ರಾಜ್ಯ ಸರ್ಕಾರ ವಜಾಗೊಳಿಸಿ ರಾಜ್ಯಪಾಲರಿಗೆ ಕಾಂಗ್ರೆಸ್ ಆಗ್ರಹ

ಬೆಂಗಳೂರು,ನ.೨೫- ರಾಜ್ಯದಲ್ಲಿ ಅಧಿಕಾರ ಸೂತ್ರ ಹಿಡಿದಿರುವ ಬಿಜೆಪಿ ಸರ್ಕಾರ ಕಮೀಷನ್ ಸರ್ಕಾರವಾಗಿದ್ದು, ಭ್ರಷ್ಟಾಚಾರ ಮಿತಿಮೀರಿರುವುದರಿಂದ, ಈ ಸರ್ಕಾರವನ್ನು ವಜಾ ಮಾಡುವಂತೆ ಕಾಂಗ್ರೆಸ್ ಪಕ್ಷದ ನಾಯಕರ ನಿಯೋಗ ಇಂದು ರಾಜ್ಯಪಾಲರಿಗೆ ಮನವಿ ಸಲ್ಲಿಸಲಿದೆ.
ಕಾಂಗ್ರೆಸ್ ನಾಯಕರ ನಿಯೋಗ ಇಂದು ರಾತ್ರಿ ೭.೩೦ಕ್ಕೆ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್‌ರನ್ನು ಭೇಟಿ ಮಾಡಿ ಭ್ರಷ್ಟಾಚಾರದಲ್ಲಿ ಮುಳುಗಿರುವ ಈ ಸರ್ಕಾರವನ್ನು ವಜಾ ಮಾಡುವಂತೆ ಆಗ್ರಹಿಸಲಿದ್ದಾರೆ.
ರಾಜ್ಯದ ಕಾಮಗಾರಿಗಳ ಟೆಂಡರ್ ಪಡೆಯಲು ಶೇ. ೪೦ ರಷ್ಟು ಕಮೀಷನ್ ಪಡೆಯಲಾಗುತ್ತಿದೆ ಎಂದು ಗುತ್ತಿಗೆದಾರರ ಸಂಘ ಪ್ರಧಾನಿ ನರೇಂದ್ರ ಮೋದಿ ಮತ್ತು ರಾಜ್ಯಪಾಲರಿಗೆ ಬರೆದಿರುವ ಪತ್ರ ಆಧಾರಿಸಿ, ಇಂದು ರಾಜ್ಯಪಾಲರನ್ನು ಭೇಟಿ ಮಾಡಲಿರುವ ರಾಜ್ಯ ಕಾಂಗ್ರೆಸ್ ನಾಯಕರ ನಿಯೋಗ ಈ ಸರ್ಕಾರವನ್ನು ವಜಾ ಮಾಡುವಂತೆ ಒತ್ತಾಯಿಸಲಿದೆ.
ರಾಜ್ಯದಲ್ಲಿ ಭ್ರಷ್ಟಾಚಾರ ಹೆಚ್ಚಾಗಿದ್ದು, ಆಡಳಿತ ಪಕ್ಷ ಹಣ ಲೂಟಿ ಮಾಡುತ್ತಿದೆ. ಈ ಬಗ್ಗೆ ಪ್ರಧಾನಿಗಳಿಗೂ ಗುತ್ತಿಗೆದಾರರೇ ದೂರು ನೀಡಿದ್ದಾರೆ. ಹಾಗಾಗಿ, ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಈ ಸರ್ಕಾರವನ್ನು ವಜಾ ಮಾಡಿ ಎಂದು ಕಾಂಗ್ರೆಸ್ ನಾಯಕರು ಒತ್ತಾಯ ಪೂರ್ವಕ ಮನವಿಯನ್ನು ರಾಜ್ಯಪಾಲರಿಗೆ ಇಂದು ಸಲ್ಲಿಸುವರು.
ರಾಜ್ಯದಲ್ಲಿ ಭಾರಿ ಮಳೆಯಾಗಿ ಸಾಕಷ್ಟು ಅನಾಹುತಗಳಾಗಿವೆ. ರೈತರು ಸಂಕಷ್ಟದಲ್ಲಿದ್ದಾರೆ. ಬೆಳೆ ಹಾನಿಯಾಗಿದೆ. ಸರ್ಕಾರ ಮಾತ್ರ ಪರಿಹಾರ ಕಾರ್ಯಗಳನ್ನು ಕೈಗೊಳ್ಳುತ್ತಿಲ್ಲ. ಜನ ಸ್ವರಾಜ್ ಯಾತ್ರೆ, ವಿಧಾನ ಪರಿಷತ್ ಚುನಾವಣೆಯ ಪ್ರಚಾರದಲ್ಲಿ ಆಡಳಿತ ನಡೆಸುವರು ಮುಳುಗಿದ್ದಾರೆ. ಈ ಸರ್ಕಾರ ಜನಪರವಾಗಿಲ್ಲ ಎಂದು ರಾಜ್ಯ ಕಾಂಗ್ರೆಸ್ ನಾಯಕರು ರಾಜ್ಯಪಾಲರಿಗೆ ದೂರು ಸಲ್ಲಿಸುವರು.
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ವಿಧಾನ ಪರಿಷತ್‌ನ ವಿಪಕ್ಷ ನಾಯಕ ಎಸ್.ಆರ್. ಪಾಟೀಲ್ ಸೇರಿದಂತೆ ಕಾಂಗ್ರೆಸ್‌ನ ಪ್ರಮುಖ ನಾಯಕರುಗಳು ರಾಜ್ಯಪಾಲರನ್ನು ಇಂದು ರಾತ್ರಿ ಭೇಟಿ ಮಾಡಿ ತಮ್ಮ ಅಹವಾಲು ಸಲ್ಲಿಸುವರು.