ರಾಟೆ ಆಡಿಸುವವರ ಬದುಕು ನುಂಗಿದ ಕೊರೊನಾ

ಮಧುಗಿರಿ, ನ. ೧೨- ಕೊರೊನಾ ಮಹಾಮಾರಿಯ ಹೊಡೆತಕ್ಕೆ ರಾಟೆ ಆಡಿಸುವವರ ಬದುಕು ಅಕ್ಷರಶಃ ನಲುಗಿ ಹೋಗಿದ್ದು, ಇತ್ತ ರಾಟೆಯೂ ಆರಂಭವಾಗದೇ ಅತ್ತ ತಮ್ಮ ಸ್ವಂತ ಊರುಗಳಿಗೂ ಹೋಗಲು ಸಾಧ್ಯವಾಗದೇ ಸುಮಾರು ೩೫ ಕಾರ್ಮಿಕರು ೮ಕ್ಕೂ ಹೆಚ್ಚು ಮಕ್ಕಳೊಂದಿಗೆ ರಾಟೆ ಸ್ಥಳದಲ್ಲೇ ಶೆಡ್ ನಿರ್ಮಿಸಿಕೊಂಡು ಜೀವನ ನಿರ್ವಹಣೆಗೆ ತತ್ತರಿಸುತ್ತಿದ್ದಾರೆ.
ಜಾತ್ರೆಗೆಂದು ಬಂದವರ ಬದುಕು ತತ್ತರ
ಪ್ರತಿ ವರ್ಷ ನಡೆಯುವ ಶ್ರೀ ದಂಡಿನ ಮಾರಮ್ಮ ಜಾತ್ರೆಯಲ್ಲಿ ರಾಟೆಯೇ ಭಕ್ತಾದಿಗಳಿಗೆ ಬಹು ದೊಡ್ಡ ಮನೋರಂಜನೆ. ಈ ಬಾರಿಯೂ ಎಂದಿನಂತೆ ಮಾರ್ಚ್ ತಿಂಗಳಲ್ಲಿ ಆರಂಭವಾದ ಜಾತ್ರೆಯಲ್ಲಿ ರಾಟೆ ಆಡಿಸಿದಲ್ಲಿ ನಾಲ್ಕು ಕಾಸು ನೋಡಬಹುದು ಎಂದು ರಾಜ್ಯದ ವಿವಿಧ ಊರುಗಳಿಂದ ಬಂದಿರುವ ಸುಮಾರು ೩೫ ಕಾರ್ಮಿಕರಿಗೆ ಈ ಬಾರಿ ಕೊರೊನಾ ಬಹು ದೊಡ್ಡ ಹೊಡೆತ ನೀಡಿದ್ದು, ಜಾತ್ರೆ ಆರಂಭವಾದ ೩ ದಿನಗಳಿಗೆ ಲಾಕ್‌ಡೌನ್ ಘೋಷಣೆಯಾದ ಹಿನ್ನೆಲೆಯಲ್ಲಿ ವಿಧಿಯಿಲ್ಲದೆ ರಾಟೆ ನಿಲ್ಲಿಸಬೇಕಾಯಿತು. ಇದರಿಂದ ಕಾರ್ಮಿಕರ ಬದುಕು ಅಕ್ಷರಶಃ ನಲುಗಿ ಹೋಗಿದ್ದು, ಸುಮಾರು ೮ ತಿಂಗಳಿನಿಂದ ಸ್ಥಳದಲ್ಲೇ ಶೆಡ್ ನಿರ್ಮಿಸಿಕೊಂಡು ರಾಟೆಯ ವಸ್ತುಗಳಿಗೆ ಕಾವಲು ಕಾಯುತ್ತಾ ದಿನ ದೂಡುತ್ತಿದ್ದಾರೆ. ಆರಂಭದ ದಿನಗಳಲ್ಲಿ ತಹಶೀಲ್ದಾರ್ ಡಾ.ಜಿ.ವಿಶ್ವನಾಥ್ ರವರು ನಮ್ಮ ಸಂಕಷ್ಟಕ್ಕೆ ಸ್ಪಂದಿಸಿ ದಿನಸಿ ಸಾಮಗ್ರಿಗಳನ್ನು ನೀಡಿ ನೆರವಿಗೆ ಧಾವಿಸಿದ್ದು, ನಂತರದ ದಿನಗಳಲ್ಲಿ ಸ್ಥಳೀಯವಾಗಿ ಕೃಷಿ ಕೂಲಿ, ಗಾರೆ ಕೆಲಸಕ್ಕೆ ಹೋಗಿ ಜೀವನ ನಿರ್ವಹಣೆ ನಡೆಸಿದ್ದೆವು. ಕೊರೊನಾ ನಮ್ಮೆಲ್ಲರಿಗೂ ಸಹಿಸಲಾರದ ಹೊಡೆತ ನೀಡಿದ್ದು, ಮತ್ತೆ ಯಾವಾಗ ರಾಟೆ ಅರಂಭವಾಗುವುದೋ, ಈ ವರ್ಷ ಕೃಷಿ ಚಟುವಟಿಕೆಗಳು ಮುಗಿದಿದ್ದು, ಈಗ ಮತ್ತೆ ಜೀವನ ನಿರ್ವಹಣೆಗೆ ಬಹಳಷ್ಟು ತೊಂದರೆಯಾಗುತ್ತಿದೆ ಎಂದು ಅವಲತ್ತುಕೊಳ್ಳುತ್ತಾರೆ ಕಾರ್ಮಿಕರು.
ಸಿನಿಮಾ, ಮಾಲ್‌ಗಿಲ್ಲದ ನಿರ್ಬಂಧ ನಮಗೇಕೆ
ಲಾಕ್‌ಡೌನ್ ತೆರವುಗೊಳಿಸಿದ ನಂತರ ಸರ್ಕಾರ ಹಂತ ಹಂತವಾಗಿ ಸಿನಿಮಾ, ಮಾಲ್ ಮತ್ತು ಜಿಮ್‌ಗಳಿಗೆ ಅವಕಾಶ ನೀಡಿದ್ದು, ಇದಕ್ಕೆ ನಮ್ಮ ಅಭ್ಯಂತರವಿಲ್ಲ. ಆದರೆ ನಮಗೂ ಅವಕಾಶ ನೀಡಿ ಈಗಾಗಲೇ ಕೊರೊನಾ ಮಹಾಮಾರಿಯಿಂದಾಗಿ ರಾಜ್ಯಾದ್ಯಂತ ಸುಮಾರು ೨ ಲಕ್ಷಕ್ಕೂ ಹೆಚ್ಚು ವಸ್ತು ಪ್ರದರ್ಶನದ ಆಯೋಜಕರು, ಮಳಿಗೆಯವರು ಮತ್ತು ಕಾರ್ಮಿಕರು ಕೆಲಸವಿಲ್ಲದೇ ಹತಾಶರಾಗಿದ್ದಾರೆ. ಹಾಗಾಗಿ ನಮಗೂ ಅವಕಾಶ ನೀಡಿದಲ್ಲಿ ಬಹಳಷ್ಟು ಕಾರ್ಮಿಕರು ಬದುಕು ಕಟ್ಟಿಕೊಳ್ಳಲಿದ್ದಾರೆ. ಇದರ ಬಗ್ಗೆ ಈಗಾಗಲೇ ಆರೋಗ್ಯ ಇಲಾಖೆಯ ಆಯುಕ್ತರಿಗೂ ಮನವಿ ಸಲ್ಲಿಸಿದ್ದು, ಸಕಾರಾತ್ಮಕವಾಗಿ ಸಂದಿಸಿದ್ದಾರೆ ಆದರೂ ಸರ್ಕಾರ ಮೀನಾಮೇಷ ಎಣಿಸುತ್ತಿದೆ ಎನ್ನುತ್ತಾರೆ ಇಲ್ಲಿ ರಾಟೆ ಹಾಕಿರುವ ನೆಲಮಂಗಲದ ಎಕ್ಸಿಬಿಷನ್ ಗುತ್ತಿಗೆದಾರ ಶ್ರೀನಿವಾಸ್.
ವಿವಿಧ ಊರುಗಳಿಂದ ಬಂದಿರುವ ಸುಮಾರು ೩೫ ಕಾರ್ಮಿಕರು ಸಂಸಾರ ತೊರೆದು ಕಳೆದ ೮ ತಿಂಗಳಿನಿಂದ ಕೆಲಸವಿಲ್ಲದೆ ಕಂಗಾಲಾಗಿದ್ದು, ಬೇರೆಡೆ ಹೋಗಿ ಮಾಡಲು ಕೆಲಸವಿಲ್ಲದಿರುವುದರಿಂದ ಇಲ್ಲಿಯೇ ಬಿಡಾರ ನಿರ್ಮಿಸಿಕೊಂಡು ದಿನ ದೂಡುತ್ತಿದ್ದೇವೆ. ಇಷ್ಟು ದಿನ ಕೂಲಿ ನಾಲಿ ಮಾಡಿ ಜೀವನ ಸಾಗಿಸಿದ್ದೆವು. ಮುಂದಿನ ಜೀವನದ್ದೇ ಬಹು ದೊಡ್ಡ ಚಿಂತೆಯಾಗಿದೆ ಎನ್ನುತ್ತಾರೆ ಕಾರ್ಮಿಕ ಮಹದೇವ್.