ರಾಜ್ಯ ಸರ್ಕಾರವು ಕಾಂತರಾಜು ವರದಿಯನ್ನು ಜಾರಿಗೊಳಿಸಲಿ 

ಸಂಜೆವಾಣಿ ವಾರ್ತೆ

ದಾವಣಗೆರೆ, ಜ.26; ಜಾತಿ ಸಮೀಕ್ಷೆ ವೈಜ್ಞಾನಿಕವಾಗಿದ್ದರೂ ಕೆಲವರು ಅವೈಜ್ಞಾನಿಕವೆಂದು ಅಪಪ್ರಚಾರ ಮಾಡುತ್ತಿದ್ದು, ಯಾವುದೇ ಒತ್ತಡಗಳಿಗೂ ಮಣಿಯದೇ ರಾಜ್ಯ ಸರ್ಕಾರವು ಕಾಂತರಾಜು ವರದಿಯನ್ನು ಜಾರಿಗೊಳಿಸಲಿ ಎಂದು ನಾಯಕ ಸಮಾಜದ ಮುಖಂಡ ಹೊದಿಗೆರೆ ರಮೇಶ್ ಒತ್ತಾಯಿಸಿದ್ದಾರೆ.ನಗರದ ಛಲವಾದಿ ಮಹಾಸಭಾ ಸಮುದಾಯ ಭವನದಲ್ಲಿ ಗುರುವಾರ ಶೋಷಿತ ಸಮುದಾಯಗಳ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಜಾತಿಗಣತಿ ಬಗ್ಗೆ ಕೆಲವರು ವಿರೋಧಿಸುತ್ತಿರುವುದು ಸರಿಯಲ್ಲ. ಸರ್ಕಾರವು ತಕ್ಷಣವೇ ಜಾತಿಗಣತಿ ರದಿಯನ್ನು ಅಂಗೀಕರಿಸಿ, ಜಾರಿಗೊಳಿಸಬೇಕು ಎಂದರು.ನಮ್ಮ ಹಕ್ಕುಗಳ ರಕ್ಷಣೆಗಾಗಿ ಐಕ್ಯತೆಯಿಂದ ಹೋರಾಟ ನಡೆಸಬೇಕು. ಶೋಷಿತ ಸಮುದಾಯಗಳು ಜಾಗ್ರತರಾಗಬೇಕಾದ ಅನಿವಾರ್ಯತೆ ಇದೆ. ಶೋಷಿತ ಸಮುದಾಯಗಳು 8 ರು. ಮೌಲ್ಯವಾಗಿದ್ದರೂ, ಅದನ್ನು ಎರಡು ರೂಪಾಯಿಯೆಂಬ ದೃಷ್ಟಿಯಲ್ಲಿ ಕೆಲ ಸಮುದಾಯಗಳು ನೋಡುತ್ತಿವೆ. 8 ರು. ಮೌಲ್ಯದ ವಾಸ್ತವಾಂಶವು ಗೊತ್ತಾಗಬೇಕೆಂದರೆ, ವೈಜ್ಞಾನಿಕವಾಗಿ ಆಗಿರುವ ಜಾತಿಗಣತಿ ವರದಿ ಅಂಗೀಕರಿಸಿ, ಜಾರಿಗೊಳಿಸುವ ಕೆಲಸವನ್ನು ಸರ್ಕಾರ ಮಾಡಬೇಕು ಎಂದು ಅವರು ಆಗ್ರಹಿಸಿದರು.ಚಿತ್ರದುರ್ಗದಲ್ಲಿ ಜ.28ರಂದು ನಡೆಯುವ ಶೋಷಿತ ಸಮುದಾಯಗಳ ಜಾಗೃತಿ ಸಮಾವೇಳ ಒಂದು ಚಳವಳಿ ರೂಪದಲ್ಲಿ ಯಶಸ್ವಿಯಾಗಬೇಕು. ದಾವಣಗೆರೆ ಜಿಲ್ಲೆಯಿಂದ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಶೋಷಿತ ಹಿಂದುಳಿದ ಜಾತಿಗಳ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಸಮಾವೇಶದಲ್ಲಿ ಪಾಲ್ಗೊಳ್ಳಬೇಕು. ಈ ಮೂಲಕ ಅಹಿಂದ ವರ್ಗಗಳ ನಾಯಕ ಸಿದ್ದರಾಮಯ್ಯನವರ ಕೈಬಲಪಡಿಸಬೇಕು. ಈ ಮೂಲಕ ನಾವು ಸಂಘಟಿತರಾಗಬೇಕು ಎಂದು ಅವರು ಕರೆ ನೀಡಿದರು.