಎ. ಐ. ಎಂ. ಎಸ್.ಎಸ್)ಯ ಜಿಲ್ಲಾ ಕಚೇರಿಯಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮಕ್ಕೆ ಮುಖ್ಯ ಭಾಷಣಕಾರರಾಗಿ ಆಗಮಿಸಿದ ಎ.ಐ.ಎಮ್. ಎಸ್.ಎಸ್. ನ ರಾಜ್ಯ ಉಪಾಧ್ಯಕ್ಷರಾದ ಎಂ. ಎನ್.ಮಂಜುಳಾ ಅವರು ಮಾತನಾಡುತ್ತಾ “ಸಾಮ್ರಾಜ್ಯಶಾಹಿ ಬ್ರಿಟಿಷರ ವಿರುದ್ಧ ಸಶಸ್ತ್ರ ಸಮರ ಸಾರಲು ಇಂಡಿಯನ್ ನ್ಯಾಷನಲ್ ಆರ್ಮಿಯನ್ನು ಸಜ್ಜುಗೊಳಿಸಿ ಅದರಲ್ಲಿ ವಿಶೇಷವಾಗಿ ತರಬೇತಿ ಪಡೆದ ಮಹಿಳಾ ಯೋಧೆಯರ ಪಡೆ ಸುಪ್ರಸಿದ್ಧ “ರಾಣಿ ಝಾನ್ಸಿ ರೆಜಿಮೆಂಟ್” ಅನ್ನು ಜುಲೈ 12 ರಂದು ಸ್ಥಾಪಿಸಿದರು.ಅಂದಿನ ಸಮಾಜ ಹೆಣ್ಣು ಮಕ್ಕಳನ್ನು ಎರಡನೆಯ ದರ್ಜೆಯ ಪ್ರಜೆಯಾಗಿ ಕಾಣುತ್ತಿತ್ತು. ಇದೆಲ್ಲವನ್ನು ಮೆಟ್ಟಿನಿಂತ ಹೆಣ್ಣು ಮಕ್ಕಳು ನೇತಾಜಿಯವರ ಕರೆಗೆ ಓಗೊಟ್ಟು ಸೈನ್ಯವನ್ನು ಸೇರಿದ್ದು ಅತ್ಯಂತ ಸ್ಫೂರ್ತಿದಾಯಕ.ಇಲ್ಲಿ ನೇತಾಜಿಯವರ ಕೆಲಸ ಅನನ್ಯ. ಮಹಿಳೆಯರು ಪುರುಷರಷ್ಟೇ ಸರಿ ಸಮಾನವಾಗಿ ಯುದ್ಧಭೂಮಿಯಲ್ಲಿ ಕಾದಾಡಬಲ್ಲರು ಎಂದು ಸಾಬೀತುಪಡಿಸಿ ವಿಶ್ವಕ್ಕೆ ತೋರಿಸಿದರು.
ಇಂದು ದೇಶದಲ್ಲಿ ಎಲ್ಲೆಡೆ ಹಸಿವು, ಬಡತನ, ಅಶ್ಲೀಲತೆ, ಸಾಂಸ್ಕೃತಿಕ ಮೌಲ್ಯಗಳ ಅಧಃಪತನ, ಮಹಿಳೆಯರ ಮೇಲಿನ ದೌರ್ಜನ್ಯಗಳು ಎಗ್ಗಿಲ್ಲದೆ ನಡೆಯುತ್ತಿವೆ.ಇಂತಹ ಅನ್ಯಾಯದ ವಿರುದ್ಧ ಧ್ವನಿ ಎತ್ತಲು ನಾವು ನೇತಾಜಿಯವರ ಹೋರಾಟದ ದಾರಿಯನ್ನು ಹಾಗೂ ಜೀವನ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು.ಆಗ ಮಾತ್ರ ನೇತಾಜಿಯವರನ್ನು ನೆನಪಿಸಿಕೊಳ್ಳುವುದು, ಅವರಿಗೆ ಗೌರವ ಸಲ್ಲಿಸುವುದು ಅರ್ಥಪೂರ್ಣವಾಗುತ್ತದೆ. ಈ ನಿಟ್ಟಿನಲ್ಲಿ ಎಲ್ಲಾ ಮಹಿಳೆಯರು, ವಿದ್ಯಾರ್ಥಿನಿಯರು ಸಜ್ಜಾಗಬೇಕೆಂದು” ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಕಾರ್ಯದರ್ಶಿಗಳಾದ ವಿಜಯಲಕ್ಷ್ಮಿ ವಹಿಸಿಕೊಂಡಿದ್ದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಅಧ್ಯಕ್ಷರಾದ ಈಶ್ವರಿ ಕೆ.ಎಂ.,ಸಂಘಟನೆಯ ಪದಾಧಿಕಾರಿಗಳಾದ ವಿದ್ಯಾ,ಗಿರಿಜಾ,ಪದ್ಮಾ , ಮೀನಾಕ್ಷಿ ಹಾಗೂ ಹೆಣ್ಣುಮಕ್ಕಳು, ವಿದ್ಯಾರ್ಥಿನಿಯರು ಭಾಗವಹಿಸಿದ್ದರು.