ರಾಜ ಕಾಲುವೆಗಳ ಅಭಿವೃದ್ಧಿಗೆ ಅಗತ್ಯ ಕ್ರಮ-ಡಿಸಿ

ಚಿಕ್ಕಬಳ್ಳಾಪುರ : ನ ೨೭:ಚಿಕ್ಕಬಳ್ಳಾಪುರ ನಗರಕ್ಕೆ ಹೊಂದಿಕೊಂಡಿರುವ ಕಂದವಾರ ಕೆರೆಯಿಂದ ಅಮಾನಿ ಗೋಪಾಲ ಕೃಷ್ಣ ಕೆರೆಗೆ ನೀರು ಹರಿಯುವ ಸಂಪರ್ಕಿತ ರಾಜ ಕಾಲುವೆಗಳ ಒತ್ತುವರಿ ಆಗಿರುವ ಕಡೆ ಒತ್ತುವರಿ ತೆರವು ಗೊಳಿಸುವ ಕಾರ್ಯವನ್ನು ಮಾಡಲಾಗಿದೆ. ಒತ್ತುವರಿಯಿಂದ ತೆರವಾಗಿರುವ ರಾಜಕಾಲುವೆಗಳನ್ನು ಅಭಿವೃದ್ಧಿ ಪಡಿಸಲು ಹಾಗೂ ರಸ್ತೆ ಇರುವ ಕಡೆ ಮತ್ತು ಅಗತ್ಯ ಇರುವ ಕಡೆ ಬಾಕ್ಸ್ ಮಾದರಿಯಲ್ಲಿ ಅಭಿವೃದ್ಧಿ ಪಡಿಸುವ ಸಂಬಂಧ ವಿವರವಾದ ಯೋಜನಾ ವರದಿ(ಜಠಿಡಿ)ಯನ್ನು ತಯಾರಿಸುತ್ತಿದ್ದು ಅಂತಿಮ ಹಂತದಲ್ಲಿದೆ. ಶೀಘ್ರದಲ್ಲಿಯೇ ಸರ್ಕಾರಕ್ಕೆ ವರದಿಯನ್ನು ಸಲ್ಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಆರ್.ಲತಾ ಅವರು ತಿಳಿಸಿದರು.
ಅವರು ಶುಕ್ರವಾರ ಚಿಕ್ಕಬಳ್ಳಾಪುರ ನಗರದ ವಿನಾಯಕ ಬಡಾವಣೆಗೆ ಭೇಟಿ ನೀಡಿ ಬಡಾವಣೆ ಹತ್ತಿರ ರಾಜಕಾಲುವೆ ಒತ್ತುವರಿ ತೆರವು ಗೊಳಿಸುವ ಕಾರ್ಯವನ್ನು ಸ್ವತಃ ಮುಂದೆ ನಿಂತು ಜಿಲ್ಲಾಧಿಕಾರಿಗಳೇ ಮಾಡಿಸಿ ಮಾತನಾಡುತ್ತಾ, ವಿನಾಯಕ ಬಡಾವಣೆ ಹತ್ತಿರದಿಂದ ರಾಷ್ಟ್ರೀಯ ಹೆದ್ದಾರಿವರೆಗೆ ಒತ್ತುವರಿ ಆಗಿರುವ ಸುಮಾರು ೬೦೦ ಮೀಟರ್ ಉದ್ದದ ಕಾಲುವೆ ಒತ್ತುವರಿಯನ್ನು ಇಂದೇ ತೆರವು ಗೊಳಿಸುವಂತೆ ಸಂಬಂಧ ಪಟ್ಟ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇತ್ತೀಚೆಗೆ ಬಿದ್ದ ಅಕಾಲಿಕ ಭಾರಿ ಮಳೆಯಿಂದ ರಾಜಕಾಲುವೆಗಳಲ್ಲಿ ನೀರು ಉಕ್ಕಿ ವಿನಾಯಕ ಬಡಾವಣೆಗೆ ಹಾಗೂ ಅಕ್ಕ ಪಕ್ಕದ ಜಮೀನುಗಳಿಗೆ ನೀರು ನುಗ್ಗಿತ್ತು ಆ ಸಂದರ್ಭದಲ್ಲಿ ತುರ್ತು ಕ್ರಮ ಕೈಗೊಂಡು ನೀರು ಮುಂದೆ ಸಾಗಿ ಗೋಪಾಲ ಕೃಷ್ಣ ಕೆರೆಗೆ ಸಾಗುವಂತೆ ಜಿಲ್ಲಾಡಳಿತದಿಂದ ತಾತ್ಕಾಲಿಕ ವ್ಯವಸ್ಥೆ ಮಾಡಲಾಗಿತ್ತು. ಮಾನ್ಯ ಮುಖ್ಯ ಮಂತ್ರಿಯವರು ಮಳೆ ಹಾನಿ ಸಮೀಕ್ಷೆಗಾಗಿ ಜಿಲ್ಲೆಗೆ ಇತ್ತೀಚಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಕಂದವಾರ ಕೆರೆಯಿಂದ ಗೋಪಾಲ ಕೃಷ್ಣ ಕೆರೆ ಸಂಪರ್ಕಿಸುವ ರಾಜ ಕಾಲುವೆಗಳಲ್ಲಿ ಆಗಿರುವ ಒತ್ತುವರಿಯನ್ನು ತೆರವುಗೊಳಿಸಿ ಕಾಲುವೆಗಳನ್ನು ಅಭಿವೃದ್ಧಿ ಪಡಿಸುವ ಮೂಲಕ ಮಳೆ ನೀರು ಸರಾಗವಾಗಿ ಹರಿಯುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದರು.ಮುಖ್ಯ ಮಂತ್ರಿಗಳ ನಿರ್ದೇಶನದಂತೆ ಕ್ರಮವಹಿಸಲಾಗುತ್ತಿದೆ ಎಂದರು.
ಕಂದವಾರ ಕೆರೆಯಿಂದ ಅಮಾನಿ ಗೋಪಾಲ ಕೃಷ್ಣ ಕೆರೆಗೆ ಮಳೆ ನೀರು ಸರಾಗವಾಗಿ ಹರಿಯಲು ೪ ರಾಜಕಾಲುವೆಗಳಿದ್ದು, ಈ ಪೈಕಿ ೩ ಕಾಲುವೆಗಳಲ್ಲಿ ನೀರು ಸರಾಗವಾಗಿ ಹರಿಯುವಂತೆ ವ್ಯವಸ್ಥೆ ಮಾಡಲಾಗಿದೆ. ಇತ್ತೀಚೆಗೆ ೨.೫ ಕಿಲೋಮೀಟರ್ ಉದ್ದದ ರಾಜ ಕಾಲುವೆ ಒತ್ತುವರಿಯನ್ನು ತೆರವುಗೊಳಿಸಿದ್ದರಿಂದ ೩ ಕಾಲುವೆಗಳಲ್ಲೂ ನೀರು ಸರಾಗವಾಗಿ ಹರಿಯುತ್ತಿದೆ ಆದ್ದರಿಂದ ನವೆಂಬರ್ ೧೭ರಿಂದ ೨೧ ರ ವರೆಗೆ ಬಿದ್ದ ಭಾರಿ ಮಳೆಯ ನೀರು ಸರಾಗವಾಗಿ ಮುಂದೆ ಸಾಗಲು ಸಾಧ್ಯ ವಾಯಿತು.ಉಳಿದ ಒಂದು ಕಾಲುವೆಯು ರೈಲ್ವೆ ಬ್ರಿಡ್ಜ್ ಬಳಿ ಬ್ಲಾಕ್ ಆಗಿದ್ದು, ಇದನ್ನು ಸಹ ಮುಕ್ತಗೊಳಿಸಲು ಕ್ರಮವಹಿಸಲಾಗಿದೆ.ಇದಲ್ಲದೆ ವಿನಾಯಕ ಬಡಾವಣೆಯಿಂದ ಗೋಪಾಲ ಕೃಷ್ಣ ಕೆರೆಗೆ ನೀರು ಹರಿಯುವ ರಾಜಕಾಲುವೆಯ ಸು.೬೦೦ ಮೀಟರ್ ಉದ್ದದ ಒತ್ತುವರಿಯನ್ನು ಇಂದು ತೆರವುಗೊಳಿಸಲಾಗುತ್ತಿದೆ. ಈ ಕಾರ್ಯ ಇಂದೇ ಪೂರ್ಣ ಗೊಳ್ಳಲಿದೆ ಎಂದರು.
ಈ ಸಂದರ್ಭದಲ್ಲಿ ತಹಸೀಲ್ದಾರ್ ಗಣಪತಿ ಶಾಸ್ತ್ರೀ, ನಗರಸಭೆ ಪೌರಾಯುಕ್ತ ಮಹಂತೇಶ್ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಹಾಜರಿದ್ದರು.