ರಾಜ್ಯ ಸರ್ಕಾರ ಶಿಕ್ಷಣದಲ್ಲಿ ಉತ್ತರ ಕರ್ನಾಟಕ ಭಾಗಕ್ಕೆ ತಾರತಮ್ಯ

ರಾಯಚೂರು.ಜ.೦೨- ಶೈಕ್ಷಣಿಕ ವರ್ಷದಲ್ಲಿ ಹೊಸದಾಗಿ ೯ ಮತ್ತು ೧೦ ನೇ ತರಗತಿ ಪ್ರಾರಂಭಿಸಲು ಸರ್ಕಾರ ಉತ್ತರ ಕರ್ನಾಟಕ ಭಾಗಕ್ಕೆ ತಾರತಮ್ಯ ಮಾಡುತ್ತಿದ್ದಾರೆಂದು ಹೈದ್ರಾಬಾದ್ ಕರ್ನಾಟಕ ಹೋರಾಟ ಸಮಿತಿಯ ರಾಜ್ಯ ಉಪಾಧ್ಯಕ್ಷ ರಜಾಕ್ ಉಸ್ತಾದ್ ಅವರು ಹೇಳಿದರು . ಅವರಿಂದು ಸುದ್ದಿಗಾರರೊಂದಿಗೆ ಮಾತನಾಡುತ್ತಾ , ರಾಜ್ಯ ಸರ್ಕಾರ ೨೦೨೦-೨೧ ನೇ ಶೈಕ್ಷಣಿಕ ಸಾಲಿನಲ್ಲಿ ಹೊಸದಾಗಿ ೯ ಮತ್ತು ೧೦ ನೇ ತರಗತಿ ಪ್ರಾರಂಭಿನಲು ಅಮಮತಿಗಾಗಿ ಕಳೆದ ವರ್ಷ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ತಿಳಿಸಲಾಗಿತ್ತು . ಅದರಂತೆ ನೂರಾರು ಖಾನಗಿ ಶಿಕ್ಷಣ ಸಂಸ್ಥೆಗಳು ಅನುಮತಿ ಕೋರಿ ಅರ್ಜಿ ಸಲ್ಲಿಸಿದ್ದಾರೆ . ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವನ್ನು ಲಾಕ್ ಡೌನ್ ಸಂದರ್ಭದಲ್ಲಿ ತಿಳಿಸಲಾಗಿತ್ತು . ಶಿಕ್ಷಣ ಸಂಸ್ಥೆಗಳು ಮೂಲಭೂತ ಸೌಕರ್ಯ ಕುರಿತು ಕೆಲವು ದಾಖಲೆಗಳನ್ನು ಸಲ್ಲಿಸಲು ಸಾಧ್ಯವಾಗದಿರುವುದರಿಂದ ಸಾರ್ವಜನಿಕ ಶಿಕ್ಷಣ ಇಲಾಖೆ ಪೂರ್ಣ ದಾಖಲೆ ಇಲ್ಲದಿರುವ ಶಿಕ್ಷಣ ಸಂಸ್ಥೆಗಳ ಅರ್ಜಿಗಳನ್ನು ತಿರಸ್ಕರಿಸಿತು . ಆದರೆ , ಈಗಾಗಲೇ ಉನ್ನತೀಕರಿಸಿದ ಶಾಲೆಗಳನ್ನು ನಡೆಸುತ್ತಿರುವ ಶಿಕ್ಷಣ ಸಂಸ್ಥೆಗಳು ಪ್ರಸ್ತುತ ಸಾಲಿನಲ್ಲಿ ೯ ನೇ ತರಗತಿಯಲ್ಲಿ ಮಕ್ಕಳ ಪ್ರವೇಶ ಪಡೆಯುವ ಅನಿವಾರ್ಯತೆ ಇರುವುದರಿಂದ ಸೂಕ್ತ ಸಂದರ್ಭದಲ್ಲಿ ನಿರ್ಣಯ ತೆಗೆದುಕೊಳ್ಳಲು ಸರ್ಕಾರ ವಿಫಲವಾಗಿದೆಂದು ಆರೋಪಿಸಿದರು . ಆದರೆ , ಇತ್ತೀಚಿಗೆ ಡಿಸೆಂಬರ್ ೨೨ ರಂದು ಯಾವ ಅಂಶಗಳ ಆಧಾರದಲ್ಲಿ ಶಿಕ್ಷಣ ಸಂಸ್ಥೆಗಳ ಅರ್ಜಿಗಳನ್ನು ತಿರಸ್ಕರಿಸಲಾಗಿದೆ ಸಂಸ್ಥೆಗಳ ಅರ್ಜಿಗಳನ್ನು ಮತ್ತೊಮ್ಮೆ ಆನ್ ಲೈನ್ ಮೂಲಕ ಸಲ್ಲಿಸಬಹುದು ಎಂದು ಆದೇಶ ನೀಡಿದೆ.
ಈ ಆದೇಶವನ್ನು ಕೇವಲ ಬೆಂಗಳೂರು ಮತ್ತು ಮೈಸೂರು ವಿಭಾಗಗಳಲ್ಲಿರುವ ಶಿಕ್ಷಣ ಸಂಸ್ಥೆಗಳು ಮಾತ್ರ ದಾಖಲೆಗಳನ್ನು ಸಲ್ಲಿಸಬಹುದು ಕಲ್ಬುರ್ಗಿ,ಬೆಳಗಾವಿ ವಿಭಾಗದ ಶಿಕ್ಷಣ ಸಂಸ್ಥೆಗಳಿಗೆ ಅವಕಾಶ ನೀಡಿರುವುದಿಲ್ಲ ಸರ್ಕಾರ ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ ಎಂದು ಮಲತಾಯಿ ಧೋರಣೆ ತೋರುತ್ತಿದೆ.
ಸರ್ಕಾರದ ಇಂತಹ ಧೋರಣೆಯಿಂದ ಉತ್ತರ ಕರ್ನಾಟಕದಲ್ಲಿ ಪ್ರತ್ಯೇಕ ರಾಜ್ಯದ ಮನಸ್ಥಿತಿಯಲ್ಲಿರುವ ಕೆಲವು ಸಂಘ-ಸಂಸ್ಥೆಗಳಿಗೆ ಆಹಾರವಾಗುತ್ತದೆ ಇದು ರಾಜ್ಯದ ಅಖಂಡತೆಗೆ ದಕ್ಕೆಯಾಗುತ್ತದೆ. ಸರ್ಕಾರ ಯಾವ ದುರುದ್ದೇಶದಿಂದ ಇಂತಹ ನಿರ್ಣಯ ಕೈಗೊಂಡಿದೆ ಎಂದು ರಾಜ್ಯದ ಜನತೆಗೆ ತಿಳಿಸಬೇಕು ಇದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರ ವೈಫಲ್ಯ ಮತ್ತು ಆಡಳಿತ ಕೈತಪ್ಪಿರುವುದಕ್ಕೆ ಸಾಕ್ಷಿ ಎಂದು ಹೇಳಬೇಕಾಗುತ್ತದೆ ಇಂತಹ ಬೇಜವಾಬ್ದಾರಿ ಆಡಳಿತಕ್ಕೆ ಕಾರಣವಾಗಿರುವ ಶಿಕ್ಷಣ ಸಚಿವರು ಕೂಡಲೇ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಶಿವಕುಮಾರ ಯಾದವ್, ಮೊಹಮ್ಮದ್ ರಫೀಕ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.