ರಾಣಿ ಎಲಿಜಬೆತ್ ನಿಧನ: ಬ್ರಿಟನ್‌ನಲ್ಲಿ ನೀರವಮೌನ

ಲಂಡನ್, ಸೆ ೯- ಬ್ರಿಟಿಷ್ ಇತಿಹಾಸದಲ್ಲೇ ಸುಧೀರ್ಘ ಆಡಳಿತ ನಡೆಸಿದ ಮತ್ತು ಅತಿಹೆಚ್ಚು ವರ್ಷ ಬದುಕಿದ ರಾಜವಂಶಸ್ಥೆ ಎನಿಸಿದ ಬ್ರಿಟನ್ ರಾಣಿ ಎಲಿಜಬೆತ್ ನಿಧನದಿಂದ ಎಲ್ಲೆಡೆ ನೀರವಮೌನ ಆವರಿಸಿದೆ.
ರಾಣಿಯ ಮರಣವನ್ನು ಘೋಷಿಸುವ ಒಂದು ಗಂಟೆ ಮೊದಲು ಬಂಕಿಂಗ್‌ಹ್ಯಾಮ್ ಅರಮನೆಯ ಮೇಲೆ ಎರಡು ಕಾಮನಬಿಲ್ಲು ಕಾಣಿಸಿಕೊಂಡಿತು. ರಾಣಿ’ವೈದ್ಯಕೀಯ ಮೇಲ್ವಿಚಾರಣೆಯಲ್ಲಿದ್ದಾರೆ’ ಎಂದು ಅಧಿಕಾರಿಗಳು ಎಚ್ಚರಿಸಿದ ನಂತರವೂ ಜನಸಮೂಹ ಬಂಕಿಂಗ್‌ಹ್ಯಾಮ್ ಅರಮನೆಯ ಹೊರಗೆ ಜಮಾಯಿಸಲು ಶುರು ಮಾಡಿತ್ತು.
ನಿನ್ನೆ ಮಧ್ಯಾಹ್ನ ಮಳೆ ಸುರಿದ ನಂತರ ಮೋಡಗಳು ತೆರವುಗೊಳ್ಳುತ್ತಿದ್ದಂತೆ ಅಪರೂಪದ ವಿದ್ಯಮಾನವು ಆಕಾಶದಲ್ಲಿ ಕಾಣಿಸಿಕೊಂಡಿತು. ವೆಸ್ಟ್‌ಮಿನಿಸ್ಟರ್‌ನ ಎಲಿಜಬೆತ್ ಟವರ್ ಮತ್ತು ಕ್ವೀನ್ ವಿಕ್ಟೋರಿಯಾ ಸ್ಮಾರಕ ಸೇರಿದಂತೆ ಲಂಡನ್‌ನ ಪ್ರಮುಖ ಹೆಗ್ಗುರುತುಗಳ ಮೇಲೆ ಕಾಮನಬಿಲ್ಲು ಕಾಣಿಸಿದ್ದು, ಜನರಲ್ಲಿ ವಿಸ್ಮಯ ಮೂಡಿಸಿತು.ಬಂಕಿಂಗ್‌ಹ್ಯಾಮ್ ಅರಮನೆಯ ಹೊರಗೆ ಕಾಮನಬಿಲ್ಲು ಕಾಣಿಸುತ್ತಿದ್ದಂತೆ ಜನ ಗುಂಪುಗುಂಪಾಗಿ ನೋಡುತ್ತಿದ್ದ ದೃಶ್ಯಗಳು ಕಂಡು ಬಂತು. ರಾಣಿಯ ನಿಧನದ ಸುದ್ದಿ ತಿಳಿದ ಕೂಡಲೇ ಹೂಗುಚ್ಛಗಳನ್ನು ಹಿಡಿದು ಜನರು ಮಳೆಯಲ್ಲಿ ಜಮಾಯಿಸಿ ಕಣ್ಣೀರು ಹಾಕಿದರು.
ಪಾರ್ಥಿವ ಶರೀರವನ್ನು ಸ್ಕಾಟ್ ಲ್ಯಾಂಡ್ ನಿಂದ ಲಂಡನ್‌ಗೆ ರವಾನಿಸಲಾಗುತ್ತದೆ. ಹಿರಿಯ ಮಗ ಚಾರ್ಲ್ಸ್ ತಕ್ಷಣದಿಂದಲೇ ರಾಜನಾಗಿ ಕರ್ತವ್ಯ ನಿರ್ವಹಿಸಲಿದ್ದಾರೆ. ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ ರಾಣಿ ಅವರು ಕೊನೆಯುಸಿರೆಳೆದಿದ್ದು ಬ್ರಿಟನ್‌ನಲ್ಲಿ ಮುಂದಿನ ೧೦ ದಿನಗಳ ಕಾಲ ಶೋಕಾಚರಣೆ ಘೋಷಿಸಲಾಗಿದೆ.ಬ್ರಿಟನ್ ರಾಣಿ ಭಾರತದೊಂದಿಗೆ ನಿಕಟ ಸಂಬಂಧ ಹೊಂದಿದ್ದರು, ಕರ್ನಾಟಕಕ್ಕೂ ಭೇಟಿನೀಡಿದ್ದರು.