ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಬೆಳವಣಿಗೆಗೆ ಸರ್ಕಾರದಿಂದಲೂ ಅಗತ್ಯ ನೆರವುಃ ಶಾಸಕ ಯತ್ನಾಳ

ವಿಜಯಪುರ, ನ.11-ನಗರದ ತೊರವಿಯ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ ಆವರಣದಲ್ಲಿ ಗಿರಿಜನ ಉಪಯೋಜನೆ (ಟಿಎಸ್‍ಪಿ) ಅಡಿಯಲ್ಲಿ ನೂತನವಾಗಿ ನಿರ್ಮಿಸಲಾಗಿರುವ ವಿದ್ಯಾರ್ಥಿ ವಸತಿ ನಿಲಯ ಕಟ್ಟಡವನ್ನು ಅತ್ಯಂತ ಸುಸಜ್ಜಿತವಾಗಿ ನಿರ್ಮಿಸಲಾಗಿದ್ದು, ವಿಶ್ವವಿದ್ಯಾಲಯದ ಅಭಿವೃದ್ಧಿ ಕಾರ್ಯಗಳಿಗೆ, ಸರ್ಕಾರದಿಂದಲೂ ಅಗತ್ಯ ನೆರವು ನೀಡಲಾಗುವುದು ಎಂದು ಶಾಸಕ ಬಸನಗೌಡ ಪಾಟೀಲ್ (ಯತ್ನಾಳ) ಅವರು ಹೇಳಿದರು.
ಜಿಲ್ಲೆಯ ಡಾ.ಫ.ಗು ಹಳಕಟ್ಟಿ ಸ್ನಾತಕೋತ್ತರ ಕೇಂದ್ರ, ವಚನ ಸಂಗಮ, ತೊರವಿಯಲ್ಲಿ ಗಿರಿಜನ ಉಪಯೋಜನೆ (ಟಿಎಸ್‍ಪಿ) ಅಡಿಯಲ್ಲಿ ನಿರ್ಮಿಸಿದ ವಿದ್ಯಾರ್ಥಿ ವಸತಿ ನಿಲಯದ ನೂತನ ಕಟ್ಟಡ ಮತ್ತು ಶುದ್ಧ ಕುಡಿಯುವ ನೀರಿನ ಘಟಕದ ಉದ್ಘಾಟನಾ ಸಮಾರಂಭ ಹಾಗೂ ಎಸ್.ಸಿ.ಪಿ ಮತ್ತು ಟಿ.ಎಸ್.ಪಿ ಯೋಜನೆಯಡಿಯಲ್ಲಿ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‍ಟಾಪ್ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಅದರಂತೆ ಮುಂಬರುವ ದಿನಗಳಲ್ಲಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ವಿಶ್ವವಿದ್ಯಾಲಯದ ಆವರಣದಲ್ಲಿ ಓಪನ್ ಜಿಮ್ ಸೇರಿದಂತೆ ವಾಕಿಂಗ್ ಟ್ರ್ಯಾಕ್ ಇನ್ನೀತರ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗುವುದು ಎಂದು ಅವರು ಹೇಳಿದರು.
ನಂತರ ವಿಧಾನ ಪರಿಷತ್ ಸದಸ್ಯ ಅರುಣ್ ಶಹಾಪೂರ ಮಾತನಾಡಿ ಮೈಸೂರು ವಿಶ್ವವಿದ್ಯಾಲಯ ಹಾಗೂ ಕರ್ನಾಟಕ ವಿಶ್ವವಿದ್ಯಾಲಯಗಳಂತೆಯೇ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯವೂ ಬೆಳಯುವಂತಾಗಬೇಕು. ಆ ನಿಟ್ಟಿನಲ್ಲಿ ಸರ್ಕಾರದಿಂದಲೂ ಅಗತ್ಯ ನೆರವು ನೀಡಲಾಗುವುದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಕುಲಪತಿ ಎಂ.ರಾಮಚಂದ್ರಗೌಡ, ದಶರಥ ಪದ್ಮಶಾಲಿ, ಎಸ್.ಎಮ್ ಹುರಕಡ್ಲಿ, ಡಿ.ಎನ್ ಪಾಟೀಲ, ನರಸಿಂಹ ರಾಯಚೂರ, ನೀತಾ.ಎಸ್.ರಾವ್, ಡಾ.ಎಸ್.ಎಮ್ ನದಾಫ್, ಶೋಭಾ ಹೂಗಾರ, ಕಿರಣ್ ದೇಸಾಯಿ, ವಿ.ಡಿ ನಾಯಕ, ಕೆಎಲ್‍ಎನ್ ಮೂರ್ತಿ, ಶ್ರೀಮತಿ ಕಟ್ಟಿ, ಸೇರಿದಂತೆ ಶಿಕ್ಷಕ, ಶಿಕ್ಷಕೇತರ ಸಿಬ್ಬಂದಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.