ರಾಜ್ ಅಭಿಮಾನಿ ಪದ್ಮಾವತಿಗೆ ಅಭಿನಂದನೆ

ಕೋಲಾರ,ಏ.೨೫: ಡಾ.ರಾಜ್ ಅವರ ಹುಟ್ಟುಹಬ್ಬವನ್ನು ಕಳೆದ ೩೧ ವರ್ಷಗಳಿಂದ ಮನೆಹಬ್ಬವಾಗಿ ಆಚರಿಸಿಕೊಂಡು ಬರುತ್ತಿದ್ದ ಕೆಇಬಿ ಕಾಲೋನಿಯ ಪದ್ಮಾವತಿ ಕೋಂ. ಯರ್ರಪ್ಪರನ್ನು ಕರವೇ ಪ್ರವೀಣ್ ಕುಮಾರ್‍ಶೆಟ್ಟಿ ಬಣದ ಚಂಬೇರಾಜೇಶ್ ಮತ್ತಿತರರು ಸನ್ಮಾನಿಸಿದರು.
ನಗರದ ಕುವೆಂಪು ಉದ್ಯಾನವನದಲ್ಲಿ ಕರವೇ ವತಿಯಿಂದ ಆಚರಿಸಲಾದ ರಾಜ್ ಕುಮಾರ್ ಜಯಂತಿ ಕಾರ್ಯಕ್ರಮದಲ್ಲಿ ಪದ್ಮಾವತಿ ಅವರನ್ನು ಸನ್ಮಾನಿಸಲಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಕರವೇ ಜಿಲ್ಲಾಧ್ಯಕ್ಷ ಚಂಬೇರಾಜೇಶ್, ಪದ್ಮಾವತಿಯವರು ಸುಮಾರು ೩೦ ವರ್ಷಗಳಿಗೂ ಹೆಚ್ಚು ಕಾಲದಿಂದ ಕನ್ನಡ ಸಂಘಟನೆಗಳ ಜತೆಗೂಡಿ ಬೆಂಗಳೂರು ಹಾಗೂ ಕೋಲಾರ ನಗರದಲ್ಲಿ ತಮ್ಮ ಆರಾಧ್ಯದೈವ ಡಾ.ರಾಜ್ ಕುಮಾರ್ ಹುಟ್ಟುಹಬ್ಬ ಆಚರಿಸಿಕೊಂಡು ಬಂದಿದ್ದರು.
ಆದರೆ ಈ ಬಾರಿ ನಗರದ ಕುವೆಂಪು ಉದ್ಯಾನವನದಲ್ಲಿನ ರಾಜ್ ಪ್ರತಿಮೆ ಮುಂಭಾಗ ಹುಟ್ಟುಹಬ್ಬ ಆಚರಿಸಿದ್ದು, ಅವರನ್ನು ಸನ್ಮಾನಿಸುತ್ತಿರುವುದು ಸಂತಸ ತಂದಿದೆ ಎಂದರು.
ಅಭಿಮಾನಿ ಪದ್ಮಾವತಿ ಅವರು ಹೇಳುವಂತೆ ಡಾ.ರಾಜ್‌ಕುಮಾರ್ ಅವರು ಯಾವುದೇ ವಿವಾದಗಳಿಗೆ ಅವಕಾಶ ನೀಡಲಿಲ್ಲ,ರಾಜಕೀಯಕ್ಕೂ ಬರುವ ಆಸೆ ವ್ಯಕ್ತಪಡಿಸಲಿಲ್ಲ, ಏನಿದ್ದರೂ ಕನ್ನಡ ನಾಡು,ನುಡಿಗೆ ತಮ್ಮ ಬದುಕು ಸೀಮಿತ ಎಂದೇ ನಂಬಿದ್ದವರು ಎಂದರು.
ಇಡೀ ಕುಟುಂಬವೇ ರಾಜ್‌ಕುಮಾರ್ ಅವರ ಚಿತ್ರವನ್ನು ಸಂತಸದಿಂದ ನೋಡುತ್ತಿದ್ದೆವು, ಇತ್ತೀಚಿನ ದಿನಗಳಲ್ಲಿ ಕುಟುಂಬ ಕುಳಿತು ನೋಡುವ ಚಿತ್ರಕಥೆಗಳು ಕಡಿಮೆಯಾಗಿದೆ ಎಂದು ವಿಷಾದಿಸಿದರು.
ಕನ್ನಡ ಚಿತ್ರರಂಗದಲ್ಲಿ ಮೇರು ನಟರಾಗಿದ್ದ ರಾಜ್‌ಕುಮಾರ್ ಅವರು, ಪೌರಾಣಿಕ ಹಾಗೂ ಆಧುನಿಕ ಕಥಾವಸ್ತುವಿನ ಸಿನಿಮಾಗಳಲ್ಲಿ ಎಲ್ಲಾ ರೀತಿಯ ಪಾತ್ರಗಳನ್ನು ನಿಭಾಯಿಸಿದ್ದು, ಅವರಿಗೆ ಸರಿಸಮರು ಯಾರೂ ಇಲ್ಲ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಎಸ್ಸಿಘಟಕದ ಜಿಲ್ಲಾಧ್ಯಕ್ಷ ಕೆ.ಜಯದೇವ್, ಕರವೇ ಪದಾಧಿಕಾರಿಗಳು, ಪದ್ಮಾವತಿ ಕುಟುಂಬ ಸದಸ್ಯರು ಹಾಜರಿದ್ದರು.