
ಅಥಣಿ :ಮಾ.6: ಯಾವುದೇ ಒಬ್ಬ ಮಹಾತ್ಮರ ಜಯಂತಿ ಆಚರಣೆ ಮಾಡುವ ಉದ್ದೇಶ ಅವರಲ್ಲಿನ ಸಾಮಾಜಿಕ ಕಳಕಳಿ, ಧರ್ಮದ ಬಗ್ಗೆ ನಿಷ್ಠೆ ಅಂತಹ ವಿಚಾರಗಳನ್ನ ನಾವು ಮತ್ತೆ ಮತ್ತೆ ಮೆಲಕು ಹಾಕುವ ಉದ್ದೇಶದಿಂದ ಜಯಂತಿ ಆಚರಣೆ ಮಾಡುತ್ತೇವೆ. ರಾಜ್ಯ ಸರ್ಕಾರ ಜಗದ್ಗುರು ರೇಣುಕಾಚಾರ್ಯ ಜಯಂತಿಯನ್ನು ಆಚರಣೆಗೆ ತಂದಿರುವುದು ಅತ್ಯಂತ ಸ್ವಾಗತಾರ್ಹವಾಗಿದೆಎಂದು ಎಂದು ಶೆಟ್ಟರಮಠದ ಶ್ರೀ ಮರುಳಸಿದ್ದ ಸ್ವಾಮೀಜಿ ಹೇಳಿದರು.
ಅವರು ರವಿವಾರ ಅಥಣಿ ತಾಲೂಕ ಆಡಳಿತ ಹಾಗೂ ತಾಲೂಕ ಜಂಗಮ ಸಮಾಜ ಅಭಿವೃದ್ಧಿ ಸಂಘದ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಜಗದ್ಗುರು ರೇಣುಕಾಚಾರ್ಯ ಜಯಂತಿ ಕಾರ್ಯಕ್ರಮದ ದಿವ್ಯ ಸಾನಿಧ್ಯವಹಿಸಿ ಮಾತನಾಡಿದರು. ಸಮಾಜ ಸುಧಾರಕರು, ಸಂತರು, ದಾರ್ಶನಿಕರು, ಪುಣ್ಯಪುರುಷರು ತೋರಿಸುವಂತಹ ದಾರಿಯಲ್ಲಿ ನಾವು ನೀವು ಹೋದರೆ, ಮಹನೀಯರ ಆದರ್ಶ ಮತ್ತು ತತ್ವಗಳನ್ನು ಪಾಲನೆ ಮಾಡಿದರೆ ಮಾನವನೂ ಮಹದೇವನಾಗುತ್ತಾನೆ ಎಂಬ ಕಲ್ಪನೆಯನ್ನು ರೇಣುಕಾಚಾರ್ಯರು ತಿಳಿಸಿದ್ದಾರೆ. ಅವರ ಜಯಂತಿ ಉತ್ಸವವನ್ನು ಸರ್ಕಾರ ಮಟ್ಟದಲ್ಲಿ ಆಚರಿಸುವ ಮೂಲಕ ಮಹಾತ್ಮರಿಗೆ ಗೌರವ ಸಲ್ಲಿಸುತ್ತಿರುವುದು ಸಂತಸದ ವಿಚಾರ ಎಂದು ಹೇಳಿದರು.
ಭಾವಚಿತ್ರಕ್ಕೆ ಪೂಜಿ ಸಲ್ಲಿಸಿ, ಸಸಿಗೆ ನೀರು ಎರೆಯುವದರ ಮೂಲಕ ಕಾರ್ಯಕ್ರಮವನ್ನ ಉದ್ಘಾಟಿಸಿದ ಉಪ ತಹಸೀಲ್ದಾರ ಎo.ವಿ ಬಿರಾದಾರ ಮಾತನಾಡಿ ಈ ವರ್ಷದಿಂದ ಸರಕಾರ ಜಯಂತಿ ಆಚರಣೆ ಮಾಡಲು ಆದೇಶ ಮಾಡಿದೆ. ಜಗದ್ಗುರು ರೇಣುಕಾಚಾರ್ಯರ ತತ್ವ, ಆದರ್ಶಗಳು ನಮ್ಮ ನಿಮ್ಮೆಲ್ಲರ ಬದುಕಿಗೆ ದಾರಿದೀಪವಾಗಿವೆ. ಮುಂದಿನ ವರ್ಷದಿಂದ ಅವರ ಜಯಂತಿ ಉತ್ಸವವನ್ನು ತಾಲೂಕಾ ಆಡಳಿತ ಮತ್ತು ಸಂಘಟನೆಯ ಸಹಯೋಗದಲ್ಲಿ ಅರ್ಥಪೂರ್ಣ ಹಾಗೂ ಅದ್ದೂರಿಯಾಗಿ ಆಚರಿಸೋಣ ಎಂದು ಹೇಳಿದರು.
ಹಿರಿಯ ಪತ್ರಕರ್ತ ಸಿ.ಎ.ಇಟ್ನಾಳಮಠ ಪ್ರಸ್ತಾವಿಕವಾಗಿ ಮಾತನಾಡಿ ಬಹಳ ವರ್ಷಗಳಿಂದ ರೇಣುಕಾಚಾರ್ಯರ ಜಯಂತಿಯನ್ನು ಆಚರಿಸಬೇಕೆಂದು ಸರಕಾರವನ್ನು ಒತ್ತಾಯಿಸಲಾಗಿತ್ತು. ಈ ವರ್ಷ ಮುಖ್ಯಮಂತ್ರಿ ಬಸವರಾಜ ಬೋಮ್ಮಾಯಿ ಅವರು ಸರ್ಕಾರ ಮಟ್ಟದಲ್ಲಿ ಜಯಂತಿ ಆಚರಣೆಗೆ ಆದೇಶ ಮಾಡಿರುವುದು ನಮ್ಮೆಲ್ಲರಿಗೆ ಖುಷಿ ತಂದಿದೆ. ಈ ಸಂದರ್ಭದಲ್ಲಿ ಜಂಗಮ ಸಮಾಜದ ಪರವಾಗಿ ರಾಜ್ಯ ಸರ್ಕಾರಕ್ಕೆ ಧನ್ಯವಾದ ಸಲ್ಲಿಸಿದ ಅವರು ಮುಂಬರುವ ವರ್ಷದಿಂದ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಕಡ್ಡಾಯವಾಗಿ ರೇಣುಕಾಚಾರ್ಯ ಜಯಂತಿಯನ್ನು ಆಚರಿಸುವಂತೆ ಸೂಚನೆ ನೀಡಬೇಕೆಂದು ತಾಲೂಕ ಆಡಳಿತವನ್ನು ಒತ್ತಾಯಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ತಾಲೂಕ ಜಂಗಮ ಸಮಾಜದ ಅಧ್ಯಕ್ಷ ಈರಯ್ಯಾ ಗುರಬಸಯ್ಯಾ ಜಗದಾಳಮಠ ಮಾತನಾಡಿ ಮಹಾತ್ಮರ ಜಯಂತೋತ್ಸವಗಳು ಕೇವಲ ಕಾಟಾಚಾರದ ಆಚರಣೆಯಾಗಬಾರದು. ಸಮಾಜ ಸುಧಾರಣೆಯಲ್ಲಿ ಮಹಾತ್ಮರ ಸಂದೇಶಗಳು ಇಂದಿನ ಜನಾಂಗಕ್ಕೆ ತಿಳಿಸಿಕೊಡುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನ ಹಮ್ಮಿಕೊಳ್ಳುವುದು ಅಗತ್ಯ ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಶರಣಯ್ಯಾ ವಸ್ತ್ರದಮಠ, ಶಿವಕುಮಾರ ತೆಲಸಂಗ, ಅಶೋಕ ಅವಟಿಮಠ, ಅಶೋಕ ಅಳ್ಳಿಮಟಿ, ಎಸ್.ಎಮ್.ಮಠಪತಿ, ಪುಟ್ಟು ಹಿರೇಮಠ, ರಾಜು ಹಿರೇಮಠ, ಬಸಯ್ಯಾ ಹಿರೇಮಠ ಸೇರಿದಂತೆ ಉಪಸ್ಥಿತರಿದ್ದರು.
ಕಡಕೋಳಮಠದ ವಿಜಯ ಹಿರೇಮಠ ಸ್ವಾಗತಿಸಿದರು. ಜಗದೀಶ ಹಿರೇಮಠ ಕಾರ್ಯಕ್ರಮ ನಿರೂಪಿಸಿದರು. ಸಂಗಮೇಶ ಕಲ್ಮಠ ವಂದಿಸಿದರು.