ರಾಜ್ಯ ಸರ್ಕಾರಿ ನೌಕರರ ಮುಷ್ಕರ ನಾಳೆಯಿಂದ

ಬೀದರ್: ಫೆ.28:ವೇತನ ಭತ್ಯೆ ಪರಿಷ್ಕರಣೆ ಹಾಗೂ ಹಳೆಯ ಪಿಂಚಣಿ ಯೋಜನೆ ಜಾರಿಗೊಳಿಸಲು ಒತ್ತಾಯಿಸಿ ರಾಜ್ಯ ಸರ್ಕಾರಿ ನೌಕರರ ಸಂಘವು ಮಾ. 1 ರಿಂದ ನಡೆಸಲಿರುವ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಜಿಲ್ಲೆಯ ಸರ್ಕಾರಿ ನೌಕರರು ಬೆಂಬಲಿಸಬೇಕು ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷ ರಾಜೇಂದ್ರಕುಮಾರ ಗಂದಗೆ ಮನವಿ ಮಾಡಿದ್ದಾರೆ.

ಎಲ್ಲ ಇಲಾಖೆಗಳ ನೌಕರರು ನ್ಯಾಯಯುತ ಬೇಡಿಕೆಗಳ ಈಡೇರಿಕೆಗಾಗಿ ಕರ್ತವ್ಯಕ್ಕೆ ಗೈರು ಹಾಜರಾಗುವ ಮೂಲಕ ಮುಷ್ಕರದಲ್ಲಿ ಪಾಲ್ಗೊಳ್ಳಬೇಕು ಎಂದು ಹೇಳಿದ್ದಾರೆ.

ಮುಷ್ಕರದ ಪ್ರಯುಕ್ತ ವಿವಿಧ ವೃಂದ ನೌಕರರ ಸಂಘಗಳ ಸಭೆ ನಡೆಸಲಾಗಿದೆ. ಎಲ್ಲ ಸಂಘಗಳ ಪ್ರಮುಖರು ಮುಷ್ಕರಕ್ಕೆ ಬೆಂಬಲ ಸೂಚಿಸಿದ್ದಾರೆ ಎಂದು ತಿಳಿಸಿದ್ದಾರೆ.

ನೌಕರರ ಬೇಡಿಕೆಗಳು ಈಡೇರುವವರೆಗೂ ಮುಷ್ಕರ ನಡೆಯಲಿದೆ ಎಂದು ಹೇಳಿದ್ದಾರೆ.

ಮುಷ್ಕರ ನಿಮಿತ್ತ ನಡೆದ ವಿವಿಧ ವೃಂದಗಳ ನೌಕರರ ಸಂಘಗಳ ಸಭೆಯಲ್ಲಿ ಪ್ರೌಢ ಶಾಲಾ ಸಹ ಶಿಕ್ಷಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಶೇಕ್ ಮಹೆಬೂಬ್ ಪಟೇಲ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಪ್ರಭುಲಿಂಗ ತೂಗಾವೆ, ಅನುದಾನಿತ ಪ್ರೌಢಶಾಲಾ ಶಿಕ್ಷಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ವಿಜಯಕುಮಾರ ಪಾಟೀಲ ಯರನಳ್ಳಿ, ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸಂಗಶೆಟ್ಟಿ ಹಲಬುರ್ಗೆ, ಪಿಡಿಒಗಳ ಸಂಘದ ಅಧ್ಯಕ್ಷ ಸಂತೋಷ ಪಾಟೀಲ, ನಗರಸಭೆ ನೌಕರರ ಸಂಘದ ಅಧ್ಯಕ್ಷ ಅನಿಲ್ ಚಲುವಾ, ಪಶು ವೈದ್ಯಕಿಯ ಇಲಾಖೆಯ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಡಾ. ಶಶಿಧರ, ಸರ್ವೇ ಇಲಾಖೆ ನೌಕರರ ಸಂಘದ ಅಧ್ಯಕ್ಷ ಪೀಟರ್, ಜೆಸ್ಕಾಂ ನೌಕರರ ಸಂಘದ ವೀರಣ್ಣ ಮುದಾಳೆ, ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದ ಅಧ್ಯಕ್ಷ ಓಂಕಾಂತ್ ಸೂರ್ಯವಂಶಿ, ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಗೌರವಾಧ್ಯಕ್ಷ ಬಸವರಾಜ ಜಕ್ಕಾ, ಕಾರ್ಯಾಧ್ಯಕ್ಷ ಡಾ. ರಾಜಕುಮಾರ ಹೊಸದೊಡ್ಡೆ, ಉಪಾಧ್ಯಕ್ಷ ಪಾಂಡುರಂಗ ಬೆಲ್ದಾರ್, ಪ್ರಧಾನ ಕಾರ್ಯದರ್ಶಿ ರಾಜಶೇಖರ ಮಂಗಲಗಿ, ಓಂಕಾರ ಮಲ್ಲಿಗೆ, ಅಬ್ದುಲ್ ಸತ್ತಾರ್, ರೂಪಾವತಿ, ಶಿವರಾಜ ಕಪಲಾಪುರೆ ಮೊದಲಾದವರು ಪಾಲ್ಗೊಂಡಿದ್ದರು.