ರಾಜ್ಯ ಸಾರಿಗೆ ನೌಕರರಿಂದ ಕಪ್ಪು ಪಟ್ಟಿ ಚಳುವಳಿ

ಮೈಸೂರು,ಏ.1:- ಸಾರಿಗೆ ನೌಕರರನ್ನು 6ನೇ ವೇತನ ಆಯೋಗದ ಅಡಿ ತರಬೇಕು ಎಂದು ಒತ್ತಾಯಿಸಿ ಇಂದಿನಿಂದ ಏಪ್ರೀಲ್ 6ರವರೆಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟದ ವತಿಯಿಂದ ಕಪ್ಪು ಪಟ್ಟಿ ಚಳವಳಿ ಹಮ್ಮಿಕೊಳ್ಳಲಾಗಿದ್ದು, ಸಾರಿಗೆ ನೌಕರರು ತೋಳಿಗೆ ಕಪ್ಪು ಪಟ್ಟಿ ಧರಿಸಿ ಕರ್ತವ್ಯ ನಿರ್ವಹಿಸುತ್ತಿರುವುದು ಕಂಡು ಬಂತು.
ಬೆಂಗಳೂರಿನಲ್ಲಿ ಕಳೆದೆರಡು ದಿನಗಳ ಹಿಂದೆ ಸುದ್ದಿಗೋಷ್ಠಿ ನಡೆಸಿದ ರಾಜ್ಯ ರಸ್ತೆ ಸಾರಿಗೆ ನೌಕರರ ಒಕ್ಕೂಟದ ಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ರಾಜ್ಯ ಸರ್ಕಾರ ಎಸ್ಮಾ ಜಾರಿಗೊಳಿಸಿದರೂ ನಾವು ಭಯ ಪಡುವುದಿಲ್ಲ. ಏಪ್ರಿಲ್ 7ರಿಂದ ಕರ್ನಾಟಕದಾದ್ಯಂತ ಬಸ್ ಸಂಚಾರ ಸ್ಥಗಿತವಾಗುವುದು ಖಂಡಿತ ಎಂದು ಎಚ್ಚರಿಕೆ ನೀಡಿದ್ದರು.
“ಏಪ್ರಿಲ್ 1 ರಿಂದ 6ರ ತನಕ ಸಾರಿಗೆ ಸಂಸ್ಥೆಗಳ ನೌಕರರು ಕೈಗೆ ಕಪ್ಪು ಪಟ್ಟಿ ಕಟ್ಟಿಕೊಂಡು ಕೆಲಸ ಮಾಡಲಿದ್ದಾರೆ ಎಂದಿದ್ದರು. ಅದರಂತೆ ಇಂದು ಸಾರಿಗೆ ನೌಕರರು ಕಪ್ಪು ಪಟ್ಟಿ ಧರಿಸಿ ಕಾರ್ಯನಿರ್ವಹಿಸುತ್ತಿದ್ದಾರೆ. ಏಪ್ರಿಲ್ 2ರಂದು ಸಾರ್ವಜನಿಕ ಪ್ರದೇಶಗಳಲ್ಲಿ ಕಾಫಿ, ಟೀ, ಬಜ್ಜಿ, ಬೋಂಡಾಗಳನ್ನು ಮಾರುವ ಮೂಲಕ ಸಾರ್ವಜನಿಕರು ಮತ್ತು ಸರ್ಕಾರದ ಗಮನ ಸೆಳೆಯಲಿದ್ದಾರೆ’’ ಎಂದು ಹೇಳಿದ್ದು, ನಾಳೆ ಯಾವ ರೀತಿಯಲ್ಲಿ ಕಾರ್ಯನಿರ್ವಹಿಸಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.
ಸಾರಿಗೆ ಇಲಾಖೆ ಇಂದು ಮತ್ತೊಂದು ಸುತ್ತಿನ ಮಾತುಕತೆಗೆ ಆಹ್ವಾನಿಸಿದ್ದು, ಅಂದು ನಮ್ಮ ಬೇಡಿಕೆಗಳನ್ನು ಈಡೇರಿಸಿದರೆ ನಾವು ಮುಷ್ಕರವನ್ನು ಕೈಬಿಡಲು ಸಿದ್ಧ’’ ಎಂದು ಚಳವಳಿಯ ನೇತೃತ್ವವಹಿಸಿದವರು ತಿಳಿಸಿದ್ದು, ಸಾರಿಗೆ ನೌಕರರನ್ನು 6ನೇ ವೇತನ ಆಯೋಗದ ಅಡಿ ತರಬೇಕು ಎಂಬುದು ನಮ್ಮ ಬೇಡಿಕೆಯಾಗಿದೆ. ಇದರಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಮೈಸೂರು ನಗರ ಮತ್ತು ಗ್ರಾಮಾಂತರ ಬಸ್ ನಿಲ್ದಾಣಗಳಲ್ಲಿ ಕಪ್ಪು ಪಟ್ಟಿ ಧರಿಸಿ ಕರ್ತವ್ಯ ನಿರ್ವಹಿಸುತ್ತಿರುವುದು ಕಂಡು ಬಂತು.