ರಾಜ್ಯ ಸರ್ಕಾರ ವಿರುದ್ಧ ಪ್ರತಿಭಟನೆ

ಸಂಜೆವಾಣಿ ವಾರ್ತೆ
ಪಿರಿಯಾಪಟ್ಟಣ: ಜೂ.21:- ತಾಲೂಕು ಬಿಜೆಪಿ ಘಟಕ ವತಿಯಿಂದ ಪೆಟ್ರೋಲ್ ಡೀಸೆಲ್ ಬೆಲೆ ಹೆಚ್ಚಿಸಿರುವ ರಾಜ್ಯ ಕಾಂಗ್ರೆಸ್ ಸರ್ಕಾರ ವಿರುದ್ಧ ಪ್ರತಿಭಟನೆ ನಡೆಸಿ ತಹಶೀಲ್ದಾರ್ ಅವರಿಗೆ ಮನವಿ ನೀಡಲಾಯಿತು.
ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಬಿಜೆಪಿ ತಾಲೂಕು ಘಟಕ ಅಧ್ಯಕ್ಷ ಕೊಪ್ಪ ರಾಜೇಂದ್ರ ನೇತೃತ್ವದಲ್ಲಿ ಮಾಜಿ ಶಾಸಕರಾದ ಎಚ್.ಸಿ ಬಸವರಾಜು ಹಾಗೂ ತಾಲೂಕು ಪದಾಧಿಕಾರಿಗಳು ಕೆಲ ಸಮಯ ರಸ್ತೆ ತಡೆ ನಡೆಸಿ ರಾಜ್ಯ ಸರ್ಕಾರ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭ ಮಾಜಿ ಶಾಸಕರಾದ ಹೆಚ್.ಸಿ ಬಸವರಾಜ್ ಅವರು ಮಾತನಾಡಿ ಸರ್ಕಾರವು ಬಿಟ್ಟಿ ಭಾಗ್ಯಗಳನ್ನು ನೀಡುವ ಸಲುವಾಗಿ ನೋಂದಣಿ ಶುಲ್ಕ, ಮಧ್ಯದ ದರ, ಭೂ ದಾಖಲಾತಿಗಳನ್ನು ಪಡೆಯುವ ದರ ಸೇರಿದಂತೆ ವಿವಿಧ ದರಗಳನ್ನು ಹೆಚ್ಚಿಸಿ ಜನರ ಶೋಷಣೆ ಮಾಡುತ್ತಿದ್ದು ಇದೀಗ ತೈಲ ದರಗಳನ್ನು ಹೆಚ್ಚಿಸುವ ಮೂಲಕ ಜನ ವಿರೋಧಿ ಧೋರಣೆಯನ್ನು ತೋರುತ್ತಿದೆ ಕೂಡಲೇ ಎಲ್ಲಾ ದರಗಳನ್ನು ಇಳಿಕೆ ಮಾಡಬೇಕು ಇಲ್ಲದಿದ್ದರೆ ರಾಜೀನಾಮೆ ಕೊಟ್ಟು ಅಧಿಕಾರದಿಂದ ಕೆಳಗಿಳಿಯಬೇಕು ಎಂದು ಅಗ್ರಹಿಸಿದರು.
ತಾಲೂಕು ಬಿಜೆಪಿ ಘಟಕ ಅಧ್ಯಕ್ಷ ಕೊಪ್ಪ ರಾಜೇಂದ್ರ ಅವರು ಮಾತನಾಡಿ ರಾಜ್ಯ ಸರ್ಕಾರ ತನ್ನ ಉಳಿವಿಗಾಗಿ ಭ್ರಷ್ಟಾಚಾರ ಹಾದಿ ಹಿಡಿದಿದ್ದು ತೈಲಬೆಲೆ ಏರಿಕೆಯಿಂದ ಸಾರ್ವಜನಿಕರು ಜೀವನ ನಡೆಸುವುದೇ ಕಷ್ಟವಾಗಲಿದೆ, ಗ್ಯಾರಂಟಿ ಭಾಗ್ಯಗಳನ್ನು ನೀಡುವ ಮೂಲಕ ರಾಜ್ಯದಲ್ಲಿ ಅಭಿವೃದ್ಧಿ ಕೆಲಸ ಸಂಪೂರ್ಣ ಸ್ಥಗಿತಗೊಂಡಿವೆ ಎಂದು ಆರೋಪಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ತೈಲ ಸೇರಿದಂತೆ ಅಗತ್ಯ ಪದಾರ್ಥಗಳ ಬೆಲೆ ಇಳಿಕೆಯ ಕ್ರಮ ಕೈಗೊಳ್ಳಬೇಕು ಇಲ್ಲದಿದ್ದಲ್ಲಿ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಲಿ ಎಂದರು.
ಈ ಸಂದರ್ಭ ಬಿಜೆಪಿ ಮುಖಂಡರಾದ ಎಂ.ಎಂ ರಾಜೇಗೌಡ, ಆರ್.ಟಿ ಸತೀಶ್ ಮತ್ತಿತರಿದ್ದರು.