ರಾಜ್ಯ ಹೆದ್ದಾರಿ ರಸ್ತೆ ಅಗಲೀಕರಣ: ರೈತರ ಜಮೀನು ಒತ್ತುವರಿ ಆರೋಪ

ಲಿಂಗಸುಗೂರು,ಜೂ.೧೩-
ಮಸ್ಕಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಾಗಿ ರೈತರ ಜಮೀನು ಒತ್ತುವರಿ ಮಾಡಿದ ರಸ್ತೆ ಅಭಿವೃದ್ಧಿ ಪ್ರಾಧಿಕಾರ ಅಧಿಕಾರಿಗಳು ಹಾಗೂ ಗುತ್ತೆದಾರರು ಸೇರಿ ರೈತರ ಸಂಕಷ್ಟ ನಿವಾರಿಸಲು ಮುಂದಾಗುತ್ತಿಲ್ಲ ಹಾಗೂ ರಸ್ತೆ ಅಭಿವೃದ್ಧಿ ಹೆಸರಿನಲ್ಲಿ ಕಾಮಗಾರಿಗೆ ಗುತ್ತಿಗೆ ಪಡೆದ ಅಮ್ಮಾಪುರ ಕಂಪನಿ ಮತ್ತು ಹುನಗುಂದ ರಸ್ತೆ ಅಭಿವೃದ್ಧಿ ಪ್ರಾಧಿಕಾರ ಅಧಿಕಾರಿಗಳು ಕುತಂತ್ರದಿಂದ ರೈತರ ಜಮೀನು ಒತ್ತುವರಿ ಮಾಡಿದ ಪರಿಣಾಮವಾಗಿ ರೈತರು ಈಗಾಗಲೇ ಕಳೆದ ಒಂದು ವಾರದಿಂದ ಪ್ರತಿಭಟನೆ ನಡೆಸಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಂತೆಕಲ್ಲೂರ ರಾಷ್ಟ್ರೀಯ ಹೆದ್ದಾರಿ ಕಳಪೆ ಕಾಮಗಾರಿಗೆ ಸಾಥ್ ನೀಡಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಪಟ್ಟು ಹಿಡಿದು ಹೋರಾಟ ಪ್ರಾರಂಸಿದ ರೈತರ ಸಮಸ್ಯೆಗಳು ಅರಿತ ಮಸ್ಕಿ ತಹಶೀಲ್ದಾರ್ ರಸ್ತೆ ಬದಿಯಲ್ಲಿ ಹಾದುಹೋಗುವ ರೈತರ ಜಮೀನುಗಳಿಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು.
ರೈತರ ಜಮೀನು ಒತ್ತುವರಿ ಮಾಡಿದ ಅಧಿಕಾರಿಗಳ ಬೇಜವಾಬ್ದಾರಿತನ ಆಡಳಿತವು ರೈತರಿಗೆ ಯಾವುದೇ ನೋಟಿಸ್ ಜಾರಿ ಮಾಡದೆ ಭೂಮಿ ಸ್ವಾಧೀನ ಪಡಿಸಿಕೊಂಡು ರಸ್ತೆ ಅಭಿವೃದ್ಧಿ ಹೆಸರಿನಲ್ಲಿ ರೈತರಿಗೆ ಪರಿಹಾರ ನೀಡದೆ ರೈತರ ಬದುಕಿಗೆ ಬೆಂಕಿ ಇಡುವ ಮೂಲಕ ಅಧಿಕಾರ ನಡೆಸುತ್ತಿದ್ದಾರೆ ಎಂದು ದಲಿತ ಸಂಘಟನೆ ಸಮತಾವಾದ ಬಣದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದೇವರಾಜ್ ಸಂತೆಕಲ್ಲೂರ ಇವರು ಬಲವಾಗಿ ಖಂಡಿಸಿದ್ದಾರೆ.
ಲಿಂಗಸುಗೂರುನಿಂದ ಮುದ್ದಬಾಳ ಕ್ರಾಸ್‌ವರೆಗೆ ಟೆಂಡರ್ ಪ್ರಕಾರ ೩೦ ಮೀಟರ್ ರಸ್ತೆ ಅಗಲೀಕರಣ ಮಾಡಲಾಗುತ್ತದೆ ಆದರೆ ಭೂಮಿ ಕಳೆದುಕೊಳ್ಳುವ ರೈತರಿಗೆ ಪರಿಹಾರ ನೀಡದೆ ರೈತರಿಗೆ ವಂಚಿಸಲಾಗುತ್ತಿದೆ ಹಾಗೂ ಹೆದ್ದಾರಿ ಪ್ರಾಧಿಕಾರ ಅಧಿಕಾರಿಗಳು ರೈತರಿಗೆ ಸಮರ್ಪಕವಾಗಿ ಮಾಹಿತಿ ಕೂಡ ನೀಡುತ್ತಿಲ್ಲವೆಂದು ದಲಿತ ಸಂಘಟನೆ ಎನ್ ಮೂರ್ತಿ ಬಣದ ವಿದ್ಯಾರ್ಥಿ ಘಟಕದ ಅಧ್ಯಕ್ಷ ಯಲ್ಲಾಲಿಂಗ ಕುಣಿಕೆಲ್ಲೂರ ಇವರು ಅಧಿಕಾರಿಗಳ ಆಟಾಟೊಪಕ್ಕೆ ಕೆಂಡಾಮಂಡಲ ವಾಗಿ ಆರೋಪಿಸಿದರು.
ಈ ರಸ್ತೆ ಕಾಮಗಾರಿಯಿಂಧ ನೂರಾರು ಸಣ್ಣ ರೈತರು ಅತಿ ಸಣ್ಣ ರೈತರ ಭೂಮಿ ಕಬಳಿಕೆ ಯಾಗುತ್ತಿದೆ ಎಂದು ರಸ್ತೆ ಬದಿಯಲ್ಲಿ ಇರುವ ಜಮೀನು ಕಳೆದುಕೊಳ್ಳುವ ರೈತರು ತಹಶೀಲ್ದಾರ್ ರವರಿಗೆ ದೂರಿದರು.
ರಸ್ತೆ ಕಾಮಗಾರಿಯಲ್ಲಿ ನಿಯಮ ಪಾಲನೆ ಯಾಗುತ್ತಿಲ್ಲ ಹಾಗೂ ಮುಂದಿನ ದಿನಗಳಲ್ಲಿ ಏನಾದರೂ ರೈತರಿಗೆ ಪರಿಹಾರ ನೀಡದೆ ಇದ್ದರೆ ಹೋರಾಟ ನಡೆಸಲಾಗುವುದು ಎಂದು ತಹಶೀಲ್ದಾರ್ ಮೂಲಕ ರೈತರು ಎಚ್ಚರಿಕೆ ನೀಡಿದರು.