ರಾಜ್ಯ ಸರ್ಕಾರದ ರೈತ ವಿರೋಧಿ ನೀತಿ ಖಂಡಿಸಿ ಬಿಜೆಪಿ ಪ್ರತಿಭಟನೆ..

ಕೆ.ಆರ್.ಪೇಟೆ.ಸೆ.9: ಕಾವೇರಿ ಜಲ ವಿವಾದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು. ಕೃಷಿ ಪಂಪ್ ಸೆಟ್ಟುಗಳಿಗೆ ಜಾರಿಗೊಳಿಸಿರುವ ಅನಿಯಮಿತ ಲೋಡ್ ಶೆಡ್ಡಿಂಗ್ ವ್ಯವಸ್ಥೆಯನ್ನು ರದ್ದುಪಡಿಸಬೇಕು. ಕೆ.ಆರ್.ಪೇಟೆ ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸಬೇಕು. ಹಿಂದಿನ ಬಿಜೆಪಿ ಸರ್ಕಾರ ಜಾರಿಗೊಳಿಸಿದ್ದ ರೈತ ಪರವಾದ ಕಿಸಾನ್ ಸಮ್ಮಾನ್ ನಿಧಿ ಯೋಜನೆ, ರೈತ ವಿದ್ಯಾನಿಧಿ ಯೋಜನೆ, ಭೂ ಸಿರಿ ಯೋಜನೆ, ಶ್ರಮ ಶಕ್ತಿ ಯೋಜನೆ, ರೈತ ಸಂಪದ ಯೋಜನೆ, ಎ.ಪಿ.ಎಂ.ಸಿ ಕಾನೂನು, ಕೃಷಿ ಭೂಮಿ ಮಾರಾಟ ಕಾನೂನು, ಜಿಲ್ಲೆಗೊಂದು ಗೋಶಾಲೆ, ಕ್ಷೀರ ಸಂವೃದ್ದಿ ಸಹಕಾರ ಬ್ಯಾಂಕ್ ಯೋಜನೆಗಳನ್ನು ಮರು ಜಾರಿಗೊಳಿಸುವಂತೆ ತಾಲೂಕು ಬಿಜೆಪಿ ಮುಖಂಡರು ಮುಖ್ಯಮಂತ್ರಿಗಳನ್ನು ಒತ್ತಾಯಿಸಿದರು
ರಾಜ್ಯ ಸರ್ಕಾರದ ರೈತ ವಿರೋಧಿ ನೀತಿಯನ್ನು ಖಂಡಿಸಿ ಪಟ್ಟಣದ ತಾಲೂಕು ಆಡಳಿತ ಸೌಧದ ಮುಂದೆ ಪ್ರತಿಭಟನೆ ನಡೆಸಿದ ಬಿಜೆಪಿ ಮುಖಂಡರು ತಹಸೀಲ್ದಾರರ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಪತ್ರ ಅರ್ಪಿಸಿ ರಾಜ್ಯದ ರೈತ ಹಿತ ಕಾಪಾಡುವಂತೆ ಒತ್ತಾಯಿಸಿದರು.
ರಾಜ್ಯದಲ್ಲಿ ತೀವ್ರ ಬರಗಾಲ ಕಾಣಿಸಿಕೊಂಡಿದೆ. ಮಳೆ ಅಭಾವದಿಂದ ಕಾವೇರಿ ಕೊಳ್ಳದ ಎಲ್ಲಾ ಜಲಾಶಯಗಳಲ್ಲಿ ನೀರಿನ ಸಂಗ್ರಹ ಕಡಿಮೆಯಾಗಿದೆ. ಅಲ್ಪ ಸ್ವಲ್ಪ ಬಿದ್ದ ಮಳೆಯಿಂದ ಕಾವೇರಿ ಜಲಾನಯನ ಪ್ರದೇಶದ ಕೆ.ಆರ್.ಎಸ್, ಹೇಮಾವತಿ, ಹಾರಂಗಿ ಮತ್ತು ಕಬಿನಿ ಜಲಾಶಯಗಳಿಗೆ ಒಂದಷ್ಟು ನೀರು ಹರಿದು ಬಂದರೂ ರಾಜ್ಯದ ಹಿತವನ್ನು ಕಡೆಗಣಿಸಿ ತಮಿಳು ನಾಡಿಗೆ ನೀರು ಬಿಟ್ಟಿರುವ ಪರಿಣಾಮ ರೈತರು ಬೆಳೆ ಬೆಳೆಯುವ ಕನಸು ಕಮರಿ ಹೋಗಿದೆ. ಅಳಿದುಳಿದ ಕಬ್ಬು ಮತ್ತಿತರ ವಾಣಿಜ್ಯ ಬೆಳೆಗಳನ್ನು ಸಂರಕ್ಷಿಕೊಳ್ಳಲಾಗದ ಚಿಂತೆಯಲ್ಲಿ ರೈತರು ಮುಳುಗಿದ್ದಾರೆ. ರಾಜ್ಯ ಸರ್ಕಾರ ಹಗಲು ನಿರಂತರ 7 ಘಂಟೆ ಮತ್ತು ರಾತ್ರಿ ವೇಳೆ ನಿರಂತ 04 ಘಂಟೆಗಳ ಕಾಲ ಕೃಷಿ ಪಂಪ್ ಸೆಟ್ಟುಗಳಿಗೆ ಪೂರೈಕೆ ಮಾಡುತ್ತಿದ್ದ ವಿದ್ಯುತ್ ಪೂರೈಕೆಯನ್ನು ಕಡಿತಗೊಳಿಸಿ ಇದೀಗ ಹಗಲು 03 ಘಂಟೆ ಮತ್ತು ರಾತ್ರಿ ಒಂದು ಘಂಟೆಗಳ ಕಾಲ ವಿದ್ಯುತ್ ಪೂರೈಕೆ ಮಾಡುತ್ತಿದೆ. ಅನಿಯಮಿತ ಲೋಡ್ ಶೆಡ್ಡಿಂಗ್ ವ್ಯವಸ್ಥೆಯಿಂದ ಅಂತರ್ಜಲ ಆಧಾರಿತ ಕೃಷಿ ವ್ಯವಸ್ಥೆಯ ಮೇಲೆ ಮಾರಕ ಪರಿಣಾಮ ಉಂಟಾಗಿದೆ. ರೈತರ ಹಿತದೃಷ್ಠಿಯಿಂದ ಅನಿಯಮಿತ ಲೋಡ್ ಶೆಡ್ಡಿಂಗ್ ವ್ಯವಸ್ಥೆಯನ್ನು ರದ್ದುಗೊಳಿಸಿ ಹಿಂದಿನಂತೆ ಹಗಲು 07 ಘಂಟೆ ಮತ್ತು ರಾತ್ರಿ 04 ಘಂಟೆಗಳ ಕಾಲ ರೈತರಿಗೆ ನಿರಂತರ ವಿದ್ಯುತ್ ಪೂರೈಕೆ ಮಾಡುವಂತೆ ತಾಲೂಕು ಬಿಜೆಪಿ ಮುಖಂಡರು ಒತ್ತಾಯಿಸಿದ್ದಾರೆ.
ಹಿಂದಿನ ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ಎಲ್ಲಾ ರೈತಪರ ಯೋಜನೆಗಳನ್ನೂ ಮರು ಜಾರಿಗೊಳಿಸಬೇಕು. ಬರಪರಿಹಾರ ಯೋಜನೆಗಳನ್ನು ಜಾರಿಗೆ ತರಬೇಕು. ಬರಗಾಲದ ದುಷ್ಪರಿಣಾಮ ಹೈನುಗಾರಿಕೆಯ ಮೇಲಾಗದಂತೆ ರೈತರಿಗೆ ಮೇವು ಪೂರೈಕೆ ಕ್ರಮ ವಹಿಸಬೇಕು. ಮೇವಿನ ಅಭಾವದಿಂದ ಹಸುಗಳ ರಕ್ಷಣೆಗಾಗಿ ಗೋಶಾಲೆಗಳನ್ನು ತೆರಯುವಂತೆ ಬಿಜೆಪಿ ಮುಖಂಡರು ಮುಖ್ಯಮಂತ್ರಿಗಳನ್ನು ಒತ್ತಾಯಿಸಿದ್ದಾರೆ.