ರಾಜ್ಯ ಸರ್ಕಾರ ಭದ್ರವಾಗಿದೆ: ಡಾ.ಎಚ್.ಸಿ.ಮಹದೇವಪ್ಪ

ಸಂಜೆವಾಣಿ ನ್ಯೂಸ್
ಮೈಸೂರು: ಆ.27:- ರಾಜ್ಯ ಸರ್ಕಾರ ಭದ್ರವಾಗಿದೆ. ಯಾರನ್ನೂ ಅಲ್ಲಾಡಿಸಲು ಸಾಧ್ಯವಿಲ್ಲ. ಎಲ್ಲರೂ ಬದ್ದತೆಯಿಂದ ಇದ್ದಾರೆ. ಇದರಿಂದ ಬಿಜೆಪಿಯವರು ಕಂಗಾಲಾಗಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಟಾಂಗ್ ಕೊಟ್ಟರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಮಿತ್ ಶಾ ಜಗದೀಶ್ ಶೆಟ್ಟರ್ ಅವರಿಗೆ ಕರೆ ಮಾಡಿದ ವಿಚಾರಕ್ಕೆ ಪ್ರತಿಕ್ರಿಯಿಸಿ, ಕಾಂಗ್ರೆಸ್ ಗೆಲುವು ಬಿಜೆಪಿಗೆ ಮೈ ಪರಚಿಕೊಂಡಂತೆ ಆಗಿದೆ. ಯಾರು ಯಾರಿಗೆ ಕರೆ ಮಾಡಿ ಮಾತನಾಡಿದರು ಎನ್ನುವುದು ನಮ್ಮ ಆದ್ಯತೆ ಅಲ್ಲ. ಯಾರು ಯಾರೊಂದಿಗೆ ಬೇಕಾದರೂ ಮಾತನಾಡಲಿ. ಯಾರು ಯಾರಿಗೆ ಕರೆ ಮಾಡಿದರೂ ತಲೆಕೆಡಿಸಿಕೊಳ್ಳುವುದಿಲ್ಲ. ಅಮಿತ್ ಶಾ ಬೇರೆ ರಾಜ್ಯದಂತೆ ರಣತಂತ್ರ ಮಾಡಲು ಎಲ್ಲಾ ಕಾಲದಲ್ಲೂ ಎಲ್ಲವೂ ನಡೆಯುವುದಿಲ್ಲ. ಪ್ರತಿದಿನವೂ ಭಾನುವಾರವಲ್ಲ ಎಂದರು.
ಕಾಂಗ್ರೆಸ್ ಶಕ್ತಿ ಪ್ರದರ್ಶನವಲ್ಲ:
ಗೃಹಲಕ್ಷ್ಮಿ ಯೋಜನೆ ಅನುಷ್ಠಾನ ಕಾಂಗ್ರೆಸ್ ಶಕ್ತಿ ಪ್ರದರ್ಶನವಲ್ಲ. ರಾಹುಲ್ ಗಾಂಧಿ ಬರುತ್ತಿರುವುದು ರಾಜಕೀಯ ಉದ್ದೇಶವಲ್ಲ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡಿದ್ದು ರಾಹುಲ್ ಗಾಂಧಿ, ಪ್ರಿಯಾಂಕ ಗಾಂಧಿ. ಅವರ ಸಮ್ಮುಖದಲ್ಲೇ ಅನುಷ್ಠಾನ ಮಾಡುವ ಉದ್ದೇಶದಿಂದ ಅವರನ್ನು ಕರೆ ತರುತ್ತಿದ್ದೇವೆ ಎಂದರು.
ಅಮಿತ್ ಶಾ ಜಗದೀಶ್ ಶೆಟ್ಟರ್ಗೆ ಕರೆ ಮಾಡಿರುವ ವಿಚಾರದ ಕುರಿತು ಪ್ರತಿಕ್ರಿಯೆ ನೀಡಲು ನಿರಾಕರಿಸಿದರು. ನಾನು ಗೃಹ ಲಕ್ಷ್ಮಿ ಯೋಜನೆ ಅನುಷ್ಟಾನ ಕೆಲಸದಲ್ಲಿದ್ದೇನೆ. ಬೆಂಗಳೂರು ಬಿಟ್ಟು ಮೈಸೂರಿನಲ್ಲಿ ಕೆಲಸ ಮಾಡುತ್ತಿದ್ದೇನೆ. ಯಾರು ಯಾರಿಗೆ ಕರೆ ಮಾಡಿದರು, ಯಾಕೆ ಕರೆ ಮಾಡಿದರು ಎಂಬ ಊಹಾಪೆÇ?ಹದ ವಿಚಾರಗಳಿಗೆ ಪ್ರತಿಕ್ರಿಯೆ ನೀಡುವುದಿಲ್ಲ ಎಂದರು.
ಬಿಜೆಪಿ ನಾಯಕರು ಬೀದಿಗೆ ಬಂದಿದ್ದಾರೆ ಎಂಬ ಕಾಂಗ್ರೆಸ್ ಟ್ವೀಟ್ ಕುರಿತು ಪ್ರತಿಕ್ರಿಯಿಸಿ, ರಾಜ್ಯದಲ್ಲಿ ಬಿಜೆಪಿ ಕಾರ್ಯಕರ್ತರು ಅವರನ್ನು ನಾಯಕರು ಎಂದು ಒಪ್ಪಿಕೊಂಡಿದ್ದಾರೆ. ಯಾವ ಕಾರಣಕ್ಕೆ ಅವರನ್ನು ಅಲ್ಲಿ ನಿಲ್ಲಿಸಿದ್ದಾರೆ ಗೊತ್ತಿಲ್ಲ. ತಿಳಿಯದೇ ಮಾತನಾಡುವುದು ತಪ್ಪು ಎಂದರು.
ಮೋಸ ಮಾಡಿದ್ದು ಗೊತ್ತಿದೆ: ಬಿಜೆಪಿ ಜಗದೀಶ್ ಶೆಟ್ಟರ್ ಅವರಿಗೆ ಯಾವ ರೀತಿ ಮೋಸ ಮಾಡಿತು ಎಂಬುದು ಇಡೀ ರಾಜ್ಯಕ್ಕೆ ಗೊತ್ತಿದೆ ಎಂದು ಶಾಸಕ ಕೆ.ಹರೀಶ್ ಗೌಡ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಗದೀಶ್ ಶೆಟ್ಟರ್ಗೆ ಅಮಿತ್ ಶಾ ಕರೆ ಮಾಡಿರುವ ಕುರಿತು ಪ್ರತಿಕ್ರಿಯಿಸಿ, ಅಮಿತ್ ಶಾ ಕರೆ ಮಾಡಿದ ತಕ್ಷಣ ಜಗದೀಶ್ ಶೆಟ್ಟರ್ ಮತ್ತೆ ಬಿಜೆಪಿಗೆ ಹೋಗುವುದಿಲ್ಲ. ಕಾಂಗ್ರೆಸ್ ಅವರಿಗೆ ಸೂಕ್ತ ಸ್ಥಾನಮಾನ ಕೊಟ್ಟಿದೆ. ಅವರು ಎಲ್ಲವನ್ನು ಅಳೆದು ತೂಗಿ ಕಾಂಗ್ರೆಸ್ ಪಕ್ಷಕ್ಕೆ ಬಂದವರು. ಇನ್ನು ಸಾಕಷ್ಟು ಜನ ಬಿಜೆಪಿ, ಜೆಡಿಎಸ್‍ನಿಂದ ನಮ್ಮ ಪಕ್ಷಕ್ಕೆ ಬರಲು ತುದಿಗಾಲಲ್ಲಿ ನಿಂತಿದ್ದಾರೆ. ನಮ್ಮ ಮುಂದೆ ಇರುವುದು ಗ್ಯಾರಂಟಿ ಯೋಜನೆ ಹಾಗೂ ಲೋಕಸಭಾ ಚುನಾವಣೆ. ಈ ಬಾರಿ ರಾಜ್ಯದಲ್ಲಿ 20 ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲ್ಲಲಿದೆ ಎಂದರು.
ಮೈಸೂರು ಕೊಡಗು ಕ್ಷೇತ್ರವನ್ನು ಖಂಡಿತವಾಗಿ ಈ ಬಾರಿ ನಾವು ಗೆಲ್ಲುತ್ತೇವೆ. ಇದರಿಂದ ನಮ್ಮನ್ನು ವಿಚಲಿತ ಮಾಡುವ ಷಡ್ಯಂತ್ರ ಬಿಜೆಪಿ ಮಾಡುತ್ತಿದೆ. ಆದರೆ, ಅವರ ಷಡ್ಯಂತ್ರಗಳಿಗೆ ನಾವು ವಿಚಲಿತರಾಗುವುದಿಲ್ಲ. ಇದಕ್ಕೆ ತಕ್ಕ ಉತ್ತರವನ್ನು ಒಬ್ಬ ಸಾಮಾನ್ಯ ಕಾರ್ಯಕರ್ತ ಸಹಾ ನೀಡಲು ಸಮರ್ಥನಾಗಿದ್ದಾನೆ ಎಂದರು.